ಅಮೆರಿಕ: ಮರಿಜುವಾನಾ ಸೇವನೆ ಅಪರಾಧಮುಕ್ತಗೊಳಿಸುವ ಮಸೂದೆಗೆ ಹೌಸ್ ಅಸ್ತು

Update: 2020-12-05 17:34 GMT

ವಾಶಿಂಗ್ಟನ್, ಡಿ. 5: ಮಾದಕ ಪದಾರ್ಥ ಮರಿಜುವಾನಾ ಸೇವನೆಯನ್ನು ಅಪರಾಧಮುಕ್ತಗೊಳಿಸುವ ಮಸೂದೆಯ ಪರವಾಗಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸಂಸದರು ಶುಕ್ರವಾರ ಮತ ಹಾಕಿದ್ದಾರೆ.

 ಅಮೆರಿಕದ ಕೆಲವು ರಾಜ್ಯಗಳು ಹಾಗೂ ಹಲವು ದೇಶಗಳು ಈಗಾಗಲೇ ಗಾಂಜಾ ಸೇವನೆಯನ್ನು ಅಪರಾಧಮುಕ್ತಗೊಳಿಸಿವೆ. ಅಮೆರಿಕದ ಕೇಂದ್ರೀಯ ಕಾನೂನುಗಳು ಈ ರಾಜ್ಯಗಳ ಕಾನೂನಿಗೆ ಹೊಂದಾಣಿಕೆಯಾಗುವಂತೆ ಮಾಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ.

ಡೆಮಾಕ್ರಟಿಕ್ ಪಕ್ಷದ ಸಂಸದರ ನಿಯಂತ್ರಣದಲ್ಲಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ 228-164 ಮತಗಳ ಅಂತರದಲ್ಲಿ ಮಸೂದೆಯನ್ನು ಅಂಗೀಕರಿಸಿದೆ. ಆದರೆ, ರಿಪಬ್ಲಿಕನ್ ಸಂಸದರ ಹಿಡಿತದಲ್ಲಿರುವ ಸೆನೆಟ್‌ನಲ್ಲಿ ಮಸೂದೆಯು ಅಂಗೀಕಾರಗೊಳ್ಳುವ ಸಾಧ್ಯತೆ ತೀರಾ ಕಡಿಮೆಯಾಗಿದೆ.

  ಕೇಂದ್ರ ಸರಕಾರದ ನಿಯಂತ್ರಿತ ಪದಾರ್ಥಗಳ ಕಾಯ್ದೆಯಿಂದ ಮ್ಯಾರಿಹ್ವಾನವನ್ನು ತೆಗೆಯುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಈ ಕಾಯ್ದೆಯಡಿಯಲ್ಲಿ ರಚಿಸಲಾಗಿರುವ ಪಟ್ಟಿಯಲ್ಲಿ ಮರಿಜುವಾನಾ ಜೊತೆಗೆ ಹೆರಾಯಿನ್ ಮತ್ತು ಕೊಕೇನ್‌ಗಳನ್ನು ಸೇರಿಸಲಾಗಿತ್ತು.

  ಅಮೆರಿಕದ ಕೆಲವು ರಾಜ್ಯಗಳು ವೈದ್ಯಕೀಯ ಬಳಕೆಗಾಗಿ ಮರಿಜುವಾನಾವನ್ನು ಈಗಾಗಲೇ ಕಾನುನುಬದ್ಧಗೊಳಿಸಿವೆ. ಕೊಲರಾಡೊದಂಥ ಕೆಲವು ರಾಜ್ಯಗಳಂತೂ ಇದನ್ನು ಸಂಪೂರ್ಣ ನಿಯಂತ್ರಣಮುಕ್ತಗೊಳಿಸಿವೆ ಹಾಗೂ ಮನರಂಜನಾ ಉದ್ದೇಶಕ್ಕಾಗಿ ಬಳಸುವ ಪದಾರ್ಥವನ್ನು ನಿಯಂತ್ರಣಕ್ಕೊಳಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News