ಶೌಚಕ್ಕೆಂದು ಕಚೇರಿಯಿಂದ ಹೊರ ಹೋಗಿದ್ದ ಸರಕಾರಿ ಮಹಿಳಾ ಉದ್ಯೋಗಿ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಸಾವು

Update: 2020-12-08 16:40 GMT

ಹೊಸದಿಲ್ಲಿ, ಡಿ. 8: ಸರಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲದೇ ಇದ್ದುದರಿಂದ ಶೌಚಕ್ಕೆ ಹೊರಗಡೆ ಹೋದ ಸರಕಾರಿ ಮಹಿಳಾ ಉದ್ಯೋಗಿಯೊಬ್ಬರು ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಕಲಕತ್ತೂರಿನಲ್ಲಿ ಶನಿವಾರ ನಡೆದಿದೆ.

ಈ ದುರ್ಘಟನೆ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲದ ಸರಕಾರಿ ಕಚೇರಿಗಳ ದುರವಸ್ಥೆಗೆ ಕನ್ನಡಿ ಹಿಡಿದಿದೆ. ಈ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೃತಪಟ್ಟ ಸರಕಾರಿ ಉದ್ಯೋಗಿಯನ್ನು ಶರಣ್ಯಾ (23) ಎಂದು ಗುರುತಿಸಲಾಗಿದೆ. ಶರಣ್ಯಾ ಕೆಲಸ ಮಾಡುವ ಸರಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇರಲಿಲ್ಲ. ಇದರಿಂದಾಗಿ ಕೆಲಸಕ್ಕೆ ರಾಜೀನಾಮೆ ನೀಡಲು ಶರಣ್ಯಾ ಅನೇಕ ಬಾರಿ ಯೋಚಿಸಿದ್ದರು. ಆದರೆ, ರಾಜೀನಾಮೆ ನೀಡಿರಲಿಲ್ಲ. ಇತರ ಮಹಿಳೆಯರಂತೆ ಶರಣ್ಯಾ ಕೂಡ ಶೌಚಕ್ಕಾಗಿ ಕಚೇರಿ ಪಕ್ಕದ ಮನೆಗಳು ಹಾಗೂ ಕಟ್ಟಡಗಳ ಬಳಿ ಹೋಗುತ್ತಿದ್ದರು. ಶನಿವಾರ ಎಂದಿನಂತೆ ಶೌಚಕ್ಕೆ ಹೋದ ಸಂದರ್ಭ ನಿರ್ಮಾಣ ಹಂತದಲ್ಲಿರುವ ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ಅವರು ಮೃತಪಟ್ಟಿದ್ದಾರೆ.

 ಶರಣ್ಯಾ ತಮಿಳುನಾಡು ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾಂಚಿಪುರಂನ ಕೃಷಿ ಅಭಿವೃದ್ಧಿ ಇಲಾಖೆಯ ಗೋದಾಮಿನ ವ್ಯವಸ್ಥಾಪಕರಾಗಿ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೂ ಶರಣ್ಯಾ ಶೌಚಾಲಯ ಇಲ್ಲದೆ ಸಮಸ್ಯೆ ಎದುರಿಸಿದ್ದರು. ‘‘ಶರಣ್ಯಾ ನನ್ನ ಜೀವ. ಆಕೆಯ ಸಾವನ್ನು ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳು ಐಎಎಸ್ ಕನಸು ಕಂಡಿದ್ದಳು. ಕೆಲಸದೊಂದಿಗೆ ಐಎಎಸ್ ಪರೀಕ್ಷೆಗೆ ತಯಾರಾಗಲು ನಿರ್ಧರಿಸಿದ್ದಳು. ಆದರೆ, ಆಕೆಯ ಸಾವಿನೊಂದಿಗೆ ಅದು ಕೊನೆಯಾಗಿದೆ’’ೆ ಶರಣ್ಯಾ ಅವರ ತಂದೆ ಷಣ್ಮುಗಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News