×
Ad

ಎಚ್‌ಐವಿ ಸೋಂಕಿತ ವ್ಯಕ್ತಿಯಿಂದ ಅತ್ಯಾಚಾರವನ್ನು ಕೊಲೆ ಯತ್ನವೆಂದು ಪರಿಗಣಿಸಲು ಸಾಧ್ಯವಿಲ್ಲ: ದಿಲ್ಲಿ ಹೈಕೋರ್ಟ್

Update: 2020-12-09 23:43 IST

ಹೊಸದಿಲ್ಲಿ, ಡಿ.9: ಎಚ್‌ಐವಿ ಸೋಂಕಿತ ವ್ಯಕ್ತಿಯು ಅತ್ಯಾಚಾರವೆಸಗಿದರೆ ಅದನ್ನು ಭಾರತೀಯ ದಂಡಸಂಹಿತೆಯಡಿ ಕೊಲೆ ಯತ್ನವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ದಿಲ್ಲಿ ಹೈಕೋರ್ಟ್ ತೀರ್ಪು ನೀಡಿರುವುದಾಗಿ ಕಾನೂನು ಸುದ್ದಿ ಜಾಲತಾಣ ‘ಬಾರ್ ಆ್ಯಂಡ್ ಬೆಂಚ್’ ವರದಿ ಮಾಡಿದೆ.

ಕೊಲೆ ಯತ್ನ ಆರೋಪದಲ್ಲಿ ಎಚ್‌ಐವಿ ಪೀಡಿತ ವ್ಯಕ್ತಿಯೊಬ್ಬನನ್ನು ದೋಷಿಯೆಂದು ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತಿರಸ್ಕರಿಸುತ್ತಾ, ದಿಲ್ಲಿ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತನ್ನ ಮಲಮಗಳ ಮೇಲೆ ಅತ್ಯಾಚಾರ ವೆಸಗಿದ ಪ್ರಕರಣದಲ್ಲಿ ಎಚ್‌ಐವಿ ಪೀಡಿತ ಆರೋಪಿಯು ದೋಷಿಯೆಂದು ವಿಚಾರಣಾ ನ್ಯಾಯಾಲಯವು ಮಂಗಳವಾರ ತೀರ್ಪು ನೀಡಿತ್ತು. ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿ 10 ವರ್ಷ ಹಾಗೂ ಕೊಲೆ ಯತ್ನದ ಆರೋಪದಲ್ಲಿ 10 ವರ್ಷ ಹಾಗೂ ಆಕೆಯ ಗರ್ಭಪಾತಕ್ಕೆ ಕಾರಣವಾದುದಕ್ಕಾಗಿ ಹೆಚ್ಚು ವರಿ 5 ವರ್ಷ ಸೇರಿದಂತೆ ಒಟ್ಟು 25 ವರ್ಷಗಳ ಜೈಲು ಶಿಕ್ಷೆಯನ್ನು ಆತನಿಗೆ ವಿಚಾರಣಾ ನ್ಯಾಯಾಲಯ ಘೋಷಿಸಿತ್ತು. ತನ್ನ ಮಲಪುತ್ರಿಯ ಮೇಲೆ ಅತ್ಯಾಚಾರ ವೆಸಗಿದ ಆರೋಪಿಗೆ, ಆಕೆಯ ಸಾವನ್ನಪ್ಪುವ ಸಾಧ್ಯತೆಯಿರುವಂತಹ ಸೋಂಕುರೋಗವನ್ನು ತಾನು ಹರಡಬಲ್ಲೆನೆಂಬುದು ಆರಿವಿತ್ತು ಎಂದು ವಿಚಾರಣಾ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಯು ದಿಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು.

ಎಚ್‌ಐವಿ ಪಾಸಿಟಿವ್ ಆಗಿರುವ ವ್ಯಕ್ತಿಯು, ತನ್ನ ಸಂಗಾತಿಯೊಂದಿಗೆ ಸಮ್ಮತಿಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದರೂ ಸಹ ಅದು ಭಾರತೀಯ ದಂಡ ಸಂಹಿತೆಯ 307 ಸೆಕ್ಷನ್‌ನಡಿ ಶಿಕ್ಷಾರ್ಹ ಅಪರಾಧವೆಂಬ ವಿಚಾರಣಾ ನ್ಯಾಯಾಲಯ ಅಭಿಪ್ರಾಯವನ್ನ್ನು ದಿಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿ ವಿಷ್ಣು ಭಾಖ್ರಿ ತಿರಸ್ಕರಿಸಿದರು.

ಆರೋಪಿಯ ವಿರುದ್ಧ ಕೊಲೆ ಯತ್ನದ ಆರೋಪವನ್ನು ಹೊರಿಸಲು ಸಾಧ್ಯವಿಲ್ಲವಾದರೂ, ಭಾರತೀಯ ದಂಡಸಂಹಿತೆಯ 306 ಸೆಕ್ಷನ್‌ನಡಿ ಆತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ದೋಷಿಯೆಂದು ಪರಿಗಣಿಸಲು ಸಾಧ್ಯವಿದೆ ಎಂದು ನ್ಯಾಯಪೀಠ ತಿಳಿಸಿತು. ಆರೋಪಿಯು ತನ್ನ ಮಲಮಗಳ ಮೇಲೆ ಅತ್ಯಾಚಾರವೆಸಗಿದ್ದಾನಾದರೂ, ಆಕೆಯನ್ನು ಸಾಯಿಸಬೇಕೆಂಬ ಉದ್ದೇಶ ಅತನಿಗಿರಲಿಲ್ಲವೆಂದು ದಿಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News