ಸ್ಮಾರ್ಟ್‌ಸಿಟಿ ಯೋಜನೆ: ಮಂಗಳೂರಿನ 12 ಸರಕಾರಿ ಶಾಲೆಗಳಿಗೆ ಸ್ಮಾರ್ಟ್‌ ಭಾಗ್ಯ

Update: 2020-12-07 07:32 GMT
ಸಾಂದರ್ಭಿಕ ಚಿತ್ರ

 ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಸರಕಾರಿ ಶಾಲೆಗಳಿಗೆ ‘ಸ್ಮಾರ್ಟ್’ ಭಾಗ್ಯ ಲಭಿಸಿದೆ. ಅದರಂತೆ 9 ಘಟಕಗಳ 12 ಶಾಲೆಗಳನ್ನು ಸ್ಮಾಟ್‌ಗೊಳಿಸಲಾಗಿದೆ. ಈ ಯೋಜನೆಯಡಿ ‘ಇ-ಸ್ಮಾರ್ಟ್’ಗೊಳಿಸುವ ಪ್ರಥಮ ಪ್ರಯೋಗ ಇದಾಗಿದ್ದು, ಬಹುತೇಕ ಯಶಸ್ವಿಯಾಗಿದೆ.

ನಗರದ ಬಲ್ಮಠ ಸರಕಾರಿ ಶಾಲೆ ಆವರಣದ 2, ಕಾರ್‌ಸ್ಟ್ರೀಟ್ ಸರಕಾರಿ ಶಾಲೆ ಆವರಣದ 2, ಹೊಯ್ಗೆ ಬಝಾರ್‌ನ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, ಬಂದರ್ ಉರ್ದು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, ಬೋಳಾರದ ಉರ್ದು ಮತ್ತು ಕನ್ನಡ ಶಾಲೆಗಳು, ಬಸ್ತಿ ಗಾರ್ಡನ್, ನೀರೇಶ್ವಾಲ್ಯ, ಪಾಂಡೇಶ್ವರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಭ್ಯಾಸಿ ಪ್ರೌಢಶಾಲೆ ಸ್ಮಾರ್ಟ್ ಮಾಡಲಾಗಿದೆ.

ಅಂದರೆ ಈ 12 ಶಾಲೆಗಳ ಆಂತರಿಕ ಕಾಮಗಾರಿ ಪೂರ್ಣಗೊಂಡಿದೆ. ಅದರಲ್ಲಿ 6 ಶಾಲೆಗಳ ಮೈದಾನವನ್ನು ಸಮತಟ್ಟು ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಫೇಸ್‌ಲುಕ್ ಕಟ್ಟಡ, ಡಿಜಿಟಲ್ ಸ್ಟಡಿ ಮೆಟೀರಿಯಲ್ಸ್, ಸ್‌ಟಾವೇರ್‌ಗಳ ಸಹಿತ ಕ್ಲಾಸ್ ರೂಮ್‌ಗಳು, ಕುಡಿಯುವ ನೀರು, ಶೌಚಾಲಯ ಸಹಿತ ಮೂಲಸೌಲಭ್ಯ, ಸ್ಮಾರ್ಟ್ ಟೀಚಿಂಗ್ಸ್, ಮಕ್ಕಳಿಗೆ ಟ್ಯಾಬ್ಸ್ ನೀಡಲಾಗುತ್ತಿದೆ.

ತರಗತಿ ಕೊಠಡಿಗಳ ಮರು ನಿರ್ಮಾಣ, ಕಂಪ್ಯೂಟರ್, ಆನ್‌ಲೈನ್ ಕ್ಲಾಸ್ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಜೊತೆಗೆ ಶಿಕ್ಷಕರಿಗೂ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೂ ಪ್ರಾಯೋಗಿಕ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯಕಾರಿ ಇಂಜಿನಿಯರ್ ಚಂದ್ರಕಾಂತ್ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಮಧ್ಯದ 1,628 ಎಕರೆ ಪ್ರದೇಶದ ಎಬಿಡಿ (ಏರಿಯಾ ಬೇಸ್ಡ್ ಡೆವಲಪ್‌ಮೆಂಟ್) ವ್ಯಾಪ್ತಿಯ ಎಂಟು ಆವರಣಗಳ ಒಳಗಿನ 12 ಶಾಲೆಗಳನ್ನು ಸ್ಮಾರ್ಟ್ ಆಗಿ ಮಾರ್ಪಡಿಸಲಾಗಿದೆ. ಸಿವಿಲ್ ಕಾಮಗಾರಿಗೆ 11 ಕೋ.ರೂ. ಮತ್ತು ಐಸಿಟಿಗೆ 4 ಕೋ.ರೂ. ಖರ್ಚು ಮಾಡಲಾಗುತ್ತಿದೆ.

1ರಿಂದ 10ನೇ ತರಗತಿವರೆಗಿನ ಶಾಲೆಗಳಿಗೆ ಸ್ಮಾರ್ಟ್ ಕಟ್ಟಡ, ಆಕರ್ಷಕ ತರಗತಿಗಳು, ಕುಡಿಯುವ ನೀರು, ಶೌಚಾಲಯ ಮೊದಲಾದ ಸೌಲಭ್ಯ ಕಲ್ಪಿಸುವುದರ ಜೊತೆಗೆ ಬೋಧನೆ ಮತ್ತು ಕಲಿಕೆಗೆ ತಂತ್ರಜ್ಞಾನದ ಬಳಕೆ, ಸ್ಮಾರ್ಟ್ ಬೋರ್ಡ್, ಮಕ್ಕಳಿಗೆ ಲ್ಯಾಪ್‌ಟಾಪ್, ಟ್ಯಾಬ್ ವಿತರಣೆ ಮಾಡಲಾಗುತ್ತಿದೆ.

ಶಾಲೆಗಳ ಆಟದ ಮೈದಾನ ಅಭಿವೃದ್ಧಿ, ವಿವಿಧ ಪರಿಕರಗಳ ವಿತರಣೆ ಮಾಡಲಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯ ಶಾಲೆಗಳು 5 ಕಿ.ಮೀ. ವ್ಯಾಪ್ತಿಯಲ್ಲಿರುವುದರಿಂದ ಕೆಲವು ಶಾಲೆಯಲ್ಲಿ ಬಾಸ್ಕೆಟ್ ಬಾಲ್, ಟೆನಿಸ್ ಮೊದಲಾದ ಅಂಗಣ ನಿರ್ಮಿಸಿ ವಾರಕೊಮ್ಮೆ ಇತರ ಶಾಲಾ ವಿದ್ಯಾರ್ಥಿಗಳು ತೆರಳಿ ಆಟವಾಡುವ ಅವಕಾಶವನ್ನೂ ಕಲ್ಪಿಸಲಾಗುತ್ತದೆ.

ಮಂಗಳೂರಿನ ಎಬಿಡಿ ವ್ಯಾಪ್ತಿಯ 12 ಸರಕಾರಿ ಶಾಲೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ 15 ಕೋ.ರೂ. ವೆಚ್ಚದಲ್ಲಿ ಇ- ಸ್ಮಾರ್ಟ್ ಶಾಲೆಗಳನ್ನಾಗಿ ಮಾರ್ಪಡಿಸಲಾಗಿದೆ. ಮೂರು ಶಾಲೆ ಶಿಕ್ಷಕರಿಗೆ ಹಸ್ತಾಂತರ ಮಾಡಲಾಗಿದೆ. ಜ.15ರೊಳಗೆ ಎಲ್ಲ ಶಾಲೆಗಳನ್ನು ಹಸ್ತಾಂತರ ಮಾಡಲಾಗುವುದು.

  ಚಂದ್ರಕಾಂತ -

ಕಾರ್ಯಕಾರಿ ಇಂಜಿನಿಯರ್, ಸ್ಮಾರ್ಟ್ ಸಿಟಿ ಯೋಜನೆ.

ಸರಕಾರಿ ಶಾಲೆಗಳನ್ನು ಐಸಿಟಿ (ಇನ್ಫಾರ್ಮೇಶನ್ ಕಮ್ಯುನಿಕೇಶನ್ ಆ್ಯಂಡ್ ಟೆಕ್ನಾಲಜಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಆ ಮೂಲಕ ಶಿಕ್ಷಕರನ್ನು ರೂಪಿಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಆಧಾರಿತ ಸ್ಮಾರ್ಟ್ ಶಿಕ್ಷಣ ನೀಡಿ ನಗರಗಳ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಂತೆ ಆಧುನಿಕ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುವುದು ಯೋಜನೆಯ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News