ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘಕರ ಪಟ್ಟಿಯಲ್ಲಿ ಪಾಕ್, ಚೀನಾ
Update: 2020-12-08 23:23 IST
ವಾಶಿಂಗ್ಟನ್, ಡಿ. 8: ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿದ ದೇಶಗಳ ಪಟ್ಟಿಯಲ್ಲಿ ಅವೆುರಿಕವು ಚೀನಾ ಮತ್ತು ಪಾಕಿಸ್ತಾನಗಳನ್ನು ಸೇರಿಸಿದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.
ಈ ಪಟ್ಟಿಯಲ್ಲಿ ಈಗಾಗಲೇ ಇತರ 8 ದೇಶಗಳು ಇವೆ. ಅವುಗಳೆಂದರೆ ಮ್ಯಾನ್ಮಾರ್, ಎರಿಟ್ರಿಯ, ಇರಾನ್, ನೈಜೀರಿಯ, ಉತ್ತರ ಕೊರಿಯ, ಸೌದಿ ಅರೇಬಿಯ, ತಜಿಕಿಸ್ತಾನ ಮತ್ತು ತುರ್ಕ್‌ಮೆನಿಸ್ತಾನ.
‘‘ವ್ಯವಸ್ಥಿತ, ಮುಂದುವರಿಯುತ್ತಿರುವ ಹಾಗೂ ನಿರಂಕುಶ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಲ್ಲಿ ತೊಡಗಿರುವುದಕ್ಕಾಗಿ ಅಥವಾ ಅದನ್ನು ಸಹಿಸಿಕೊಂಡಿರುವುದಕ್ಕಾಗಿ ಈ ದೇಶಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ’’ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಪಾಂಪಿಯೊ ಹೇಳಿದರು.
ಧಾರ್ಮಿಕ ಸ್ವಾತಂತ್ರ್ಯದ ತೀವ್ರ ಉಲ್ಲಂಘನೆಯಲ್ಲಿ ತೊಡಗಿರುವ ಅಥವಾ ಅದನ್ನು ಸಹಿಸಿಕೊಂಡಿರುವ ದೇಶಗಳ ವಿಶೇಷ ನಿಗಾ ಪಟ್ಟಿಗೆ ಅಮೆರಿಕವು ಕೋಮರಸ್, ಕ್ಯೂಬಾ, ನಿಕಾರಗುವ ಮತ್ತು ರಶ್ಯ ದೇಶಗಳನ್ನು ಸೇರಿಸಿದೆ.