ಕೆಂಪು ಕಲ್ಲಿನ ಅಕ್ರಮ ತಡೆಗೆ ದ.ಕ. ಜಿಲ್ಲಾಡಳಿತದ ನಿಗಾ

Update: 2020-12-10 05:30 GMT

ಮಂಗಳೂರು: ಕೆಂಪು ಕಲ್ಲು ಗಣಿಗಾರಿಕೆ (ಪಾಯ) ಮೇಲೆ ಕಟ್ಟು ನಿಟ್ಟಿನ ನಿಗಾ ವಹಿಸಿರುವ ದ.ಕ. ಜಿಲ್ಲಾಡಳಿತ ಇದೀಗ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಗ್ರಾಮ ಮಟ್ಟದ ಟಾಸ್ಕ್‌ಪೋರ್ಸ್’ಗಳನ್ನು ರಚಿಸಲಾಗುತ್ತಿದೆ. ಅನಧಿಕೃತ ಕೆಂಪು ಕಲ್ಲು ಗಣಿಗಾರಿಕೆ ನಡೆಸುವುದಕ್ಕೆ ಎರಡು ವಾರಗಳ ಹಿಂದೆಯೇ ದ.ಕ. ಜಿಲ್ಲಾಡಳಿತ ತಡೆ ನೀಡಿದ್ದು, ಪಿಡಿಒ ಮತ್ತು ಗ್ರಾಮಕರಣಿಕರನ್ನೇ ಹೊಣೆಗಾರರನ್ನಾಗಿಸುವ ಎಚ್ಚರಿಕೆಯನ್ನೂ ನೀಡಿದೆ. ಹೀಗಾಗಿ ಇದೀಗ ಕೆಂಪು ಕಲ್ಲಿನ ವ್ಯವಹಾರ ನಡೆಸುವವರು ತಮ್ಮ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯುವಲ್ಲಿ ಅವಿಭಜಿತ ದ.ಕ. ಜಿಲ್ಲಾ ಕೆಂಪು ಕಲ್ಲು ನಿರ್ವಾಹಕರ ಒಕ್ಕೂಟ ಕಾರ್ಯಪ್ರವೃತ್ತವಾಗಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೆಂಪು ಕಲ್ಲಿನ ವ್ಯವಹಾರ ಬಂದ್ ಆಗಿದ್ದು, ಅನಧಿಕೃತ ವ್ಯವಹಾರವನ್ನು ತಡೆಹಿಡಿಯಲಾಗಿತ್ತು. ಇದೀಗ ವ್ಯವಹಾರ ನಡೆಸಬೇಕಾದವರು ಟಾಸ್ಕ್ ಫೋರ್ಸ್ ಮೂಲಕ ಅನುಮತಿಯನ್ನು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ದ.ಕ., ಉಡುಪಿ, ಉತ್ತರ ಕನ್ನಡ, ಬೀದರ್ ಭಾಗದಲ್ಲಿ ಕೆಂಪು ಕಲ್ಲು ಸಿಗುತ್ತದೆ. ಆದರೆ, ಕೆಂಪು ಕಲ್ಲು ತೆಗೆಯಲು ಪಾಲಿಸಬೇಕಾದ ನಿಯಮದ ಬಗ್ಗೆ ಸರಕಾರದಿಂದ ಅಧಿಕೃತ ಮಾರ್ಗಸೂಚಿಯೇ ಇಲ್ಲ. ಗಣಿ ಇಲಾಖೆಯಿಂದ ಪರವಾನಿಗೆ ಪಡೆದು ಪಾಯ ನಡೆಸಬೇಕು ಎಂದು ಜಿಲ್ಲಾಡಳಿತ ತಿಳಿಸಿದರೆ, ಸುಮಾರು 100ಕ್ಕೂ ಅಧಿಕ ಮಂದಿ 2018ರಲ್ಲಿ ಗಣಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಪರವಾನಿಗೆ ನೀಡಿಲ್ಲ ಎಂಬುದು ಕೆಂಪು ಕಲ್ಲಿನ ವ್ಯವಹಾರ ನಡೆಸುವವರ ಆಕ್ಷೇಪ.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 500ರಷ್ಟು ಕೆಂಪು ಕಲ್ಲಿನ ಪಾಯಗಳಿದ್ದು, ಈ ಪೈಕಿ ಸುಮಾರು 40 ಮಂದಿಯಷ್ಟೇ ಪರವಾನಿಗೆ ಪಡೆದಿದ್ದಾರೆ. ಒಂದು ಕಡೆ ಕೆಂಪು ಕಲ್ಲಿನ ವ್ಯವಹಾರ ಆರಂಭಿಸಿದರೆ ಕನಿಷ್ಠ ಒಂದು ವರ್ಷ ಆ ಜಾಗದಲ್ಲಿ ಕೆಂಪು ಕಲ್ಲನ್ನು ತೆಗೆಯಬಹುದಾಗಿದೆ. ಮನೆ, ಕಟ್ಟಡಗಳಿಗೆ ಈ ಕೆಂಪು ಕಲ್ಲಿನ ಬಳಕೆ ಅತೀ ಅಗತ್ಯವಾಗಿರುವುದರಿಂದ ಬೇಡಿಕೆಯೂ ಬಹಳಷ್ಟಿದೆ. 2016ರಿಂದ ಕೆಂಪು ಕಲ್ಲಿನ ಗಣಿಗಾರಿಕೆಗೆ ಸಂಬಂಧಿಸಿ 3 ಎ ಅರ್ಜಿ ನಮೂನೆ (ಕೃಷಿಗಾಗಿ ಜಮೀನಿನಲ್ಲಿರುವ ಕಲ್ಲನ್ನು ತೆರವುಗೊಳಿಸಲು ಅನುಮತಿ) ಯಡಿ ಪರವಾನಿಗೆಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಬಹುತೇಕವಾಗಿ ಅಂದರೆ ಶೇ. 90ರಷ್ಟು ಮಂದಿ ಕೆಂಪು ಕಲ್ಲಿನ ವ್ಯವಹಾರ ನಡೆಸುವವರು ಇತರರಿಂದ ಜಾಗವನ್ನು ಲೀಸ್‌ಗೆ ಪಡೆದು ವ್ಯವಹಾರ ನಡೆಸುತ್ತಿರುವುದರಿಂದ ಅರ್ಜಿ ಸಲ್ಲಿಸಲು ದಾಖಲೆಗಳನ್ನು ಹೊಂದಿಸುವುದು, ಜಾಗದ ಮಾಲಕರ ಅನುಮತಿಯನ್ನು ಪಡೆಯುವುದು ಕೂಡಾ ಸಮಸ್ಯೆಯಾಗಿತ್ತು. ಹಾಗಾಗಿ ವ್ಯವಹಾರಗಳು ಅಕ್ರಮವಾಗಿಯೇ ನಡೆಯುತ್ತಿತ್ತು. ಹಲವು ಕಡೆಗಳಲ್ಲಿ ಇಂತಹ ಕೆಂಪು ಕಲ್ಲನ್ನು ತೆಗೆದ ಪ್ರದೇಶಗಳಲ್ಲಿ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಹಲವಾರು ಅಪಾಯಗಳಿಗೂ ಕಾರಣವಾದ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದೀಚೆಗೆ ಈ ಕುರಿತು ಜಿಲ್ಲಾಡಳಿತ ಎಚ್ಚರಿಕೆಯನ್ನು ನೀಡುತ್ತಾ ಬಂದಿದೆ.

ಇದೀಗ ಜಿಲ್ಲಾಡಳಿತ ಅಕ್ರಮ ವ್ಯವಹಾರವನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ, ಟಾಸ್ಕ್ ಫೋರ್ಸ್ ಮೂಲಕ ಕ್ರಮಕ್ಕೆ ಮುಂದಾಗಿದೆ. ಪರವಾನಿಗೆಗಾಗಿ ಗಣಿ ಇಲಾಖೆಗೆ ಅರ್ಜಿ ಹಾಕಬೇಕು. ಅರ್ಜಿಯನ್ನು ಗ್ರಾಮ ಮಟ್ಟದ ಟಾಸ್ಕ್‌ಪೋರ್ಸ್‌ಗೆ ರವಾನಿಸಲಾಗುತ್ತದೆ. ಸಂಬಂಧಪಟ್ಟ ಗ್ರಾಮದ ಗ್ರಾಮ ಕರಣಿಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಡಿಆರ್‌ಎ್ಒ, ಸಹಾಯಕ ಕೃಷಿ ಅಧಿಕಾರಿ, ತೋಟಗಾರಿಕಾ ಇಲಾಖೆ ಅಧಿಕಾರಿ, ಸರ್ವೆಯರ್, ಬೀಟ್ ಪೊಲೀಸ್ ತಂಡ ಇದಾಗಿದ್ದು, ಸಂಬಂಧಪಟ್ಟ ಗ್ರಾಮದಲ್ಲಿ ಕೆಂಪು ಕಲ್ಲು ತೆಗೆಯಲು ಮೀಸಲಾದ ಜಾಗದ ಅಧಿಕೃತತೆ ಬಗ್ಗೆ ಈ ತಂಡ ಪರಿಶೀಲಿಸುತ್ತದೆ. ಪಟ್ಟಾ ಜಾಗದ ಬಗ್ಗೆ ಮಾಹಿತಿ, ಅರಣ್ಯ ಭೂಮಿ ಅತಿಕ್ರಮಣ ಮಾಡಿಲ್ಲ; ಬೇರೆಯವರ ಜಾಗದಲ್ಲಿ ಗಣಿಗಾರಿಕೆ ಮಾಡುತ್ತಿಲ್ಲ ಎಂಬ ಪ್ರಮಾಣ ಪತ್ರವನ್ನು 15 ದಿನದೊಳಗೆ ತಹಶೀಲ್ದಾರ್ ಹಾಗೂ ಸಹಾಯಕ ನಿರ್ದೇಶಕರಿಗೆ ನೀಡಲಾಗುತ್ತದೆ. ನಂತರ ಗಣಿ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಕೆಯಾಗುತ್ತದೆ. ಅದರ ಆಧಾರದಲ್ಲಿ 1 ತಿಂಗಳೊಳಗೆ ಪರವಾನಿಗೆಯನ್ನು ಅರ್ಹ ಅರ್ಜಿದಾರರಿಗೆ ನೀಡಲಾಗುತ್ತದೆ.

ದ.ಕ. ಜಿಲ್ಲೆಯಲ್ಲಿ ಅನಧಿಕೃತವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುವುದನ್ನು ತಡೆ ಹಿಡಿಯುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಾಯ ನಡೆಸುವವರು ಗಣಿ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಅದನ್ನು ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಪರಿಶೀಲಿಸಿ ಗಣಿ ಇಲಾಖೆಯು ಒಂದು ತಿಂಗಳ ಒಳಗೆ ಪರವಾನಿಗೆ ನೀಡಲಿದೆ. 

ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

ಕೆಂಪು ಕಲ್ಲಿನ ವ್ಯವಹಾರಗಳು ಸಂಪೂರ್ಣವಾಗಿ ಸಕ್ರಮವಾಗಬೇಕೆಂಬ ಸರಕಾರದ ಒತ್ತಾಸೆಗೆ ನಮ್ಮದೂ ಬೆಂಬಲವಿದೆ. ಕರಾವಳಿ ಭಾಗದಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗ ನೀಡುತ್ತಿರುವ ಕೆಂಪು ಕಲ್ಲು ಪಾಯ ನಡೆಸಲು ಪರವಾನಿಗೆ ಪಡೆದುಕೊಳ್ಳುವಂತೆ ದ.ಕ. ಜಿಲ್ಲಾಡಳಿತ ಸೂಚಿಸಿದೆ. ಅದರಂತೆ ಗಣಿ ಇಲಾಖೆಗೆ ಅರ್ಜಿ ಸಲ್ಲಿಸಲು ಮನವರಿಕೆ ಮಾಡಲಾಗುತ್ತಿದೆ. ಆದರೆ ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ಸುಮಾರು 60ರಷ್ಟು ಅರ್ಜಿಗಳು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಎನ್‌ಒಸಿ ಸಿಗದೆ ಇತ್ಯರ್ಥವಾಗದೆ ಬಾಕಿ ಇದೆ. ಹಾಗಾಗಿ ನಿಯಮಗಳ ಸರಳೀಕರಣದೊಂದಿಗೆ ಕೆಂಪು ಕಲ್ಲಿನ ನಿರ್ವಾಹಕರಿಗೆ ಕನಿಷ್ಠ 3 ತಿಂಗಳು ಕಾಲಾವಕಾಶ ನೀಡುವಂತೆಯೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಕೆಂಪು ಕಲ್ಲು ಪಾಯಕ್ಕೆ ಸಂಬಂಧಿಸಿ ಪ್ರತ್ಯೇಕ ನೀತಿ ಜಾರಿಗೆ ತರುವಂತೆ ಸರಕಾರದ ಗಮನ ಸೆಳೆಯಲಾಗುವುದು. 

ಸತೀಶ್ ಆಚಾರ್ಯ, ಅಧ್ಯಕ್ಷರು, ಅವಿಭಜಿತ ದ.ಕ. ಜಿಲ್ಲಾ ಕೆಂಪು ಕಲ್ಲು ನಿರ್ವಾಹಕರ ಒಕ್ಕೂಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News