×
Ad

ಸಿಆರ್ ಪಿಎಫ್ ಟೀಮ್ ಕೋಚ್, ಮುಖ್ಯ ಕ್ರೀಡಾಧಿಕಾರಿಯಿಂದ ಅತ್ಯಾಚಾರ: ಮಹಿಳಾ ಕಾನ್‍ಸ್ಟೇಬಲ್ ಆರೋಪ

Update: 2020-12-10 11:47 IST

ಹೊಸದಿಲ್ಲಿ : ಕುಸ್ತಿ ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್ ) 30 ವರ್ಷದ  ಮಹಿಳಾ ಕಾನ್‍ಸ್ಟೇಬಲ್ ಒಬ್ಬರು  ತಮ್ಮ ಟೀಮ್ ಕೋಚ್ ಹಾಗೂ ಇನ್‍ಸ್ಪೆಕ್ಟರ್ ಸುರ್ಜಿತ್ ಸಿಂಗ್ ಹಾಗೂ ಡಿಐಜಿ ಮತ್ತು ಮುಖ್ಯ ಕ್ರೀಡಾಧಿಕಾರಿ ಖಜಾನ್ ಸಿಂಗ್ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಬೆದರಿಕೆಯ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ.

''ಸುರ್ಜಿತ್ ಸಿಂಗ್ ಹಾಗೂ ಖಜಾನ್ ಸಿಂಗ್  ತಮ್ಮ ಹಲವು ಸಹವರ್ತಿಗಳ ಜತೆ ಸೇರಿಕೊಂಡು ಮಹಿಳಾ ಕಾನ್‍ಸ್ಟೇಬಲ್‍ಗಳಿಗೆ ಕಿರುಕುಳ ನೀಡಿ ನಂತರ ಅವರನ್ನು ಬಳಸಿಕೊಳ್ಳುತ್ತಾರೆ'' ಎಂದು  ಬಾಬಾ ಹರಿದಾಸ್ ನಗರ್ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 3ರಂದು ದಾಖಲಾದ ದೂರಿನಲ್ಲಿ ಹೇಳಲಾಗಿದೆ. ಸಿಆರ್‍ ಪಿಎಫ್ ನಲ್ಲಿ ಡಿಐಜಿ ಆಗಿರುವ ಆರೋಪಿ ಖಜಾನ್ ಸಿಂಗ್  ಈಜು ಚಾಂಪಿಯನ್ ಆಗಿದ್ದು 1986ರ ಸಿಯೋಲ್ ಏಷ್ಯನ್ ಗೇಮ್ಸ್‍ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ ಹಾಗೂ ಅರ್ಜುನ ಪ್ರಶಸ್ತಿ ಪಡೆದವರೂ ಆಗಿದ್ದಾರೆ.

ಸಂತ್ರಸ್ತೆ ತನ್ನ ದೂರಿನಲ್ಲಿ ತಾನು ಸೆಂಟ್ರಲ್ ಕುಸ್ತಿ ತಂಡವನ್ನು 2012ರಲ್ಲಿ ಸೇರಿದ್ದಾಗಿ, ಆಗ ತಂಡದ ಕೋಚ್ ಆಗಿದ್ದ ಸುರ್ಜಿತ್ ಸಿಂಗ್ ತನಗೆ ಹಾಗೂ ತಂಡದ ಇತರ ಯುವತಿಯರಿಗೆ ತರಬೇತಿ ನೆಪದಲ್ಲಿ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದರು, ಯುವತಿಯರಿಗೆ ಅಶ್ಲೀಲ  ಸಂದೇಶ ಕಳುಹಿಸುತ್ತಿದ್ದರು. ಲೈಂಗಿಕ ಕಿರುಕುಳ ನೀಡಲೆಂದೇ ನಿಗದಿತ ಸಮಯಕ್ಕಿಂತ ಮೊದಲೇ ತರಬೇತಿಗೆ ಹಾಜರಾಗುವಂತೆ ಸೂಚಿಸುತ್ತಿದ್ದರು,'' ಎಂದು ಆರೋಪಿಸಿದ್ದಾರೆ.

``ಖಜಾನ್ ಸಿಂಗ್ ಸೂಚನೆಯಂತೆ ಸುರ್ಜಿತ್ ಸಿಂಗ್  ನಡೆದುಕೊಳ್ಳುತ್ತಿದ್ದರು, ಅಕ್ಟೋಬರ್-ನವೆಂಬರ್ 2014ರಲ್ಲಿ ವಸಂತ್ ಕುಂಜ್‍ನ ಫ್ಲ್ಯಾಟ್ ಒಂದಕ್ಕೆ ಕರೆದೊಯ್ದು ಇಬ್ಬರೂ ಸತತ ಮೂರು ದಿನ ಅತ್ಯಾಚಾರಗೈದಿದ್ದರು'' ಎಂದೂ ಆಕೆ ಆರೋಪಿಸಿದ್ದಾರೆ.

ಸಂತ್ರಸ್ತೆ ಭಟಿಂಡಾ ನಿವಾಸಿಯಾಗಿದ್ದು ಹೆರಿಗೆ ರಜೆ ನಂತರ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ ದೂರನ್ನು ಆಕೆ ನೀಡಿದ್ದಾರೆನ್ನಲಾಗಿದೆ.

''ಸಿಆರ್‍ ಪಿಎಫ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ, ಪೊಲೀಸ್ ತನಿಖೆಗೂ ಸಹಕರಿಸಲಿದೆ'' ಎಂದು ಸಿಆರ್‍ ಪಿಎಫ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News