ಚೀನಾ-ಪಾಕ್ ಮೇಲೆ ತಕ್ಷಣವೇ ಸರ್ಜಿಕಲ್ ಸ್ಟ್ರೈಕ್ ನಡೆಸಿ: ಕೇಂದ್ರ ಸಚಿವರ ಹೇಳಿಕೆಗೆ ಶಿವಸೇನೆ ವ್ಯಂಗ್ಯ

Update: 2020-12-10 08:09 GMT

ಹೊಸದಿಲ್ಲಿ: ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ ಎಂಬ ಕುರಿತು ಕೇಂದ್ರ ಸಚಿವರಿಗೆ ಮಾಹಿತಿ ಇರುವುದೇ ಆಗಿದ್ದರೆ ತಕ್ಷಣವೇ ಆ ಎರಡು ದೇಶಗಳ ಮೇಲೆ ನಿಖರ ದಾಳಿ ನಡೆಸಿ ಎಂದು ಶಿವಸೇನೆ ಹೇಳಿದೆ. ಈಮೂಲಕ ಮಾಜಿ ಮೈತ್ರಿಪಕ್ಷ ಬಿಜೆಪಿಯ ಕಾಲೆಳೆದಿದೆ.

"ರೈತರ ಪ್ರತಿಭಟನೆಯ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ ಎಂಬ ಮಾಹಿತಿಯು ಕೇಂದ್ರ ಸಚಿವರ ಬಳಿ ಇರುವುದೇ ಆಗಿದ್ದರೆ, ರಕ್ಷಣಾ ಸಚಿವರು ತಕ್ಷಣವೇ ಚೀನಾ ಹಾಗೂ ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು. ರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವರು ಹಾಗೂ ಸಶಸ್ತ್ರ ಪಡೆಗಳ ಮುಖ್ಯಸ್ಥರು ಈ ವಿಚಾರದ ಕುರಿತು ಗಂಭೀರ ಚರ್ಚೆ ನಡೆಸಬೇಕು'' ಎಂದು ಶಿವಸೇನೆಯ ರಾಜ್ಯಸಭಾ ಸದಸ್ಯ ಹಾಗೂ ಪಕ್ಷದ ಮುಖ್ಯ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.

ದಿಲ್ಲಿಯ ಹೊರವಲಯದ ಹೆದ್ದಾರಿಗಳಲ್ಲಿ ರೈತರು ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವಾಗ ಕೇಂದ್ರ ಸಚಿವ ರಾವ್ ಸಾಹೇಬ್ ದಾನ್ವೆ ಅವರು ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿಂದೆ ಚೀನಾ ಹಾಗೂ ಪಾಕಿಸ್ತಾನದ ಕೈವಾಡವಿದೆ. ಸಿಎಎ ಕುರಿತು ಈ ಹಿಂದೆ ಮುಸ್ಲಿಮರನ್ನು ಪ್ರಚೋದಿಸಲಾಗಿತ್ತು ಎಂದು ಮಹಾರಾಷ್ಟದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ದಾನ್ವೆ ಹೇಳಿದ್ದರು.

ದಾನ್ವೆ ಹೇಳಿಕೆಗೆ ಪ್ರಮುಖ ಸಿಖ್ ಸಂಸ್ಥೆ ಖಂಡನೆ

ರೈತರ ಪ್ರತಿಭಟನೆ ಹಿಂದೆ ನೆರೆಯ ರಾಷ್ಟ್ರಗಳ ಕೈವಾಡವಿದೆ ಎಂಬ ಕೇಂದ್ರ ಸಚಿವರ ಹೇಳಿಕೆಗೆ ಪ್ರಮುಖ ಸಿಖ್ ಸಂಸ್ಥೆ ದಿಲ್ಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಖಂಡಿಸಿದೆ.

“ರೈತರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾರೆ ಹಾಗೂ ನ್ಯಾಯ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ..ರೈತರು ಸ್ವತಃ ರಾಷ್ಟ್ರಕ್ಕಾಗಿ ಹೋರಾಡಿ ಸಾಯುತ್ತಿದ್ದಾರೆ. ಅವರ ಮಕ್ಕಳು, ರಾಷ್ಟಕ್ಕಾಗಿ ಹುತಾತ್ಮರಾಗಿದ್ದಾರೆ. ಅವರನ್ನು ರಾಷ್ಟ್ರ ವಿರೋಧಿಗಳೆಂದು ಬಿಂಬಿಸಲು ಪ್ರಯತ್ನಿಸಬೇಡಿ'' ಎಂದು ಸಂಘಟನೆಯ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಬುಧವಾರ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News