1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಕೋವಿಡ್ ಲಸಿಕೆ ನೀಡಲಾಗುವುದು: ಕೇಂದ್ರ ಸರಕಾರ

Update: 2020-12-04 18:10 GMT

ಹೊಸದಿಲ್ಲಿ, ಡಿ. 4: ಕೋವಿಡ್ ಲಸಿಕೆಯನ್ನು ಮೊದಲು ಸರಕಾರಿ ಹಾಗೂ ಖಾಸಗಿ ವಲಯದ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ, ಅನಂತರ 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಶುಕ್ರವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ವಿಷಯ ಮಂಡಿಸಿದರು.

ಕೋವಿಡ್ ಲಸಿಕೆಯನ್ನು ಮೊದಲು ವೈದ್ಯರು ಹಾಗೂ ದಾದಿಯರು ಸೇರಿದಂತೆ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ, ಅನಂತರ ಪೊಲೀಸ್, ಸಶಸ್ತ್ರ ಸಿಬ್ಬಂದಿ ಹಾಗೂ ನಗರ ಸಭೆ ಕಾರ್ಮಿಕರಂತಹ 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ಸಚಿವಾಲಯ ವಿಷಯ ಮಂಡನೆ ಸಂದರ್ಭ ತಿಳಿಸಿತು ಎಂದು ಮೂಲಗಳು ತಿಳಿಸಿವೆ.

ಬೆಳಗ್ಗೆ 10.30ಕ್ಕೆ ಆರಂಭವಾದ ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳುವಂತೆ ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲ ಪಕ್ಷಗಳ ಸದನದ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಪ್ರಮುಖ ರಾಜಕೀಯ ಪಕ್ಷಗಳ ಐದಕ್ಕಿಂತ ಹೆಚ್ಚಿನ ಸಂಸದರು ಸೇರಿದಂತೆ 13 ನಾಯಕರು ಸಭೆಯಲ್ಲಿ ಮಾತನಾಡಿದರು. ಗುಲಾಂ ನಬಿ ಆಝಾದ್ ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡಿದರು ಎಂದು ಅವು ತಿಳಿಸಿವೆ. ಟಿಎಂಸಿಯ ಸುದೀಪ್ ಬಂದ್ಯೋಪಾಧ್ಯಾಯ, ಎನ್‌ಸಿಪಿಯ ಶರದ್ ಪವಾರ್, ಟಿಆರ್‌ಎಸ್‌ನ ನಾಮ ನಾಗೇಶ್ವರ ರಾವ್, ಶಿವಸೇನೆಯ ವಿನಾಯಕ ರಾವತ್ ಮೊದಲಾದವರು ಸಭೆಯಲ್ಲಿ ಮಾತನಾಡಿದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News