ರೊಹಿಂಗ್ಯಾರನ್ನು ಬಂಗಾಳ ಕೊಲ್ಲಿಯ ದ್ವೀಪಕ್ಕೆ ಸಾಗಿಸಿದ ಬಾಂಗ್ಲಾದೇಶ

Update: 2020-12-04 17:15 GMT
ಸಾಂದರ್ಭಿಕ ಚಿತ್ರ

ಢಾಕಾ (ಬಾಂಗ್ಲಾದೇಶ), ಡಿ. 4: 1,600ಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರನ್ನು ಶುಕ್ರವಾರ ಬಾಂಗ್ಲಾದೇಶದ ಚಿತ್ತಗಾಂಗ್‌ನಿಂದ ಬಂಗಾಳ ಕೊಲ್ಲಿಯ ಮಧ್ಯದಲ್ಲಿರುವ ಭಾಸನ್ ಚಾರ್ ದ್ವೀಪಕ್ಕೆ ಕಳುಹಿಸಲಾಗಿದೆ ಎಂದು ಬಾಂಗ್ಲಾದೇಶ ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರಾಶ್ರಿತರ ವರ್ಗಾವಣೆಗೆ ಮಾನವಹಕ್ಕು ಗುಂಪುಗಳು ವಿರೋಧ ವ್ಯಕ್ತಪಡಿಸಿವೆ. ಒಪ್ಪಿಗೆಯಿರುವ ನಿರಾಶ್ರಿತರನ್ನು ಮಾತ್ರ ದ್ವೀಪಕ್ಕೆ ವರ್ಗಾಯಿಸಲಾಗಿದೆ ಹಾಗೂ ಇದರಿಂದಾಗಿ ಚಿತ್ತಗಾಂಗ್‌ನಲ್ಲಿರುವ ನಿಬಿಡ ನಿರಾಶ್ರಿತ ಶಿಬಿರಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಬಾಂಗ್ಲಾದೇಶ ಹೇಳಿದೆ.

ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ 10 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರಿದ್ದಾರೆ. ಮ್ಯಾನ್ಮಾರ್‌ನಲ್ಲಿ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಆದರೆ, ಭಾಸನ್ ಚಾರ್ ದ್ವೀಪಕ್ಕೆ ಹೋಗುವಂತೆ ಕೆಲವು ನಿರಾಶ್ರಿತರ ಮೇಲೆ ಒತ್ತಡ ಹೇರಲಾಗಿದೆ ಎಂದು ನಿರಾಶ್ರಿತರು ಮತ್ತು ಮಾನವಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ.

ಚಿತ್ತಗಾಂಗ್‌ನಿಂದ ಸುಮಾರು 40 ಕಿ.ಮೀ. ದೂರದಲ್ಲಿ ಬಂಗಾಳ ಕೊಲ್ಲಿಯಲ್ಲಿರುವ ದ್ವೀಪವು 20 ವರ್ಷಗಳ ಹಿಂದೆ ಸಮುದ್ರದಿಂದ ಮೇಲೆ ಬಂದ ಭೂಭಾಗವಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಇಲ್ಲಿ ಪ್ರವಾಹ ಬರುತ್ತದೆ ಎಂದು ಹೇಳಲಾಗಿದೆ.

 ನಿರಾಶ್ರಿತರು ಏಳು ಹಡಗುಗಳಲ್ಲಿ ಪ್ರಯಾಣಿಸಿದ್ದಾರೆ ಹಾಗೂ ಎರಡು ಹಡಗುಗಳಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸಲಾಗಿದೆ ಎಂದು ನೌಕಾಪಡೆ ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News