×
Ad

ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶ: ಸಾರ್ವಜನಿಕ ಸಭೆ ರದ್ದುಪಡಿಸಿದ ತ್ರಿಪುರಾ ಸಿಎಂ

Update: 2020-12-10 12:54 IST

ಅಗರ್ತಲ: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕೇ ಎಂದು ಜನಾಭಿಪ್ರಾಯ ಸಂಗ್ರಹಿಸಲು ತಾನು ಬುಧವಾರ ಕರೆದಿದ್ದ ಸಾರ್ವಜನಿಕ ಸಭೆಯನ್ನು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ರದ್ದುಪಡಿಸಿದ್ದಾರೆ. ರಾಜ್ಯದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸಲು ಬಿಜೆಪಿಯ ನಾಯಕತ್ವ ಮುಂದಾಗಿರುವ ಕಾರಣ ದೇಬ್ ಈ ನಿರ್ಧಾರಕ್ಕೆ ಬಂದಿದ್ದಾರೆ.

ರಾಜ್ಯದಲ್ಲಿ ಅವರ ನಾಯಕತ್ವಕ್ಕೆ ಯಾವುದೇ ಭೀತಿ ಇಲ್ಲ. ಅವರು(ಬಿಪ್ಲಬ್ ದೇಬ್) ತ್ರಿಪುರಾದ ಮುಖ್ಯಮಂತ್ರಿಯಾಗಿ ಜನಸೇವೆ ಮುಂದುವರಿಸಲಿದ್ದಾರೆ.ಪಕ್ಷದಲ್ಲಿನ ವಿಚಾರವನ್ನು ಸಂಘಟನೆಯು ನಿಭಾಯಿಸುತ್ತದೆ ಎಂದು ಬಿಜೆಪಿ ಕೇಂದ್ರ ವೀಕ್ಷಕ ವಿನೋದ್ ಸೋನ್ಕರ್ ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ರಾಜ್ಯದ ಜನರು ತಾನುಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಬಯಸಿದರೆ ನಾನು ಅವರು ಹೇಳಿದಂತೆ ಮಾಡುತ್ತೇನೆ ಎಂದು ದೇಬ್ ಹೇಳಿಕೆ ನೀಡಿದ ಬಳಿಕ ಸೋನ್ಕರ್ ಅವರು ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಬಳಿ ಮಾತನಾಡಿದ್ದಾರೆ. ಯಾವುದೇ ಸಭೆಯನ್ನು ಕರೆಯದಂತೆ ದೇಬ್ ಗೆ ಜೆಪಿ ನಡ್ಡಾ ಸೂಚಿಸಿದ್ದಾರೆ.

ಆಡಳಿತದ ಕುರಿತು ಗಮನ ಹರಿಸುವಂತೆ  ಬಿಜೆಪಿ ನಾಯಕತ್ವದ ದೇಬ್ ಗೆ ಸೂಚಿಸಿದೆ. ದೇಬ್ ಅವರು ಇತರ ನಾಯಕರನ್ನು ಸಂಪರ್ಕಿಸದೇ ಸರಕಾರವನ್ನು ನಡೆಸುತ್ತಿದ್ದಾರೆ ಎಂದು ಪಕ್ಷದ ಸದಸ್ಯರು ದೂರಿದ್ದಾರೆ. ಆದಾಗ್ಯೂ ರಾಜ್ಯದಲ್ಲಿ ನಾಯಕತ್ವ ಬದಲಾಗುವ ಸಾಧ್ಯತೆ  ಇಲ್ಲ. ಪಕ್ಷದ ಕೆಲವು ಶಾಸಕರು ಎತ್ತಿರುವ ವಿಚಾರವನ್ನು ಪಕ್ಷದ ಹೈಕಮಾಂಡ್ ಒಪ್ಪಿಕೊಂಡಿದೆ ಎಂದು ಬಿಜೆಪಿ ಸದಸ್ಯರೊಬ್ಬರು ಹೇಳಿದ್ದಾರೆ.

ರವಿವಾರ ಬಿಜೆಪಿ ಕೇಂದ್ರ ವೀಕ್ಷಕ ಸೋನ್ಕರ್ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಬಿಜೆಪಿಯ ಕೆಲವು ಬೆಂಬಲಿಗರು 'ಬಿಪ್ಲಬ್ ಹಟಾವೋ, ಬಿಜೆಪಿ ಬಚಾವೋ'(ಬ್ಲಿಪಬ್ ಅವರನ್ನು ತೊಲಗಿಸಿ, ಬಿಜೆಪಿಯನ್ನುಉಳಿಸಿ)ಎಂಬ ಘೋಷಣೆ ಕೂಗಿದ್ದರು. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಮುಖ್ಯಮಂತ್ರಿಯ ಕುರಿತು ಅಸಮಾಧಾನ ಇರುವುದು ಇದರಿಂದ ಬಹಿರಂಗವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News