ದಿಲ್ಲಿ-ಜೈಪುರ ಹೆದ್ದಾರಿ ಬಂದ್ ಮಾಡುವ ರೈತರ ಬೆದರಿಕೆಯ ಹಿನ್ನೆಲೆ: ತರಾತುರಿಯಲ್ಲಿ ಸಭೆ ಸೇರಿದ ಕೇಂದ್ರ ಸಚಿವರು

Update: 2020-12-13 18:08 GMT

ಹೊಸದಿಲ್ಲಿ,ಡಿ.13: ಕೇಂದ್ರದ ನೂತನ ಕೃಷಿ ಕಾನೂನುಗಳ ವಿರುದ್ಧ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ಸಾವಿರಾರು ರೈತರು ದಿಲ್ಲಿ-ಜೈಪುರ ಹೆದ್ದಾರಿಯಲ್ಲಿ ತಡೆಯನ್ನುಂಟು ಮಾಡುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಗೃಹಸಚಿವ ಅಮಿತ್ ಶಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಸಹಾಯಕ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸೋಮಪ್ರಕಾಶ್ ಸೇರಿದಂತೆ ಹಿರಿಯ ಸಚಿವರು ರವಿವಾರ ತರಾತುರಿಯಲ್ಲಿ ಸಭೆಗಳನ್ನು ನಡೆಸಿ ಚರ್ಚಿಸಿದರು.

ನೂತನ ಕೃಷಿಕಾನೂನುಗಳ ಕುರಿತು ಕೇಂದ್ರ ಮತ್ತು ರೈತರ ನಡುವಿನ ಬಿಕ್ಕಟ್ಟು ರವಿವಾರ 18ನೇ ದಿನಕ್ಕೆ ಕಾಲಿರಿಸಿದ್ದು,ಬೆಳಿಗ್ಗೆ ತೋಮರ್ ಮತ್ತು ಸೋಮಪ್ರಕಾಶ ಅವರು ಶಾ ಅವರನ್ನು ಭೇಟಿಯಾಗಿ ಚರ್ಚಿಸಿದರು. ಪಂಜಾಬಿನ ಬಿಜೆಪಿ ನಾಯಕರು ಸಚಿವರ ಜೊತೆಯಲ್ಲಿದ್ದರು.

ತೋಮರ್, ಸೋಮಪ್ರಕಾಶ್ ಮತ್ತು ಅವರ ಸಂಪುಟ ಸಹೋದ್ಯೋಗಿ ಪಿಯೂಷ್ ಗೋಯಲ್ ಅವರು ಪ್ರತಿಭಟನಾನಿರತ ರೈತರೊಂದಿಗೆ ಸರಕಾರದ ಮಾತುಕತೆಗಳ ನೇತೃತ್ವ ವಹಿಸಿದ್ದಾರೆ.

ತೋಮರ್ ಮತ್ತು ಸೋಮಪ್ರಕಾಶ್ ಅವರು ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದು,ಅವರ ನಡುವಿನ ಮಾತುಕತೆಗಳ ವಿವರಗಳು ತಕ್ಷಣಕ್ಕೆ ಬಹಿರಂಗಗೊಂಡಿಲ್ಲ.

 ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಪ್ರತಿಭಟನಾನಿರತ ರೈತರು ರಾಜಸ್ಥಾನ-ಹರ್ಯಾಣ ಗಡಿಯ ಶಹಜಹಾನ್‌ಪುರದಿಂದ ಸಾವಿರಾರು ಟ್ರಾಕ್ಟರ್‌ಗಳಲ್ಲಿ ಜಾಥಾ ಆರಂಭಿಸಿದ ಬಳಿಕ ಮಧ್ಯಾಹ್ನದ ವೇಳೆಗೆ ದಿಲ್ಲಿ-ಜೈಪುರ ಹೆದ್ದಾರಿಯನ್ನು ಮುಚ್ಚಲಾಗಿತ್ತು. ಚಿಲ್ಲಾದಲ್ಲಿ ದಿಲ್ಲಿ-ನೊಯ್ಡಾ ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ರೈತರು ಕಿತ್ತೆಸೆದ ಬಳಿಕ ಒಂದು ಹೆದ್ದಾರಿ ಮುಕ್ತಗೊಂಡಿತ್ತು. ತಮ್ಮ ಪ್ರತಿಭಟನೆಗೆ ಇನ್ನಷ್ಟು ಕಾವು ಮೂಡಿಸಲು ಎಲ್ಲ ಕೃಷಿ ಒಕ್ಕೂಟಗಳ ನಾಯಕರು ಸೋಮವಾರ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ದೇಶಾದ್ಯಂತ ಉಪವಾಸ ಮುಷ್ಕರವನ್ನು ಕೈಗೊಳ್ಳಲಿದ್ದಾರೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಪ್ರತಿಭಟನೆಗಳನ್ನು ನಡೆಸಲಿದ್ದಾರೆ ಎಂದು ರೈತನಾಯಕ ಗುರ್ನಾಮ್ ಸಿಂಗ್ ಚಾದುನಿ ಅವರು ರವಿವಾರ ಸಿಂಘು ಗಡಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಸೋಮವಾರ ರೈತರೊಂದಿಗೆ ಉಪವಾಸ ಮುಷ್ಕರದಲ್ಲಿ ಭಾಗಿಯಾಗುವುದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ತನ್ಮಧ್ಯೆ,ಕೇಂದ್ರವು ರೈತರ ಆಂದೋಲನವನ್ನು ವಿಫಲಗೊಳಿಸಲು ಮತ್ತು ಅವರಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಸಂಯುಕ್ತ ಕಿಸಾನ್ ಆಂದೋಲನದ ನಾಯಕ ಕಮಲ್ ಪ್ರೀತ್ ಸಿಂಗ್ ಪನ್ನು ಆರೋಪಿಸಿದ್ದಾರೆ.

ಶನಿವಾರ ಹರ್ಯಾಣದ ರೈತ ನಿಯೋಗವೊಂದು ಕೇಂದ್ರಕ್ಕೆ ಪತ್ರವೊಂದನ್ನು ಬರೆದು ನೂತನ ಕೃಷಿ ಕಾನೂನುಗಳಿಗೆ ಬೆಂಬಲವನ್ನು ವ್ಯಕ್ತಪಡಿಸಿತ್ತು.

ನಮ್ಮ ಆಂದೋಲನವನ್ನು ವಿಫಲಗೊಳಿಸುವ ಕೇಂದ್ರದ ಯಾವುದೇ ಪ್ರಯತ್ನವನ್ನು ನಾವು ಹತ್ತಿಕ್ಕುತ್ತೇವೆ. ನಮ್ಮಲ್ಲಿ ಒಡಕು ಮೂಡಿಸಲು ಮತ್ತು ಜನರನ್ನು ಪ್ರಚೋದಿಸಲು ಸರಕಾರವು ಕೆಲವು ಸಣ್ಣಪುಟ್ಟ ಪ್ರಯತ್ನಗಳನ್ನು ಮಾಡಿದೆ. ಆದರೆ ನಾವು ಈ ಆಂದೋಲನವನ್ನು ಶಾಂತಿಯುತವಾಗಿ ವಿಜಯದತ್ತ ಮುನ್ನಡೆಸುತ್ತೇವೆ

ಕಮಲ ಪ್ರೀತ್ ಸಿಂಗ್ ಪನ್ನು ಸಂಯುಕ್ತ ಕಿಸಾನ್, ಆಂದೋಲನದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News