×
Ad

ಫ್ರಾನ್ಸ್: ಭದ್ರತಾ ಕಾನೂನು ವಿರುದ್ಧ ಹಿಂಸಾತ್ಮಕ ಪ್ರತಿಭಟನೆ

Update: 2020-12-06 22:53 IST

ಪ್ಯಾರಿಸ್ (ಫ್ರಾನ್ಸ್), ಡಿ. 6: ಫ್ರಾನ್ಸ್‌ನ ನೂತನ ಭದ್ರತಾ ಕಾನೂನನ್ನು ವಿರೋಧಿಸಿ ಶನಿವಾರ ಎರಡನೇ ವಾರಾಂತ್ಯವೂ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪೊಲೀಸರೊಂದಿಗೆ ಸಂಘರ್ಷಕ್ಕಿಳಿದ ಪ್ರತಿಭಟನಾಕಾರರು, ವಾಹನಗಳಿಗೆ ಬೆಂಕಿ ಕೊಟ್ಟರು ಹಾಗೂ ಅಂಗಡಿಗಳ ಕಿಟಿಕಿಗಳನ್ನು ಒಡೆದರು.

ವಾರಾಂತ್ಯದಲ್ಲಿ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳು ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ.

2018-19ರ ಚಳಿಗಾಲದಲ್ಲಿ ಫ್ರಾನ್ಸ್‌ನಲ್ಲಿ ಸಮಾನತೆಗಾಗಿ ಆಗ್ರಹಿಸಿ ನಡೆದ ಬೃಹತ್ ‘ಹಳದಿ ಬನಿಯನ್’ ಚಳವಳಿಯ ಸದಸ್ಯರೂ ಭಾರೀ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಪ್ರತಿಭಟನಕಾರರು ಸೂಪರ್‌ ಮಾರ್ಕೆಟ್, ಆಸ್ತಿ ವ್ಯವಹಾರಸ್ಥ ಕಚೇರಿ ಮತ್ತು ಬ್ಯಾಂಕ್‌ಗಳ ಕಿಟಿಕಿ ಗಾಜುಗಳನ್ನು ಒಡೆದರು ಹಾಗೂ ಹಲವು ಕಾರುಗಳಿಗೆ ಬೆಂಕಿ ಕೊಟ್ಟರು ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪೊಲೀಸರ ವೀಡಿಯೊ ತೆಗೆಯುವುದನ್ನು ಅಪರಾಧವನ್ನಾಗಿಸುವ ಮಸೂದೆಯೊಂದನ್ನು ಹಿಂದಕ್ಕೆ ಪಡೆಯಬೇಕು ಅಥವಾ ಮಸೂದೆಯನ್ನು ಪರಿಷ್ಕರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿ ಮಾಧ್ಯಮ ಸ್ವಾತಂತ್ರ್ಯ ಮತ್ತು ಮಾನವಹಕ್ಕು ಗುಂಪುಗಳ ನೇತೃತ್ವದಲ್ಲಿ ವಾರಗಳಿಂದ ಫ್ರಾನ್ಸ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಸೂದೆಯು ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದ ಮೊಕದ್ದಮೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಪ್ರತಿಭಟನಕಾರರು ಆರೋಪಿಸುತ್ತಾರೆ.

ದೇಶಾದ್ಯಂತ 95 ಪ್ರತಿಭಟನಕಾರರ ಬಂಧನ

ಉದ್ದೇಶಿತ ಭದ್ರತಾ ಕಾನೂನನ್ನು ವಿರೋಧಿಸಿ ಫ್ರಾನ್ಸ್‌ನಾದ್ಯಂತ ಶನಿವಾರ ನಡೆದ ಬೃಹತ್ ಪ್ರತಿಭಟನೆಯ ವೇಳೆ 95 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಫ್ರಾನ್ಸ್‌ನ ಆಂತರಿಕ ಭದ್ರತಾ ಸಚಿವ ಜೆರಾರ್ಡ್‌ ಡಾರ್ಮಾನಿನ್ ರವಿವಾರ ಹೇಳಿದ್ದಾರೆ. ಪ್ರತಿಭಟನೆಗಳ ವೇಳೆ 67 ಪೊಲೀಸರು ಗಾಯಗೊಂಡಿದ್ದಾರೆ ಎಂಬುದಾಗಿಯೂ ಅವರು ತಿಳಿಸಿದರು.

ಶನಿವಾರದ ಪ್ರತಿಭಟನೆಗಳ ವೇಳೆ ಪ್ಯಾರಿಸ್‌ನಲ್ಲಿ ಹೆಚ್ಚಿನ ಪ್ರಮಾಣದ ಹಿಂಸಾಚಾರ ನಡೆದಿದ್ದು, 48 ಪೊಲೀಸರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ಟ್ವಿಟರ್‌ನಲ್ಲಿ ತಿಳಿಸಿದೆ.

ಪ್ಯಾರಿಸ್‌ನಲ್ಲಿ ಪೊಲೀಸರು 25 ಮಂದಿಯನ್ನು ಬಂಧಿಸಿದರು ಎಂದು ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News