×
Ad

ವಲಸಿಗರನ್ನು ಗಡಿಪಾರಿನಿಂದ ರಕ್ಷಿಸುವ ಒಬಾಮ ಕಾನೂನನ್ನು ಮರುಸ್ಥಾಪಿಸಿದ ಸುಪ್ರೀಂ ಕೋರ್ಟ್

Update: 2020-12-05 22:01 IST

ವಾಶಿಂಗ್ಟನ್, ಡಿ. 5: ಎಳೆಯ ಪ್ರಾಯದಲ್ಲಿ ಅನಧಿಕೃತ ವಲಸಿಗರಾಗಿ ಅಮೆರಿಕಕ್ಕೆ ಬಂದವರನ್ನು ಗಡಿಪಾರಿನಿಂದ ರಕ್ಷಿಸುವ ಬರಾಕ್ ಒಬಾಮ ಕಾಲದ ಕಾನೂನನ್ನು ಫೆಡರಲ್ ನ್ಯಾಯಾಲಯವೊಂದು ಶುಕ್ರವಾರ ಸಂಪೂರ್ಣವಾಗಿ ಮರುಸ್ಥಾಪಿಸಿದೆ. ಈ ಕಾನೂನನ್ನು ಡೊನಾಲ್ಡ್ ಟ್ರಂಪ್ ಸರಕಾರವು ರದ್ದುಪಡಿಸಲು ಮುಂದಾಗಿತ್ತು.

ನ್ಯಾಯಾಲಯದ ಈ ತೀರ್ಪು ಭಾರೀ ಸಂಖ್ಯೆಯ ಭಾರತೀಯ ವಲಸಿಗರಿಗೆ ವರದಾನವಾಗಿದೆ.

ಡೆಫರ್ಡ್‌ ಆ್ಯಕ್ಷನ್ ಫಾರ್ ಚೈಲ್ಡ್‌ಹುಡ್ ಅರೈವಲ್ಸ್ (ಡಿಎಸಿಎ) ಎಂಬ ಕಾನೂನನ್ನು ಹಿಂದಕ್ಕೆ ಪಡೆಯಲು ಟ್ರಂಪ್ ಸರಕಾರವು 2017ರಲ್ಲಿ ಪ್ರಯತ್ನಿಸಿತ್ತು. ಆದರೆ ಅಮೆರಿಕದ ಸುಪ್ರೀಂ ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿತ್ತು.

ನ್ಯೂಯಾರ್ಕ್ ಈಸ್ಟರ್ನ್ ಡಿಸ್ಟ್ರಿಕ್ಟ್‌ನ ಜಿಲ್ಲಾ ನ್ಯಾಯಾಧೀಶ ನಿಕೋಲಸ್ ಗ್ಯಾರುಫಿಸ್, ಡಿಎಸಿಎ ಫಲಾನುಭವಿಗಳಿಗೆ ಎರಡು ವರ್ಷಗಳ ವಿಸ್ತರಣೆಯನ್ನು ನೀಡುವಂತೆ ಆಂತರಿಕ ಭದ್ರತಾ ಇಲಾಖೆಗೆ ಆದೇಶ ನೀಡಿದ್ದಾರೆ ಹಾಗೂ ಸೋಮವಾರದಿಂದ ಮೊದಲ ಬಾರಿಯ ಅರ್ಜಿದಾರರಿಂದ ಅರ್ಜಿಗಳನ್ನು ಸ್ವೀಕರಿಸುವಂತೆ ಸೂಚಿಸಿದ್ದಾರೆ.

ಅಂದರೆ, 2017 ಸೆಪ್ಟಂಬರ್‌ನಿಂದ ಮೊದಲ ಬಾರಿಗೆ, ಈ ಹಿಂದೆ ಅರ್ಜಿ ಹಾಕಲು ಅರ್ಹತೆಯಿರದ ಹೊಸ ಅರ್ಜಿದಾರರು ಈ ಕಾನೂನಿನಡಿ ರಕ್ಷಣೆ ಪಡೆಯಲು ಇನ್ನು ಅರ್ಜಿ ಸಲ್ಲಿಸಬಹುದಾಗಿದೆ.

ಡಿಎಸಿಎ ಕಾರ್ಯಕ್ರಮದಡಿಯಲ್ಲಿ ಸುಮಾರು 6,40,000 ವಲಸಿಗರು ನೋಂದಾಯಿಸಲ್ಪಟ್ಟಿದ್ದಾರೆ.

2,550 ಭಾರತೀಯ ಫಲಾನುಭವಿಗಳು

ಸೌತ್ ಏಶ್ಯನ್ ಅವೆುರಿಕನ್ಸ್ ಲೀಡಿಂಗ್ ಟುಗೆದರ್ (ಎಸ್‌ಎಎಎಲ್‌ಟಿ)ನ 2019ರ ವರದಿಯೊಂದರ ಪ್ರಕಾರ, ಅಮೆರಿಕದಲ್ಲಿ ಕನಿಷ್ಠ 6.30 ಲಕ್ಷ ಅನಧಿಕೃತ ಭಾರತೀಯ ವಲಸಿಗರಿದ್ದಾರೆ. 2010ರ ಬಳಿಕ ಈ ಸಂಖ್ಯೆಯಲ್ಲಿ 72 ಶೇಕಡದಷ್ಟು ಹೆಚ್ಚಳವಾಗಿದೆ.

2018ರ ವೇಳೆಗೆ, ಅಮೆರಿಕದಲ್ಲಿ ಸುಮಾರು 2,550 ಭಾರತೀಯ ಡಿಎಸಿಎ ಫಲಾನುಭವಿಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News