ಮಗುವಿನ ಪಾಲನೆ ಪೋಷಣೆಯಲ್ಲಿ ಆರ್ಥಿಕ ಪರಿಸ್ಥಿತಿ ಮಾತ್ರ ಮುಖ್ಯವಲ್ಲ: ಹೈಕೋರ್ಟ್ ಅಭಿಮತ

Update: 2020-12-12 14:22 GMT

ಲಕ್ನೊ, ಡಿ.12: ಇಬ್ಬರೂ ಪೋಷಕರ (ತಂದೆ, ತಾಯಿ)ಯ ಜೊತೆಯಲ್ಲೇ ಇರುವ ಹಕ್ಕನ್ನು ಎಲ್ಲಾ ಮಕ್ಕಳೂ ಹೊಂದಿದ್ದಾರೆ. ವಿಚ್ಛೇದನ ಪಡೆದ ದಂಪತಿಯಲ್ಲಿ ಮಗುವನ್ನು ಒಬ್ಬರ ಅಧೀನಕ್ಕೆ ನೀಡಿದರೆ, ಇನ್ನೊಬ್ಬರಿಗೂ ಮಗುವನ್ನು ಭೇಟಿ ಮಾಡುವ ಹಕ್ಕನ್ನು ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಿಚ್ಛೇದನದ ಅರ್ಜಿಯ ವಿಚಾರಣೆ ಸಂದರ್ಭ ಮಗುವನ್ನು ಯಾರ ಅಧೀನಕ್ಕೆ ನೀಡಬೇಕು ಎಂಬ ಪ್ರಶ್ನೆ ಬರುತ್ತದೆ. ಈ ವಿಷಯವನ್ನು ಕೇವಲ ಆರ್ಥಿಕ ಸ್ಥಿತಿಗತಿಯನ್ನು ಮಾತ್ರ ಪರಿಗಣಿಸಿ ನಿರ್ಧರಿಸಬಾರದು. ಮಗುವಿನ ಬೆಳವಣಿಗೆ ಹಂತದಲ್ಲಿ ಪರಿಣಾಮ ಬೀರುವ ಪೋಷಕರ ಬೌದ್ಧಿಕ ಮಾರ್ಗದರ್ಶನ, ನೈತಿಕ ಶಿಕ್ಷಣ ಮುಂತಾದ ವಿಷಯಗಳನ್ನೂ ಪರಿಗಣಿಸಬೇಕು ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಜೆಜೆ ಮುನೀರ್ ಹೇಳಿದ್ದಾರೆ.

ತನ್ನ ವಶದಲ್ಲಿದ್ದ ಮಗುವನ್ನು ಪತಿ ಬಲವಂತದಿಂದ ಕರೆದುಕೊಂಡು ಹೋಗಿದ್ದು ಮಗುವನ್ನು ತನ್ನ ಅಧೀನಕ್ಕೆ ಒಪ್ಪಿಸಬೇಕೆಂದು ಕೋರಿ ಮಹಿಳೆಯೊಬ್ಬಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಳು. 2014ರಂದು ವಿವಾಹವಾಗಿದ್ದು 2016ರಲ್ಲಿ ಮಗು ಜನಿಸಿದೆ. ಬಳಿಕ ಪತಿಯ ಮನೆಯವರು ವರದಕ್ಷಿಣೆಗಾಗಿ ಹಿಂಸಿಸುತ್ತಿದ್ದರಿಂದ 2018ರಲ್ಲಿ ಮಗುವನ್ನು ಕರೆದುಕೊಂಡು ತಂದೆಯ ಮನೆಗೆ ಮರಳಿದ್ದೇನೆ. ಆದರೆ 2019ರ ಎಪ್ರಿಲ್‌ನಲ್ಲಿ ಮನೆಗೆ ಬಂದ ಪತಿ ಮಗುವನ್ನು ಬಲವಂತದಿಂದ ಕರೆದೊಯ್ದಿರುವುದಾಗಿ ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಳು.

ಅರ್ಜಿಯ ವಿಚಾರಣೆ ಸಂದರ್ಭ ಹೇಳಿಕೆ ನೀಡಿದ ಮಹಿಳೆಯ ಪತಿ, ತಾನೊಬ್ಬ ರೈತನಾಗಿದ್ದು ಕೃಷಿಯಿಂದ ವಾರ್ಷಿಕ ಸುಮಾರು 1.5 ಲಕ್ಷ ರೂ. ಆದಾಯವಿದೆ. ಆದರೆ ಅರ್ಜಿದಾರರಿಗೆ(ಪತ್ನಿ) ವೈಯಕ್ತಿಕ ಆದಾಯ ಮೂಲವಿಲ್ಲ ಮತ್ತು ಪಿತ್ರಾರ್ಜಿತವಾಗಿರುವ ಕೃಷಿ ಭೂಮಿಯ ಆದಾಯವನ್ನು ಅವಲಂಬಿಸಿದ್ದಾರೆ. ಆದ್ದರಿಂದ ಆಕೆಯಿಂದ ಮಗುವಿನ ಪಾಲನೆ ಸರಿಯಾಗಿ ನಿರ್ವಹಿಸಲಾಗದು ಎಂದು ವಾದಿಸಿದ್ದ.

ಆದರೆ ಈ ವಾದವನ್ನು ಮಾನ್ಯ ಮಾಡದ ನ್ಯಾಯಾಲಯ, ಮಹಿಳೆ ತನ್ನ ಪತಿಗಿಂತ ಹೆಚ್ಚಿನ ವಿದ್ಯಾವಂತೆ ಮತ್ತು ಸ್ನಾತಕೋತ್ತರ ಪದವೀಧರೆ. ಮಗು ತಾಯಿಯ ರಕ್ಷಣೆಯಲ್ಲಿಯೇ ಬೆಳೆಯುವುದು ಉತ್ತಮ ಎಂದು ಮನಗಂಡಿರುವುದರಿಂದ ತಾಯಿಯ ಅಧೀನಕ್ಕೆ ನೀಡಬೇಕು. ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ರವಿವಾರ ಮಗುವನ್ನು ಭೇಟಿಯಾಗಲು ತಂದೆಗೆ ಅವಕಾಶ ನೀಡಬೇಕೆಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News