ಈ ವರ್ಷ ಕರ್ತವ್ಯದ ವೇಳೆ ಜೀವ ಕಳೆದುಕೊಂಡ ಪತ್ರಕರ್ತರೆಷ್ಟು ಗೊತ್ತೇ?
ಹೇಗ್, ಡಿ.10: ವಿಶ್ವದ ವಿವಿಧೆಡೆ ಈ ವರ್ಷ ಕರ್ತವ್ಯ ನಿರ್ವಹಿಸುವ ವೇಳೆ 42 ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ. ಕನಿಷ್ಠ 235 ಮಂದಿ ಪತ್ರಕರ್ತರು ವೃತ್ತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಪ್ರಕಟಿಸಿದೆ.
ಕರ್ತವ್ಯ ನಿರ್ವಹಿಸುವ ವೇಳೆ ಸಾವಿಗೀಡಾದ ಪತ್ರಕರ್ತರ ಪಟ್ಟಿಯನ್ನು ಸುಮಾರು 30 ವರ್ಷಗಳಿಂದ ಜಾಗತಿಕ ಪತ್ರಕರ್ತರ ಸಂಘ ವಾರ್ಷಿಕವಾಗಿ ಬಿಡುಗಡೆ ಮಾಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಇಳಿಮುಖವಾಗುತ್ತಿರುವ ಪ್ರವೃತ್ತಿ ಈ ವರ್ಷವೂ ಮುಂದುವರಿದಿದೆ. ಗುರುವಾರ ಅಂತಾರಾಷ್ಟ್ರೀಯ ಮಾನವ ಹಕ್ಕು ದಿನದಂದು ವರದಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. 42 ಪತ್ರಕರ್ತರು ಜೀವ ತೆತ್ತಿರುವುದು ಸಮಾಧಾನಕರ ವಿಚಾರವೇನಲ್ಲ ಎಂದು ಒಕ್ಕೂಟ ಹೇಳಿದೆ.
ಡಚ್ ಸರಕಾರ ಮತ್ತು ವಿಶ್ವಸಂಸ್ಥೆಯ ಸಾಂಸ್ಕೃತಿಕ ಏಜೆನ್ಸಿಯಾದ ಯುನೆಸ್ಕೊ ಸಹಯೋಗದಲ್ಲಿ ಬುಧವಾರ ಆರಂಭವಾಗಿರುವ ಪತ್ರಿಕಾ ಸ್ವಾತಂತ್ರ್ಯ ಕುರಿತ ಆನ್‌ಲೈನ್ ಸಮ್ಮೇಳನದ ಸಂದರ್ಭದಲ್ಲೇ ಈ ವರದಿ ಬಿಡುಗಡೆಯಾಗುತ್ತಿದೆ.
ಕರ್ತವ್ಯದ ವೇಳೆ ಪ್ರಾಣ ತೆತ್ತ ಪತ್ರಕರ್ತರ ಸಂಖ್ಯೆ ಇಳಿಮುಖವಾಗಿರುವುದು, ಪತ್ರಕರ್ತರಿಗೆ ಇರುವ ಅಪಾಯ ಮತ್ತು ಬೆದರಿಕೆಯ ಅಂಶವನ್ನು ಮುಚ್ಚಿಹಾಕುತ್ತಿದೆ ಎಂದು ಐಎಫ್‌ಜೆ ಪ್ರಧಾನ ಕಾರ್ಯರ್ಶಿ ಅಂತೋನಿ ಬೆಲ್ಲಂಜರ್ ಹೇಳಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಒಟ್ಟು 2,658 ಮಂದಿ ಪತ್ರಕರ್ತರು ಕರ್ತವ್ಯದ ವೇಳೆ ಜೀವ ಕಳೆದುಕೊಂಡಿದ್ದಾರೆ.
"ಇದು ಕೇವಲ ಅಂಕಿ ಅಂಶವಲ್ಲ; ನಮ್ಮ ಮಿತ್ರರು ಹಾಗೂ ಸಹೋದ್ಯೋಗಿಗಳು ತಮ್ಮ ಪ್ರಾಣ ಅರ್ಪಿಸಿದ್ದಾರೆ; ಪತ್ರಕರ್ತ ವೃತ್ತಿಗಾಗಿ ಬೆಲೆ ತೆತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.