ಜೆಎನ್‌ಯು ಹಾಸ್ಟೆಲ್ ನಿವಾಸಿಗಳಿಗೆ 2 ಸಾವಿರ ರೂ. ದಂಡ

Update: 2020-12-04 18:24 GMT

ಹೊಸದಿಲ್ಲಿ,ನ.4: ಹಾಸ್ಟೆಲ್ ನಿವಾಸಿಗಳ ಮರುಪ್ರವೇಶಕ್ಕೆ ಅಧಿಕೃತ ಅನುಮತಿ ನೀಡುವುದಕ್ಕೆ ಮುಂಚಿತವಾಗಿಯೇ ಹಾಸ್ಟೆಲ್‌ಗಳನ್ನು ಪ್ರವೇಶಿಸಿದರೆನ್ನಲಾದ ಜವಾ ಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹಲವಾರು ವಿದ್ಯಾರ್ಥಿಗಳಿಗೆ, ವಿವಿಯ ಆಡಳಿತವು 2 ಸಾವಿರ ರೂ. ದಂಡವನ್ನು ವಿಧಿಸಿದೆ.

  ಒಂದು ವೇಳೆ ವಿದ್ಯಾರ್ಥಿಯು ಒಂದು ವಾರದೊಳಗೆ ದಂಡವನ್ನು ಪಾವತಿಸಲು ವಿಫಲನಾದಲ್ಲಿ 2 ಸಾವಿರ ರೂ.ಗಳ ಹೆಚ್ಚುವರಿ ದಂಡವನ್ನು ವಿಧಿಸಲಾಗುವುದು ಹಾಗೂ ಆತ/ಆಕೆಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆಯೆಂದು ಜೆಎನ್‌ಯುನ ಕೊಯ್ನಾ ಹಾಸ್ಟೆಲ್‌ನ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಹಾಸ್ಟೆಲ್‌ನ ಕನಿಷ್ಠ 5 ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದವರು ಹೇಳಿದ್ದಾರೆ.

  ಕಳೆದ ಮಾರ್ಚ್‌ನಲ್ಲಿ ರಾಷ್ಟ್ರವ್ಯಾಪಿಯಾಗಿ ಕೋವಿಡ್-19 ಲಾಕ್‌ಡೌನ್ ಹೇರಲಾಗಿದ್ದ ಸಂದರ್ಭದಲ್ಲಿ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ವಾಪಸಾಗಿದ್ದರು. ಸೆಪ್ಟಂಬರ್ ತಿಂಗಳಿನಿಂದೀಚೆಗೆ ಹಂತಹಂತವಾಗಿ ಮರುಪ್ರವೇಶವನ್ನು ನೀಡಬೇಕೆಂಬ ಬೇಡಿಕೆಯ ಹೊರತಾಗಿಯೂ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ಗೆ ಮರಳಲು ಅವಕಾಶವನ್ನು ನೀಡಿರಲಿಲ್ಲ. ಇದೀಗ ಕೇವಲ ವಿಜ್ಞಾನ ವಿಭಾಗದ ಪಿಎಚ್‌ಡಿ, ಎಂ.ಟೆಕ್ ಹಾಗೂ ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾತ್ರವೇ ಕ್ಯಾಂಪಸ್ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.

  ಇತರ ಬಹುತೇಕ ಶಿಕ್ಷಣ ಸಂಸ್ಥೆಗಳು ಹಂತಹಂತವಾಗಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿರುವುದರಿಂದ ಜೆಎನ್‌ಯು ಕೂಡಾ ಆದನ್ನು ಅನುಸರಿಸುವಂತೆ ವಿವಿಯ ವಿದ್ಯಾರ್ಥಿಗಳ ಒಕ್ಕೂಟವು ಆಗ್ರಹಿಸಿತ್ತು.

 ಕೊಯ್ನಾ ಹಾಸ್ಟೆಲ್‌ನ ನಿವಾಸಿಯಾದ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ್ಷೆ ಐಶೆ ಘೋಷ್ ಅವರಿಗೂ ಗುರುವಾರ ನೋಟಿಸ್ ಜಾರಿಯಾಗಿದೆ. ಹಾಸ್ಟೆಲ್‌ನ ಭದ್ರತಾ ಕಾವಲುಗಾರ ನೀಡಿದ ಮಾಹಿತಿಯಂತೆ ಐಶೆ ಘೋಷ್ ಅವರು ನವೆಂಬರ್ 5ರಂದು ಮುಂಜಾನೆ 4:30ರ ವೇಳೆಗೆ ಕೊಯ್ನಾ ಹಾಸ್ಟೆಲ್‌ನಲ್ಲಿ ಕಂಡುಬಂದಿದ್ದರು. ಹೀಗಾಗಿ ಅವರಿಗೆ 2 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ವಿವಿಯ ಆಡಳಿತ ಸಮಿತಿಯು ನೋಟಿಸ್‌ನಲ್ಲಿ ತಿಳಿಸಿದೆ.

ಜೆಎನ್‌ಯುನ ಚಂದ್ರಭಾಗ ಹಾಸ್ಟೆಲ್‌ನ ಮೂವರು ವಿದ್ಯಾರ್ಥಿಗಳಿಗೂ ದಂಡ ವಿಧಿಸಲಾಗಿದೆಯೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News