ಹೃದಯದಲ್ಲಿ ಸೋಂಕು ಮತ್ತು ಅದರ ಲಕ್ಷಣಗಳು

Update: 2020-12-11 17:49 GMT

ವೈರಸ್, ಬ್ಯಾಕ್ಟೀರಿಯಾ ಅಥವಾ ಶಿಲೀಂದ್ರ ಇವು ಹೃದಯದ ಅಂಗಾಂಶಗಳಲ್ಲಿ ಸೋಂಕನ್ನುಂಟು ಮಾಡುತ್ತವೆ. ಹೃದಯವು ಎಂಡೊಕಾರ್ಡಿಯಂ, ಮೈಯೊಕಾರ್ಡಿಯಂ ಮತ್ತು ಪೆರಿಕಾರ್ಡಿಯಂ ಇವುಗಳನ್ನು ಒಳಗೊಂಡಿರುತ್ತದೆ. ಹೃದಯದಲ್ಲಿ ಸೋಂಕು ಜನರಿಗೆ ಹೆಚ್ಚಾಗಿ ಗೊತ್ತಿರದ ಕಾಯಿಲೆಯಾಗಿದೆ.

ಎಂಡೊಕಾರ್ಡಿಯಂ ಹೃದಯದ ಅತ್ಯಂತ ಒಳಭಾಗದಲ್ಲಿರುವ ಪದರವಾಗಿದ್ದು,ಹೃದಯದ ಕವಾಟಗಳನ್ನು ಒಳಗೊಂಡಿರುತ್ತದೆ. ಮೈಯೊಕಾರ್ಡಿಯಂ ಹೃದಯದ ಸ್ನಾಯು ಭಾಗವಾಗಿದ್ದು ಹೆಚ್ಚಿನ ಪ್ರಮಾಣದ ಹೃದಯ ಅಂಗಾಂಶಗಳನ್ನು ಒಳಗೊಂಡಿರುತ್ತದೆ. ಪೆರಿಕಾರ್ಡಿಯಂ ಹೃದಯದ ಹೊರಾವರಣವಾಗಿದ್ದು,ಪೆರಿಕಾರ್ಡಿಯಲ್ ದ್ರವವನ್ನು ಒಳಗೊಂಡಿರುತ್ತದೆ. ಇದು ಹೃದಯಕ್ಕೆ ಕೀಲೆಣ್ಣೆಯಂತೆ ಕೆಲಸ ಮಾಡುತ್ತದೆ ಮತ್ತು ಹೃದಯವು ತನ್ನ ಅಂಗರಚನಾ ಸ್ಥಾನದಲ್ಲಿರಲು ನೆರವಾಗುತ್ತದೆ. ಎಂಡೊಕಾರ್ಡಿಯಂ ಸೋಂಕಿಗೊಳಗಾದರೆ ಅದನ್ನು ಎಂಡೊಕಾರ್ಡಿಟಿಸ್ ಎಂದು ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದ ಮತ್ತು ಕೆಲವೊಮ್ಮೆ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಇದೇ ರೀತಿ ಮೈಯೊಕಾರ್ಡಿಯಂ ಸೋಂಕನ್ನು ಮೈಯೊಕಾರ್ಡಿಟಿಸ್ ಮತ್ತು ಪೆರಿಕಾರ್ಡಿಯಂ ಸೋಂಕನ್ನು ಪೆರಿಕಾರ್ಡಿಟಿಸ್ ಎಂದು ಕರೆಯಲಾಗುತ್ತದೆ.

ಹೃದಯ ಸೋಂಕಿನ ಲಕ್ಷಣಗಳು

ಎಂಡೊಕಾರ್ಡಿಟಿಸ್: ಜ್ವರದೊಂದಿಗೆ ವ್ಯಕ್ತಿಯು ನಿಸ್ತೇಜನಾಗಿರುತ್ತಾನೆ. ನಾಡಿಮಿಡಿತವು ಅಧಿಕವಾಗಿರುತ್ತದೆ. ಶ್ವಾಸಕೋಶಗಳ ಒತ್ತಡ ಹೆಚ್ಚುತ್ತದೆ. ಈ ಹೆಚ್ಚಿನ ಒತ್ತಡವು ಶ್ವಾಸಕೋಶಗಳಲ್ಲಿ ದ್ರವ ಸಂಗ್ರಹಗೊಳ್ಳಲು ಕಾರಣವಾಗುತ್ತದೆ ಮತ್ತು ಇದು ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ.

ಮೈಯೊಕಾರ್ಡಿಟಿಸ್: ಈ ವಿಧದ ಸೋಂಕಿನಲ್ಲಿ ರೋಗಿಯಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ ಮತ್ತು ಹೃದಯವು ಹೆಚ್ಚು ಬಡಿದುಕೊಳ್ಳುತ್ತದೆ. ಹೃದಯದ ಪಂಪಿಂಗ್ ಕಾರ್ಯ ಕಡಿಮೆಯಾಗುತ್ತದೆ . ಇದರಿಂದಾಗಿ ಹೃದಯದ ಕೋಣೆಗಳು ಹಿಗ್ಗುತ್ತವೆ. ರೋಗಿಯಲ್ಲಿ ಎದೆ ಡವಗುಡುವ,ಉಸಿರಾಟಕ್ಕೆ ತೊಂದರೆಯ ಮತ್ತು ಕೆಲವೊಮ್ಮೆ ಎದೆನೋವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಪೆರಿಕಾರ್ಡಿಟಿಸ್: ಈ ವಿಧದ ಸೋಂಕಿನಲ್ಲಿಯೂ ರೋಗಿಯಲ್ಲಿ ಜ್ವರ ಮತ್ತು ಹೆಚ್ಚಿನ ಹೃದಯ ಬಡಿತ ಕಾಣಿಸಿಕೊಳ್ಳುತ್ತವೆ. ದೀರ್ಘಕಾಲದಲ್ಲಿ ಇದು ಕನ್‌ಸ್ಟ್ರಿಕ್ಟಿವ್ ಪೆರಿಕಾರ್ಡಿಟಿಸ್ ಅನ್ನು ಉಂಟು ಮಾಡುತ್ತದೆ ಮತ್ತು ಇದು ಹೃದಯದ ಸೂಕ್ತ ಹಿಗ್ಗುವಿಕೆಗೆ ಅವಕಾಶನ್ನು ನೀಡುವುದಿಲ್ಲ. ರೋಗಿಯಲ್ಲಿ ಉಸಿರಾಟಕ್ಕೆ ತೊಂದರೆಯಾಗುತ್ತದೆ ಮತ್ತು ಶರೀರದಾದ್ಯಂತ ದ್ರವ ಶೇಖರಗೊಳ್ಳುವುದರಿಂದ,ಮುಖ್ಯವಾಗಿ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News