ಗೃಹ ಇಲಾಖೆಯ ಸಮನ್ಸ್ ತಿರಸ್ಕರಿಸಿದ ಮಮತಾ ಬ್ಯಾನರ್ಜಿ

Update: 2020-12-11 17:37 GMT

ಕೋಲ್ಕತಾ, ಡಿ.11: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾರ ಬೆಂಗಾವಲಿನ ವಾಹನಗಳ ಮೇಲೆ ಗುರುವಾರ ಪಶ್ಚಿಮ ಬಂಗಾಳದಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಅಧಿಕಾರಿಗಳು ಡಿ.14ರಂದು ದಿಲ್ಲಿಯಲ್ಲಿ ನಡೆಯುವ ಸಭೆಯಲ್ಲಿ ಹಾಜರಿರಬೇಕು ಎಂಬ ಕೇಂದ್ರ ಗೃಹ ಸಚಿವಾಲಯದ ಸಮನ್ಸ್ ಅನಗತ್ಯ ಕ್ರಮ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ವಿಧಾಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಗಮನ ಸೆಳೆಯಲು ಕೇಸರಿ ಪಡೆ ಮಾಡಿರುವ ಷಡ್ಯಂತ್ರ ಇದಾಗಿದೆ. ಗುರುವಾರ ನಡೆದಿರುವುದು ಬಿಜೆಪಿ ಪ್ರೇರಿತ ನಾಟಕ ಅಷ್ಟೇ. ಇದನ್ನೇ ನೆಪವಾಗಿರಿಸಿಕೊಂಡು ಕೇಂದ್ರ ಗೃಹ ಇಲಾಖೆಯು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರನ್ನು ದಿಲ್ಲಿಗೆ ಬರುವಂತೆ ಸಮನ್ಸ್ ನೀಡಿದೆ. ಆದರೆ ಇದು ಅಸಾಂವಿಧಾನಿಕವಾಗಿದ್ದು ಬಿಜೆಪಿ ಹಾಗೂ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯಡಿ ಇರುವ ರಾಜ್ಯಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿರುವ ದ್ಯೋತಕವಾಗಿದೆ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಈ ಮಧ್ಯೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವ ಮುಖ್ಯ ಕಾರ್ಯದರ್ಶಿ, ಬೆಂಗಾವಲು ವಾಹನದ ಮೇಲಿನ ದಾಳಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಮೂರು ಪ್ರಕರಣ ದಾಖಲಿಸಿ 7 ಜನರನ್ನು ಬಂಧಿಸಲಾಗಿದೆ. ಅಲ್ಲದೆ ನಡ್ಡಾರಿಗೆ ‘ಝಡ್’ ಶ್ರೇಣಿಯ ಭದ್ರತೆ ಒದಗಿಸಲಾಗಿತ್ತು. ಬುಲೆಟ್ ಪ್ರೂಫ್ ಕಾರು, ಬೆಂಗಾವಲು ವಾಹನ, ಭದ್ರತಾ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಭದ್ರತೆಯ ಉಸ್ತುವಾರಿಯನ್ನು ಡಿಐಜಿಗೆ ವಹಿಸಲಾಗಿತ್ತು. ನಾಲ್ವರು ಪೊಲೀಸ್ ಅಧೀಕ್ಷಕರು, 8 ಉಪ ಅಧೀಕ್ಷಕರು, 14 ಇನ್‌ಸ್ಪೆಕ್ಟರ್‌ಗಳು, 70 ಸಬ್ ಇನ್‌ಸ್ಪೆಕ್ಟರ್‌ಗಳು, 40 ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ, 259 ಕಾನ್‌ಸ್ಟೇಬಲ್‌ಗಳು ಹಾಗೂ 350 ಇತರ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಜೊತೆಗೆ ಕೇಂದ್ರ ಸರಕಾರ ಮಾಡಿದ್ದ ಹೆಚ್ಚುವರಿ ಭದ್ರತಾ ವ್ಯವಸ್ಥೆಯಿತ್ತು. ನಡ್ಡಾರ ವಾಹನದ ಹಿಂದೆ ಬಿಜೆಪಿ ಮುಖಂಡರ ಹಲವು ವಾಹನಗಳು ಸಂಚರಿಸಿದ್ದು ಗೊಂದಲ ಮತ್ತು ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಮಾಡಿದ್ದ ಪ್ರಚೋದನಕಾರಿ ಭಾಷಣ ಹಿಂಸಾತ್ಮಕ ವಾತಾವರಣ ನೆಲೆಸಲು ಕಾರಣವಾಗಿದೆ. ನಡ್ಡಾರ ಜೊತೆ ಬಿಜೆಪಿಗೆ ಸೇರಿದ ಕ್ರಿಮಿನಲ್‌ಗಳು ಹಾಗೂ ಸಶಸ್ತ್ರ ಕಾರ್ಯಕರ್ತರ ತಂಡವೇ ಆಗಮಿಸಿತ್ತು ಎಂದು ಟಿಎಂಸಿ ಹಿರಿಯ ಮುಖಂಡ ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News