ಭೂಮಿಗೆ ಮರಳುತ್ತಿರುವ ಚೀನಾದ ಚಂದ್ರ ಶೋಧಕ ನೌಕೆ
ಬೀಜಿಂಗ್, ಡಿ. 14: ಚಂದ್ರನ ಮೇಲ್ಮೈಯಿಂದ ಕಲ್ಲು ಮತ್ತು ಮಣ್ಣುಗಳ ಮಾದರಿಗಳನ್ನು ಹೊತ್ತ ಚೀನಾದ ಚಂದ್ರ ಶೋಧಕ ನೌಕೆಯು ಭೂಮಿಯತ್ತ ತನ್ನ ಪ್ರಯಾಣವನ್ನು ಆರಂಭಿಸಿದೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾ ರವಿವಾರ ವರದಿ ಮಾಡಿದೆ.
ಅದು ಯಶಸ್ವಿಯಾಗಿ ಭೂಮಿಯನ್ನು ತಲುಪಿದರೆ ಅಮೆರಿಕ ಮತ್ತು ರಶ್ಯಗಳ ಬಳಿಕ ಚಂದ್ರನಿಂದ ಮಾದರಿಗಳನ್ನು ತಂದ ಮೂರನೇ ದೇಶವಾಗಲಿದೆ. ಅದೂ ಅಲ್ಲದೆ, 1970ರ ದಶಕದ ಬಳಿಕ ಚಂದ್ರನಿಂದ ಮಾದರಿಗಳನ್ನು ತಂದ ಮೊದಲ ದೇಶವಾಗಲಿದೆ.
ಚಂದ್ರ ಶೋಧಕ ನೌಕೆ ‘ಚಾಂಗೆ-5’ರ ಯಂತ್ರಗಳನ್ನು ರವಿವಾರ ಚಂದ್ರನ ಮೇಲ್ಮೈಯಿಂದ 230 ಕಿ.ಮೀ. ದೂರದಲ್ಲಿ ಆರಂಭಿಸಲಾಯಿತು. 22 ನಿಮಿಷಗಳ ಬಳಿಕ, ನೌಕೆಯು ಭೂಮಿಯತ್ತ ಸಾಗುವ ಪಥಕ್ಕೆ ಬಂದಾಗ ಯಂತ್ರಗಳನ್ನು ಆರಿಸಲಾಯಿತು ಎಂದು ಚೀನಾ ನ್ಯಾಶನಲ್ ಸ್ಪೇಸ್ ಅಡ್ಮಿನಿಸ್ಟ್ರೇಶನ್‌ನ ಹೇಳಿಕೆಯೊಂದನ್ನು ಉಲ್ಲೇಖಿಸಿ ಕ್ಸಿನುವಾ ವರದಿ ಮಾಡಿದೆ.
ಅದು ಇನ್ನರ್ ಮಂಗೋಲಿಯದಲ್ಲಿ ಇಳಿಯಲಿದೆ. ಚಂದ್ರನಿಂದ 2 ಕಿಲೋಗ್ರಾಮ್ ಮಾದರಿಗಳನ್ನು ಸಂಗ್ರಹಿಸುವುದು ಯೋಜನೆಯ ಉದ್ದೇಶವಾಗಿದೆ. ಆದರೆ, ಎಷ್ಟು ಪ್ರಮಾಣದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎನ್ನುವುದನ್ನು ಬಹಿರಂಗಪಡಿಸಲಾಗಿಲ್ಲ.
‘ಚಾಂಗೆ-5’ ನೌಕೆಯನ್ನು ನವೆಂಬರ್ 24ರಂದು ಉಡಾಯಿಸಲಾಗಿತ್ತು. ಅದು ಚಂದ್ರನ ಮೇಲೆ ಡಿಸೆಂಬರ್ 1ರಂದು ಇಳಿದಿತ್ತು.