×
Ad

ನೈಜೀರಿಯ: ಇಬ್ಬರು ಭಾರತೀಯರ ಅಪಹರಣ

Update: 2020-12-14 23:55 IST

ಲಾಗೋಸ್ (ನೈಜೀರಿಯ), ಡಿ. 14: ಕಳೆದ ವಾರ ನೈಜೀರಿಯದಲ್ಲಿ ಇಬ್ಬರು ಭಾರತೀಯರನ್ನು ಬಂದೂಕುಧಾರಿಗಳು ಅಪಹರಿಸಿದ್ದಾರೆ.

ಬುಧವಾರ ನೈಜೀರಿಯದ ಓಯೊ ರಾಜ್ಯದ ರಾಜಧಾನಿ ಇಬಾದನ್‌ನಲ್ಲಿರುವ ಔಷಧ ತಯಾರಿಕಾ ಕಂಪೆನಿಯೊಂದರಿಂದ ಭಾರತೀಯರು ಹೊರ ಹೋಗುತ್ತಿರುವಾಗ ಬಂದೂಕುಧಾರಿಗಳು ಅವರನ್ನು ಅಪಹರಿಸಿದ್ದಾರೆ.

ಅಪಹೃತರನ್ನು ಪತ್ತೆಹಚ್ಚಿ ರಕ್ಷಿಸಲು ಪೊಲೀಸರು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ರಾಜ್ಯ ಪೊಲೀಸ್ ವಕ್ತಾರ ಒಲುಗ್‌ಬೆಂಗ ಫಡೆಯಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಆದರೆ, ಅಪಹರಣಕಾರರು ಅಪಹೃತರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದಾರೆಯೇ ಎನ್ನುವುದನ್ನು ಅವರು ತಿಳಿಸಿಲ್ಲ.

‘‘ಎಚ್ಚರಿಕೆಯಿಂದಿರುವಂತೆ ಎಲ್ಲ ವಿದೇಶೀಯರಿಗೆ ಸೂಚಿಸಲಾಗಿದೆ’’ ಎಂದು ಅವರು ಹೇಳಿದರು.

ನೈಜೀರಿಯದಲ್ಲಿ ನೂರಾರು ಭಾರತೀಯರು ಹೆಚ್ಚಾಗಿ ಔಷಧ ತಯಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಪಹೃತ ವಿದ್ಯಾರ್ಥಿಗಳಿಗಾಗಿ ಶೋಧ

ನೈಜೀರಿಯದಲ್ಲಿ ಬಂದೂಕುಧಾರಿಗಳು ಹಾಸ್ಟೆಲ್‌ಗಳಿಗೆ ದಾಳಿ ನಡೆಸಿ 300ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ.

ಶುಕ್ರವಾರ ರಾತ್ರಿ ಮೋಟರ್ ಸೈಕಲ್‌ಗಳಲ್ಲಿ ಬಂದ ಬಂದೂಕುಧಾರಿಗಳು ಕಂಕರದಲ್ಲಿರುವ ಸರಕಾರಿ ವಿಜ್ಞಾನ ಶಾಲೆಗೆ ನುಗ್ಗಿದರು. ಈ ಸಂದರ್ಭದಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಅಪಹರಣಕಾರರ ನಡುವೆ ಭೀಕರ ಕಾಳಗ ನಡೆಯಿತು. ಆಗ ನೂರಾರು ವಿದ್ಯಾರ್ಥಿಗಳು ಓಡಿ ಸುತ್ತಲಿನ ಪೊದೆಗಳು ಮತ್ತು ಕಾಡಿನಲ್ಲಿ ಅವಿತುಕೊಂಡರು.

ಆದರೆ, 300ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಅಪಹರಿಸುವಲ್ಲಿ ದುಷ್ಕರ್ಮಿಗಳು ಯಶಸ್ವಿಯಾಗಿದ್ದಾರೆ.

‘‘ಕಾಡು ಮತ್ತು ಸಮೀಪದ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಹಾಗೂ ಮಕ್ಕಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಲು ಅವರ ಹೆತ್ತವರನ್ನು ಸಂಪರ್ಕಿಸಲಾಗುತ್ತಿದೆ’’ ಎಂದು ಅಧ್ಯಕ್ಷ ಮುಹಮ್ಮದ್ ಬುಹಾರಿಯ ವಕ್ತಾರರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News