ಮಠಾಧಿಪತಿಗಳು ಮತ್ತು ರಾಜಕೀಯ

Update: 2020-12-06 19:30 GMT

ಕರ್ನಾಟಕದಲ್ಲಿ ಮಠಾಧೀಶರು ತಮ್ಮ ಭಕ್ತರಾದ ರಾಜಕಾರಣಿಗಳ ಪರವಾಗಿ ಒತ್ತಡ ರೂಪದ ಲಾಬಿ ಮಾಡುತ್ತಿದ್ದರೆ, ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಮಠದಲ್ಲಿ ಇರಬೇಕಾದವರು ಮುಖ್ಯಮಂತ್ರಿಯಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.ರಾಜಪ್ರಭುತ್ವದ ಕಾಲದಲ್ಲಿ ರಾಜ ಗುರುಗಳಾಗಿದ್ದವರು ಪ್ರಜಾಪ್ರಭುತ್ವದ ಈ ಕಾಲದಲ್ಲಿ ಮುಖ್ಯಮಂತ್ರಿಯಾಗಿ ರಾಜ, ಮಹಾರಾಜರಂತೆ ದರ್ಬಾರು ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಅವನತಿಯ ಮುನ್ಸೂಚನೆಯಲ್ಲದೆ ಬೇರೇನೂ ಅಲ್ಲ.


ರಾಜಕಾರಣ ಮತ್ತು ಧರ್ಮ ಇವೆರಡೂ ಪ್ರತ್ಯೇಕ ಕ್ಷೇತ್ರಗಳು. ಇವೆರಡೂ ಅವುಗಳದೇ ಆದ ಪ್ರಾವಿತ್ರ್ಯವನ್ನು ಹೊಂದಿವೆ. ಇವೆರಡಕ್ಕೂ ಪ್ರತ್ಯೇಕ ಕಟ್ಟುಪಾಡುಗಳಿವೆ. ಇವೆರಡೂ ತಮ್ಮ ನಡುವಿನ ಲಕ್ಷ್ಮಣರೇಖೆಯನ್ನು ದಾಟಿ ಒಂದರೊಳಗೆ ಇನ್ನೊಂದು ಹಸ್ತಕ್ಷೇಪ ಮಾಡುವುದಾಗಲಿ, ಕಾಲು ಚಾಚುವುದಾಗಲಿ ಅವುಗಳು ತಾವೇ ವಿಧಿಸಿಕೊಂಡ ಲಿಖಿತ ಮತ್ತು ಅಲಿಖಿತ ನಿಯಮಾವಳಿಗಳನ್ನು ಉಲ್ಲಂಘಿಸಿದಂತಾಗುತ್ತದೆ. ಭಾರತದಲ್ಲಿ ಇತ್ತೀಚೆಗೆ ಇವೆರಡೂ ಹೊಕ್ಕು ಬಳಕೆಯ ಸಂಬಂಧವನ್ನು ಹೊಂದಿ ಅದು ಅತಿರೇಕಕ್ಕೆ ಹೋಗಿದೆ. ಕೆಲ ಮಠಾಧೀಶರು ರಾಜಕಾರಣಿಗಳಂತೆ ವರ್ತಿಸುತ್ತಿದ್ದಾರೆ. ಇನ್ನು ಆದಿತ್ಯನಾಥರಂತಹ ಸನ್ಯಾಸಿಗಳು ಮುಖ್ಯಮಂತ್ರಿಯಾಗಿ, ಸಾಕ್ಷಿ ಮಹಾರಾಜರಂತಹ ಭೈರಾಗಿಗಳು ಸಂಸದರಾಗಿ ಮಿಂಚುತ್ತಿದ್ದಾರೆ.

ಧರ್ಮ ಮತ್ತು ರಾಜಕಾರಣ ಪ್ರತ್ಯೇಕ ಎಂಬ ಮಾತನ್ನು ಕೆಲ ಮಠಾಧೀಶರು ಒಪ್ಪುವುದಿಲ್ಲ. ಭಾರತದ ಗತ ಇತಿಹಾಸದಲ್ಲಿ ಅಂದಿನ ರಾಜ, ಮಹಾರಾಜರಿಗೆ ಧರ್ಮ ಗುರುಗಳು ರಾಜಗುರುಗಳಾಗಿ ಮಾರ್ಗದರ್ಶನ ಮಾಡಿದರೆಂದು ತಮ್ಮ ಹಸ್ತಕ್ಷೇಪವನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಹೀಗೆ ಸಮರ್ಥಿಸಿಕೊಳ್ಳುವ ಸ್ವಾಮಿಗಳು ಒಂದು ವಾಸ್ತವವನ್ನು ಮರೆಯುತ್ತಾರೆ. ನಿಜ, ರಾಜ ಪ್ರಭುತ್ವದಲ್ಲಿ ಧರ್ಮ ಗುರುಗಳು ರಾಜಗುರುಗಳಾಗಿ ಮಾರ್ಗದರ್ಶನ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಈಗ ದೇಶದಲ್ಲಿ ಇರುವುದು ರಾಜ ಪ್ರಭುತ್ವವಲ್ಲ.ಇದು ಪ್ರಜಾಪ್ರಭುತ್ವ. ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರ್ಗದರ್ಶನ ಮಾಡಲು ಸಂವಿಧಾನವಿದೆ.ಆಗಸ್ಟ್ 15ರಂದು ಭಾರತ ಸ್ವತಂತ್ರಗೊಂಡ ನಂತರ ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಿ, ಆ ಸಮಿತಿ ರೂಪಿಸಿದ ಸಂವಿಧಾನದ ಅಡಿಯಲ್ಲಿ ದೇಶ ಕಾರ್ಯ ನಿರ್ವಹಿಸುತ್ತಿದೆ. ಆಡಳಿತದಲ್ಲಿ ಜನಪ್ರತಿನಿಧಿಗಳ ಪಾತ್ರ ಮುಖ್ಯವಾಗಿರುತ್ತದೆ. ಇದರಲ್ಲಿ ಧರ್ಮ ಗುರುಗಳ ಪಾತ್ರ ನಗಣ್ಯವೆಂದರೆ ಅತಿಶಯೋಕ್ತಿಯಲ್ಲ. ಧರ್ಮ ಗುರುಗಳಿಗೆ ಮಠಾಧೀಶರಿಗೆ ಅವರದೇ ಆದ ಧಾರ್ಮಿಕ ಗ್ರಂಥಗಳಿವೆ. ಅವರಿಗೆ ಆ ಗ್ರಂಥಗಳು ಪವಿತ್ರ. ಇದರಾಚೆ ಅವರವರ ಕ್ಷೇತ್ರಗಳಲ್ಲಿ ಅವರು ಕಾರ್ಯನಿರ್ವಹಿಸುವುದು ಸೂಕ್ತ.

ಇದೆಲ್ಲ ಯಾಕೆ ಮತ್ತೆ ಪ್ರಸ್ತಾಪಿಸಬೇಕಾಯಿತೆಂದರೆ ಇತ್ತೀಚೆಗೆ ಕರ್ನಾಟಕದ ಕೆಲವು ಮಠಾಧೀಶರು ತಾವೇ ಎಳೆದುಕೊಂಡ ಪವಿತ್ರ ರೇಖೆಯನ್ನು ದಾಟಿ ವೃತ್ತಿನಿರತ ರಾಜಕಾರಣಿ ಗಳಂತೆ ವರ್ತಿಸುತ್ತಿದ್ದಾರೆ ಎಂದು ಅವರ ಭಕ್ತರೇ ಟೀಕಿಸುತ್ತಿದ್ದಾರೆ.ಸರಕಾರವೂ ಜಾತಿಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮಗಳನ್ನು ಮಾಡಿ ಸಂವಿಧಾನದ ಕಟ್ಟುಪಾಡುಗಳನ್ನು ಉಲ್ಲಂಘಿಸಿದೆ. ರಾಜಕಾರಣಿಗಳು ಏನಾದರೂ ಮಾಡಿಕೊಳ್ಳಲಿ ಆದರೆ ಸ್ವಾಮಿಗಳಾಗಿ ಕಾವಿ ವಸ್ತ್ರ ಧರಿಸಿದವರು ತಮ್ಮ ಜಾತಿಯ ರಾಜಕಾರಣಿಗಳನ್ನು ಮಂತ್ರಿಗಳನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿಯವರ ಮೇಲೆ ನಿರಂತರ ಒತ್ತಡ ತರುವುದು, ತಮ್ಮ ಜಾತಿಗೂ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಆಗ್ರಹಿಸುತ್ತಿರುವುದು ಅವರ ಪೀಠಕ್ಕೆ ಶೋಭೆ ತರುವುದಿಲ್ಲ.

ಯಡಿಯೂರಪ್ಪನವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಮಠ, ಮಂದಿರಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಲು ಬಜೆಟ್‌ನಲ್ಲಿ ಹಣ ಒದಗಿಸಿದರು. ಅವರ ನಂತರ ಮುಖ್ಯಮಂತ್ರಿಯಾದವರೂ ಅದನ್ನು ಮುಂದುವರಿಸಬೇಕಾದ ಅನಿವಾರ್ಯತೆಗೊಳಗಾದರು. ಆದರೆ ಮಠಾಧೀಶರು ಮತ್ತು ರಾಜಕಾರಣಿಗಳ ನಡುವಿನ ಒಡನಾಟಕ್ಕೆ ಹಲವಾರು ದಶಕಗಳ ಇತಿಹಾಸವಿದೆ.ಜಾತಿ ಮತಗಳನ್ನು ದಾಟಿ ಒಟ್ಟು ಸಮಾಜಕ್ಕೆ ಉಪಯುಕ್ತವಾದ ಸಲಹೆಗಳನ್ನು ನೀಡುವ ಎಲ್ಲ ಪ್ರಜೆಗಳಿಗಿರುವ ಸಂವಿಧಾನಾತ್ಮಕ ಹಕ್ಕು ಮಠಾಧೀಶರಿಗೆ ಇದ್ದೇ ಇದೆ. ಆದರೆ ಅದರಾಚೆ ತಮ್ಮ ಸಮುದಾಯದ ಇಂತಿಂತಹವರನ್ನು ಮಂತ್ರಿಗಳನ್ನಾಗಿ ಮಾಡಿ, ಮಾಡದಿದ್ದರೆ ಸರಕಾರವನ್ನೇ ಉರುಳಿಸುತ್ತೇವೆ ಎಂದು ಬೆದರಿಕೆ ಹಾಕುವುದು ಹಕ್ಕು ಚಲಾವಣೆಯಲ್ಲ. ಆ ದರ್ಪ, ಒತ್ತಡ ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ ತಾವು ಪಾಲಿಸಿಕೊಂಡು ಬಂದಿರುವ ಧಾರ್ಮಿಕ ಪರಂಪರೆಗೂ ಅವಮಾನ ಮಾಡಿದಂತೆ. ಕೆಲ ಮಠಾಧೀಶರ ಇಂತಹ ಅತಿರೇಕದ ವರ್ತನೆಯಿಂದ ಅವರ ಭಕ್ತರೇ ಅಪಹಾಸ್ಯ ಮಾಡಿ ನಗುವಂತಾಗಿದೆ.

ಭಾರತದ ರಾಜಕೀಯದಲ್ಲಿ ಧರ್ಮ ಗುರುಗಳ ಹಸ್ತಕ್ಷೇಪ ಇದೇ ಮೊದಲೇನಲ್ಲ. ಕರ್ನಾಟಕದ ಕೆಲ ಮಠಾಧೀಶರು ಮಾತ್ರ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಉಡುಪಿಯ ಪೇಜಾವರ ಮಠದ ಹಿಂದಿನ ಸ್ವಾಮಿಗಳು (ವಿಶ್ವೇಶ ತೀರ್ಥರು) ನೇರವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡ ಉದಾಹರಣೆಗಳಿವೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಚಳವಳಿ ಧಾರ್ಮಿಕ ಎಂದು ಅವರು ಹೇಳಿದರೂ ಕೂಡ ಅದು ಬಿಜೆಪಿಯ ಮತ್ತು ಅದರ ತಾತ್ವಿಕ ಸ್ಫೂರ್ತಿಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ಕಾರ್ಯಸೂಚಿ ಎಂಬುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಅಡ್ವಾಣಿಯವರ ರಥಯಾತ್ರೆಯ ನಂತರ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಎರಡರಿಂದ ಎಂಬತ್ತೆಂಟಕ್ಕೆ ತಲುಪಿ ಈಗ ಅಧಿಕಾರವನ್ನೇ ವಹಿಸಿಕೊಂಡಿರುವುದರ ಹಿಂದೆ ಅಯೋಧ್ಯೆಯ ಕೊಡುಗೆಯೂ ಇದೆ. ಇದರಲ್ಲಿ ಪೇಜಾವರರು ಸೇರಿ ನೂರಾರು ವಿಶ್ವ ಹಿಂದೂ ಪರಿಷತ್ತ್ತ್‌ನ ಮಠಾಧೀಶರು, ಸನ್ಯಾಸಿಗಳು ಪಾಲ್ಗೊಂಡಿದ್ದರು.ಈಗಲೂ ಕಾರ್ಯೋನ್ಮ್ಮುಖರಾಗಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ಉಂಟಾದಾಗ ಪೇಜಾವರ ಸ್ವಾಮಿಗಳೇ ಮಧ್ಯಸ್ಥಿಕೆ ವಹಿಸಿ ಬಗೆಹರಿಸಿದ ಉದಾಹರಣೆಗಳಿವೆ. ಆದರೆ ಈಗ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿರುವ ವೀರಶೈವ, ಲಿಂಗಾಯತ ಮಠಾಧೀಶರ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆ ಈ ಹಿಂದೆ ಪೇಜಾವರರು ಮತ್ತು ವಿಎಚ್‌ಪಿ ಸ್ವಾಮಿಗಳ ಬಗ್ಗೆ ವ್ಯಕ್ತವಾಗಿರಲಿಲ್ಲ ಎಂಬುದು ಕಹಿಯಾದರೂ ಕಟು ಸತ್ಯ.

ತೊಂಬತ್ತರ ದಶಕದಲ್ಲಿ ಒಟ್ಟೊಟ್ಟಿಗೆ ಬಂದ ಜಾಗತೀಕರಣ ಮತ್ತು ನವ ಉದಾರೀಕರಣ ಮತ್ತು ಕೋಮುವಾದಗಳ ಅಬ್ಬರದ ನಂತರ ರಾಜಕಾರಣ ಮತ್ತು ಧರ್ಮಗಳ ನಡುವಿನ ಲಕ್ಷ್ಮಣ ರೇಖೆ ಅಳಿಸಿ ಹೋದಂತಾಗಿದೆ. ಕರ್ನಾಟಕದಲ್ಲಿ ಮಠಾಧೀಶರು ತಮ್ಮ ಭಕ್ತರಾದ ರಾಜಕಾರಣಿಗಳ ಪರವಾಗಿ ಒತ್ತಡ ರೂಪದ ಲಾಬಿ ಮಾಡುತ್ತಿದ್ದರೆ, ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಮಠದಲ್ಲಿ ಇರಬೇಕಾದವರು ಮುಖ್ಯ ಮಂತ್ರಿಯಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.ರಾಜಪ್ರಭುತ್ವದ ಕಾಲದಲ್ಲಿ ರಾಜ ಗುರುಗಳಾಗಿದ್ದವರು ಪ್ರಜಾಪ್ರಭುತ್ವದ ಈ ಕಾಲದಲ್ಲಿ ಮುಖ್ಯ ಮಂತ್ರಿಯಾಗಿ ರಾಜ, ಮಹಾರಾಜರಂತೆ ದರ್ಬಾರು ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಅವನತಿಯ ಮುನ್ಸೂಚನೆಯಲ್ಲದೆ ಬೇರೇನೂ ಅಲ್ಲ.

ಇತ್ತೀಚಿನ ವರ್ಷಗಳಲ್ಲಿ ಮಠಾಧೀಶರು ಮತ್ತು ರಾಜಕಾರಣಿಗಳ ಸಂಬಂಧ ವಿಭಿನ್ನ ರೂಪಗಳನ್ನು ತಾಳುತ್ತಿದೆ.ಕೆಲವು ಮಠಗಳು ರಾಜಕಾರಣಿಗಳ ಉದ್ಯಮಿಗಳ ಕಪ್ಪುಹಣವನ್ನು ಸುರಕ್ಷಿತವಾಗಿಡುವ ಸ್ವದೇಶಿ ಸ್ವಿಸ್ ಬ್ಯಾಂಕುಗಳಾಗಿವೆ ಎಂಬ ಮಾತು ಜನ ಜನಿತವಾಗಿದೆ.

ರಾಜಕಾರಣಿಗಳು, ಕಾರ್ಪೊರೇಟ್ ಉದ್ಯಮಪತಿಗಳು ಹಾಗೂ ಮಠಾಧಿಪತಿಗಳ ನಡುವಿನ ಅಪವಿತ್ರ, ಅನೈತಿಕ ಮೈತ್ರಿಯಿಂದ ಭಾರತದ ಪ್ರಜಾಪ್ರಭುತ್ವ ತೀವ್ರ ಸ್ವರೂಪದ ಅಪಾಯವನ್ನು ಎದುರಿಸುತ್ತಿದೆ. ಸೆಕ್ಯುಲರ್ ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾಗಿ ಧರ್ಮದ ಆಧಾರದಲ್ಲಿ ರಾಷ್ಟ್ರವನ್ನು ಪುನರ್ನಿರ್ಮಾಣ ಮಾಡಲು ಹೊರಟಿರುವ ಶಕ್ತಿಗಳು ತಮ್ಮ ಬಲವನ್ನು ಹೆಚ್ಚಿಸಿಕೊಂಡಿವೆ. ವಿಶೇಷವಾಗಿ ಬಿಸಿರಕ್ತದ ತರುಣರನ್ನು ಬಲೆಗೆ ಬೀಳಿಸಿಕೊಂಡು ದಾರಿ ತಪ್ಪಿಸುತ್ತಿವೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಅಳಿವು ಉಳಿವಿನ ಹೋರಾಟ ನಡೆಸಬೇಕಾಗಿದೆ. ಎಲ್ಲ ರಾಜಕಾರಣಿಗಳು, ಎಲ್ಲ ಸ್ವಾಮಿಗಳು ಕೆಟ್ಟವರಲ್ಲ, ಆದರೆ ಅಂತಹವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಸ್ವಾಮಿಗಳು ರಾಜಕೀಯದಲ್ಲಿ ಆಸಕ್ತಿ ವಹಿಸಬಾರದೆಂದಲ್ಲ. ಜಾತಿ ಮತಗಳ ಗಡಿ ದಾಟಿ ಸರ್ವ ಜನಾಂಗದ ಏಳಿಗೆಗೆ ದುಡಿಯುವ ಧರ್ಮ ಗುರುಗಳು ಸಮಾಜಕ್ಕೆ ಗೌರವ.ಕರ್ನಾಟಕದಲ್ಲಿ ಎಪ್ಪತ್ತರ ದಶಕದ ಮೊದಲು ಇಂಚಗೇರಿ ಮಠದ ಮಹಾದೇವರು ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರು, ತುಳಿತಕ್ಕೊಳಗಾದವರ ಪರವಾಗಿ ನೇರವಾಗಿ ರಾಜಕೀಯಕ್ಕೆ ಧುಮುಕಿ ಪ್ರಭುತ್ವದ ದೌರ್ಜನ್ಯ ಎದುರಿಸಿದ ಉದಾಹರಣೆಗಳಿವೆ. ಬಹಳ ಹಿಂದೇಕೆ ಗದುಗಿನ ತೋಂಟದಾರ್ಯ ಸ್ವಾಮಿಗಳು ನೇರವಾಗಿ ರೈತರನ್ನು ಹೋರಾಟಕ್ಕೆ ಇಳಿಸಿ ಪೊಸ್ಕೊದಂತಹ ಬಹುರಾಷ್ಟ್ರೀಯ ಕಂಪೆನಿಗಳನ್ನು ಉತ್ತರ ಕರ್ನಾಟಕದಿಂದ ಓಡಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಕೆಲ ತಿಂಗಳ ಹಿಂದೆ ಅಸು ನೀಗಿದ ಸ್ವಾಮಿ ಅಗ್ನಿವೇಶರಂತಹ ಕಾವಿ ಧಾರಿ ಸನ್ಯಾಸಿಗಳು ಬದುಕಿನುದ್ದಕ್ಕೂ ಜೀತದಾಳುಗಳ ವಿಮೋಚನೆಗೆ ದುಡಿದರು. ದುಷ್ಟ ಕೋಮುವಾದಿ ಶಕ್ತಿಗಳನ್ನು ಎದುರಿಸಿ ಸಾಕಷ್ಟು ತೊಂದರೆ ಅನುಭವಿಸಿದರು. ಇಂತಹ ಸ್ವಾಮಿಗಳು ನಿತ್ಯ ಸ್ಮರಣೀಯರು.

ಆದರೆ ಈಗ ಜಗತ್ತಿನ ಮತ್ತು ದೇಶದ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಎಡಪಂಥೀಯ ಪ್ರಗತಿಪರ, ಮತ ನಿರಪೇಕ್ಷ ಸಂಘಟನೆಗಳು ಮತ್ತು ಪಕ್ಷಗಳ ಪ್ರಭಾವ ಕಡಿಮೆಯಾಗಿದೆ. ಜಗತ್ತಿನ ಎಲ್ಲೆಡೆ ಮತಾಂಧ ಮೂಲಭೂತವಾದಿ, ಜನಾಂಗವಾದಿ, ಕೋಮುವಾದಿ ಪಕ್ಷಗಳ, ಶಕ್ತಿಗಳ ಆರ್ಭಟ ಕೇಳುತ್ತಿದೆ. ಸಮಾಜವಾದಿ ಸೋವಿಯತ್ ರಶ್ಯದ ಪತನದ ನಂತರ ಅಮೆರಿಕದ ಸಾಮ್ರಾಜ್ಯಶಾಹಿ ಲೂಟಿಕೋರ ಪಾಳೆಯದ ಹಿಡಿತ ಗಟ್ಟಿಯಾಗುತ್ತಿದೆ. ಕೋಟ್ಯಂತರ ಜನರಿಗೆ ಸೇರಿದ ಜಗತ್ತಿನ ಎಲ್ಲ ಸಂಪತ್ತನ್ನು ದೋಚುವ ದಗಾಕೋರರಿಗೆ ಜನರನ್ನು ಧರ್ಮ, ಜಾತಿ, ಭಾಷೆ, ಜನಾಂಗದ ಆಧಾರದಲ್ಲಿ ವಿಭಜಿಸಿ ಆಳುವ ಅನಿವಾರ್ಯ ಇದೆ. ಇದಕ್ಕಾಗಿ ಧರ್ಮಗಳು, ಧರ್ಮಗುರುಗಳು, ರಾಷ್ಟ್ರೀಯತೆಗಳು, ಸಾಂಸ್ಕೃತಿಕ ಐಡೆಂಟಿಟಿಗಳು ದುರ್ಬಳಕೆ ಆಗುತ್ತಿವೆ. ಇದರ ಭಾಗವಾಗಿರುವ ನಮ್ಮ ದೇಶದ ಮಠಾಧೀಶರು, ಪೀಠಾಧಿಪತಿಗಳು ಸಹಜವಾಗಿ ರಾಜಕೀಯ ಹಿತಾಸಕ್ತಿ ಹೊಂದಿದ್ದಾರೆ.

ಧರ್ಮದಲ್ಲಿ ರಾಜಕೀಯ ಇರಬಾರದು ಆದರೆ ರಾಜಕೀಯದಲ್ಲಿ ಧರ್ಮ ಇರಬೇಕು ಎಂಬ ಅಪಾಯಕಾರಿ ವಾದವನ್ನು ಕೆಲ ಮಠಾಧೀಶರು ಮುಂದಿಡುತ್ತಿದ್ದಾರೆ. ಈ ವಾದವೇ ಪ್ರಜಾಪ್ರಭುತ್ವ ವಿರೋಧಿ ರಾಜಕೀಯದಲ್ಲಿ ಧರ್ಮದ ಇಲ್ಲವೇ ಧರ್ಮದಲ್ಲಿ ರಾಜಕೀಯ ಹಸ್ತಕ್ಷೇಪ ಅನುಚಿತವಾದುದು. ಮಠವೆಂದರೆ, ಧರ್ಮವೆಂದರೆ ಇಂದಿನ ವಾಸ್ತವ ಚಿತ್ರಣವೇ ಬೇರೆಯಾಗಿದೆ. ಸ್ವಾಮಿ ವಿವೇಕಾನಂದ, ಸಿದ್ದಾರೂಢರಂತಹ ಸನ್ಯಾಸಿಗಳು ಈಗಿಲ್ಲ. ಧರ್ಮವೆಂದರೆ ಈಗ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು, ಕ್ಯಾಪಿಟೇಶನ್ ವಸೂಲಿಗಳು ಕಣ್ಣಿಗೆ ಗೋಚರಿಸುತ್ತಿವೆ. ಹಿಂದೆ ಬೀದರ್‌ನಂತಹ ಜಿಲ್ಲೆಗಳಲ್ಲಿ ನಿಜಾಮರ ಕಾಲದಲ್ಲಿ ಬಾಗಿಲಿಗೆ ಉರ್ದು ಬೋರ್ಡ್ ಹಾಕಿ ಕನ್ನಡ ಕಲಿಸಿದ ಬಾಲ್ಕಿಯ ಪಟ್ಟದ ದೇವರಂತಹ ಅಪರೂಪದ ಚೇತನರಾದ ಸ್ವಾಮಿಗಳಿದ್ದರು.ಎಲ್ಲ ಜಾತಿ, ಧರ್ಮಗಳ ಮಕ್ಕಳಿಗೆ ಉಚಿತವಾಗಿ ಅಕ್ಷರ ಮತ್ತು ಅನ್ನ ದಾಸೋಹವನ್ನು ಏಕಕಾಲದಲ್ಲಿ ನಡೆಸಿದ ಬಸವಾನುಯಾಯಿ ಮಠಾಧೀಶರಿದ್ದರು. ಆದರೆ ಈಗ ಅವರ ಕಾಲ ಮುಗಿಯಿತು. ಬಸವನ ಹೆಸರು ಹೇಳಿಕೊಳ್ಳುವ ಮಠಗಳ ಕಾರ್ಯಕ್ರಮದಲ್ಲಿ ಕೋಮುವಾದಿ ಸಂಘಟನೆಗಳ ಪ್ರಚೋದನಕಾರಿ ಭಾಷಣಕಾರರನ್ನು ಆಹ್ವಾನಿಸಿ ಅವರಿಂದ ಉಪದೇಶ ಕೇಳುವಷ್ಟು ಕಾಲ ಬದಲಾಗಿದೆ.

ರಾಷ್ಟ್ರ ಕವಿ ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟವೆಂದು ಕರೆದ ಭಾರತ ಮತ್ತು ಕರ್ನಾಟಕಗಳನ್ನು ಸುರಕ್ಷಿತವಾಗಿ ಕಾಪಾಡಲು ನಮ್ಮ ಸಂವಿಧಾನವೊಂದರಿಂದಲೇ ಸಾಧ್ಯ. ‘ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮಗ್ರಂಥ’ ಎಂಬುದು ನಮ್ಮ ಘೋಷ ವಾಕ್ಯವಾಗಬೇಕಾಗಿದೆ. ಸಂವಿಧಾನವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News