ಶೀಘ್ರ ಹರಡುವ, ಹೊಸ ವಿಧದ ಕೊರೋನ ವೈರಸ್ ಪತ್ತೆ: ವರದಿ

Update: 2020-12-14 17:32 GMT

ಲಂಡನ್,ಡಿ.14: ಜಗತ್ತಿನಾದ್ಯಂತ ಕೊರೋನ ವೈರಸ್ ಗೆ ನೂತನ ಲಸಿಕೆ ನೀಡಲು ಪ್ರಾರಂಭಿಸುತ್ತಿದ್ದರೆ, ಯುನೈಟೆಡ್ ಕಿಂಗ್ಡಮ್ ರಾಜಧಾನಿ ಲಂಡನ್ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ನಿರ್ಬಂಧ ವಿಧಿಸಲು ಮುಂದಾಗಿದೆ. ಲಂಡನ್ ಮತ್ತು ಇತರ ಭಾಗಗಳಲ್ಲಿ ಕೊರೋನ ವೈರಸ್ ವೇಗವಾಗಿ ಹರಡುತ್ತಿದ್ದು, ಈ ಕಾರಣದಿಂದಾಗಿ ಹೆಚ್ಚಿನ ನಿರ್ಬಂಧ ಹೇರಲಾಗುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್ “ಲಂಡನ್ ನಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ತೀವ್ರ ಪ್ರಮಾಣದ ಹೆಚ್ಚಳ ಕಂಡು ಬಂದಿದೆ. ಜನರ ಆರೋಗ್ಯ ದೃಷ್ಟಿಯನ್ನು ಮುಂದಿಟ್ಟುಕೊಂಡು ನಿರ್ಬಂಧ ವಿಧಿಸುವುದು ಅವಶ್ಯಕವಾಗಿದೆ. ಈಗಾಗಲೇ ವಿಜ್ಞಾನಿಗಳು ಹೊಸ ವಿಧದ ಕೊರೋನ ವೈರಸ್ ಅನ್ನು ದಕ್ಷಿಣ ಇಂಗ್ಲೆಂಡ್ ನಲ್ಲಿ ಪತ್ತೆ ಹಚ್ಚಿದ್ದಾರೆ. ಇದು ಅತೀ ಶೀಘ್ರ ಪ್ರಮಾಣದಲ್ಲಿ ಸೋಂಕು ಉಂಟುಮಾಡುತ್ತದೆ. ಆದರೂ ಈ ವಿಧದ ವೈರಸ್ ಯಾವುದೇ ಗಂಭೀರ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಯಿಲ್ಲ. ಇದು ಕೋವಿಡ್ ಲಸಿಕೆ ನೀಡಿದರೆ ಗುಣವಾಗಬಹುದು ಎಂದೂ ಹೇಳಿದ್ದಾರೆ.

ಲಂಡನ್ ನಲ್ಲಿ ಸದ್ಯ ವೈರಸ್ ಹರಡುವ ಪ್ರಮಾಣ ಹೆಚ್ಚಾಗಿದ್ದು, ಹಲವಾರು ನಿಯಮಗಳನ್ನು ವಿಧಿಸಲಾಗಿದೆ. ದಿನಬಳಕೆಯ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆರು ಜನಕ್ಕಿಂತ ಹೆಚ್ಚು ಮಂದಿ ಸಾರ್ವಜನಿಕವಾಗಿ ಸೇರುವಂತಿಲ್ಲ ಹಾಗೂ ಮನೆಯವರೆಒಂದಿಗೆ ಮಾತ್ರ ಜೊತೆಯಾಗಿರಬಹುದು ಮುಂತಾದ ಕಟ್ಟಳೆಗಳನ್ನು ವಿಧಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News