×
Ad

ಕೃಷಿ ಕಾಯ್ದೆ ವಿರೋಧಿಸಿ ಮಂಗಳವಾರ ಭಾರತ್ ಬಂದ್

Update: 2020-12-07 23:17 IST

ಹೊಸದಿಲ್ಲಿ, ಡಿ. 7: ನೂತನ ಕೃಷಿ ಕಾಯ್ದೆ ವಿರುದ್ಧ ರೈತರು ಮಂಗಳವಾರ ಭಾರತ ಬಂದ್‌ಗೆ ಕರೆ ನೀಡಿದ್ದು, ದೇಶಾದ್ಯಂತ ಜನಜೀವನ ಅಸ್ತವ್ಯವಸ್ತಗೊಳ್ಳುವ ಸಾಧ್ಯತೆಯಿದೆ.

 ಕೇಂದ್ರದೊಂದಿಗಿನ ಹಲವು ಸುತ್ತಿನ ಮಾತುಕತೆ ಬಳಿಕವೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ ರೈತರು ಮಂಗಳವಾರ ‘ಭಾರತಬಂದ್’ಗೆ ಕರೆ ನೀಡಿದ್ದಾರೆ.

‘ಭಾರತ ಬಂದ್’ಗೆ ಶಿರೋಮಣಿ ಅಕಾಲಿದಳ, ಶಿವಸೇನೆ, ಕಾಂಗ್ರೆಸ್, ಡಿಎಂಕೆ, ಕಮಲ ಹಾಸನ್ ಅವರ ಎಂಎನ್‌ಎಂ, ಆರ್‌ಜೆಡಿ, ಸಮಾಜವಾದಿ ಪಕ್ಷ, ಎನ್‌ಸಿಪಿ, ಆಮ್ ಆದ್ಮಿ ಪಕ್ಷ, ಜಮ್ಮು ಕಾಶ್ಮೀರದಲ್ಲಿ ಹೊಸತಾಗಿ ರೂಪುಗೊಂಡ ಪಕ್ಷ ಪೀಪಲ್ಸ್ ಅಲೆಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ ಹಾಗೂ ಎಡ ಪಕ್ಷಗಳ ಮೈತ್ರಿ ಕೂಟ ಸೇರಿದಂತೆ 15ಕ್ಕೂ ಅಧಿಕ ಪ್ರತಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಎನ್‌ಡಿಎ ಮಿತ್ರ ಪಕ್ಷವಾದ ರಾಷ್ಟ್ರೀಯ ಲೋಕ ತಾಂತ್ರಿಕ್ ಪಕ್ಷ ಕೂಡ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಇದಲ್ಲದೆ, ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಶನ್; ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ ಹಾಗೂ ಟಿಯುಸಿಸಿ ಸೇರಿದಂತೆ ವಿವಿಧ ಕಾರ್ಮಿಕ ಒಕ್ಕೂಟಗಳ ಜಂಟಿ ವೇದಿಕೆ ಕೂಡ ಬೆಂಬಲ ವ್ಯಕ್ತಪಡಿಸಿವೆ.

 ಭಾರತ್ ಬಂದ್ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಭದ್ರತೆ ಏರ್ಪಡಿಸುವಂತೆ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಭಾರತ್ ಬಂದ್ ಸಂದರ್ಭ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅದು ತಿಳಿಸಿದೆ. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನೀಡಲಾದ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಿನಲ್ಲಿ ಅನುಸರಿಸುವ ಖಾತರಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ. ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ‘‘ಅಭಿವೃದ್ಧಿಗೆ ಸುಧಾರಣೆ ಅಗತ್ಯ. ಶತಮಾನ ಹಿಂದಿನ ಕೆಲವು ಕಾನೂನುಗಳು ಈಗ ಹೊರೆಯಾಗಿದೆ. ತನ್ನ ಸರಕಾರ ತಂದ ಈ ಸುಧಾರಣೆ ಮುಂದಿನ ಚುನಾವಣೆಯಲ್ಲಿ ಪ್ರತಿಫಲಿತವಾಗಲಿದೆ ’’ ಎಂದು ಹೇಳಿದ್ದಾರೆ. ‘ಭಾರತ್ ಬಂದ್’ ಪೂರ್ವಾಹ್ನ 11 ಗಂಟೆಗೆ ಆರಂಭವಾಗಲಿದ್ದು, ಅಪರಾಹ್ನ 3 ಗಂಟೆ ವರೆಗೆ ಮುಂದುವರಿಯಲಿದೆ. ರೈತ ಒಕ್ಕೂಟಗಳ ಸದಸ್ಯರು ಹೆದ್ದಾರಿ ಸಂಚಾರ ನಿರ್ಬಂಧಿಸಲಿದ್ದಾರೆ. ಅಲ್ಲದೆ ಟೋಲ್ ಪ್ಲಾಝಾಗಳನ್ನು ವಶಪಡಿಸಿಕೊಳ್ಳಲಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹರೀಂದರ್ ಸಿಂಗ್ ಲೋಖೋವಾಲ ಹೇಳಿದ್ದಾರೆ. ‘‘ಆ್ಯಂಬುಲೆನ್ಸ್‌ನಂತಹ ವೈದ್ಯಕೀಯ ಸೇವೆಗಳಿಗೆ ಹಾಗೂ ವಿವಾಹ ಸಮಾರಂಭಕ್ಕೆ ತೆರಳುವವರಿಗೆ ಯಾವುದೇ ರೀತಿಯ ಅಡ್ಡಿ ಉಂಟು ಮಾಡುವುದಿಲ್ಲ’’ ಎಂದು ಭಾರತೀಯ ಕಿಸಾನ್ ಒಕ್ಕೂಟದ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. ‘ನಮ್ಮ ವಿರೋಧವನ್ನು ದಾಖಲಿಸುವ ಸಾಂಕೇತಿಕ ಪ್ರತಿಭಟನೆ ಇದಾಗಿದೆ. ಕೇಂದ್ರ ಸರಕಾರದ ಕೆಲವು ನೀತಿಗಳನ್ನು ನಾವು ಬೆಂಬಲಿಸುವುದಿಲ್ಲ ಎಂಬುದನ್ನು ತೋರಿಸಲು ನಾವು ಈ ಮುಷ್ಕರ ನಡೆಸುತ್ತಿದ್ದೇವೆ’’ ಎಂದು ಅವರು ಹೇಳಿದ್ದಾರೆ. ‘ಭಾರತ್ ಬಂದ್ ಸಂದರ್ಭ ಹಾಲು, ತರಕಾರಿ, ದಿನಸಿ ಸೇರಿದಂತೆ ಹಲವು ಸೇವೆಗಳ ಪೂರೈಕೆ, ಸಾಗಾಟ, ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಈ ನಡುವೆ ರೈತರ ಪ್ರತಿಭಟನೆ 12ನೇ ದಿನಕ್ಕೆ ಕಾಲಿರಿಸಿದ್ದು, ಸಿಂಘು ಗಡಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ‘ಭಾರತ್ ಬಂದ್’ ಸಂದರ್ಭ ದಿಲ್ಲಿ ಸುತ್ತಮತ್ತ ರಸ್ತೆ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ ಟ್ರಾಫಿಕ್ ಪೊಲೀಸರು ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News