ಡಿ.17ರಂದು ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಗಳ ವಿಚಾರಣೆ
ಹೊಸದಿಲ್ಲಿ: ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ವಿರುದ್ಧ ದಾಖಲಾಗಿರುವ ಮೂರು ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 17ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ವಿವಿಧ ಪ್ರಕರಣಗಳ ವಿಚಾರಣೆ ಬಾಕಿಯಾಗಿರುವುದರಿಂದ ಸಾವಿರಾರು ವಿಚಾರಣಾಧೀನ ಕೈದಿಗಳು ಜೈಲಿನಲ್ಲಿಯೇ ಕೊಳೆಯುವಂತಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯ ಜಾಮೀನು ಅಪೀಲು ಪ್ರಕರಣವನ್ನು ಆದ್ಯತೆಯ ಮೇಲೆ ವಿಚಾರಣೆಗೆ ಕೈಗೆತ್ತಿಕೊಂಡು ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಕ್ರಮವನ್ನು ಖಂಡಿಸಿ ಹಾಗೂ ಸುಪ್ರೀಂ ಕೋರ್ಟ್ ಅನ್ನು ಟೀಕಿಸಿ ಕಾಮ್ರಾ ಇತ್ತೀಚೆಗೆ ಸರಣಿ ಟ್ವೀಟ್ ಗಳನ್ನು ಮಾಡಿ ವಿವಾದಕ್ಕೀಡಾಗಿದ್ದರು.
ಇದರ ಬೆನ್ನಲ್ಲೇ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಹಲವು ಮಂದಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದರು. ನವೆಂಬರ್ 12ರಂದು ಅಟಾರ್ನಿ ಜನರಲ್ ಅನುಮತಿ ನೀಡಿದ ನಂತರ ಸುಪ್ರೀಂ ಕೋಟಿನಲ್ಲಿ ಅಪೀಲು ಸಲ್ಲಿಸಲಾಗಿತ್ತು. ಕಾಮ್ರಾ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಟಾರ್ಗೆಟ್ ಮಾಡಿ ಪೋಸ್ಟ್ ಮಾಡಿದ್ದ ಟ್ವೀಟ್‍ಗಳಿಗೆ ಸಂಬಂಧಿಸಿಯೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ನಂತರ ಅಟಾರ್ನಿ ಜನರಲ್ ಅನುಮತಿ ನೀಡಿದ್ದರು.
ಏನೇ ಆದರೂ ಕಾಮ್ರಾ ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. "ನೋ ಲಾಯರ್ಸ್, ನೋ ಅಪಾಲಜಿ, ನೋ ಫೈನ್, ನೋ ವೇಸ್ಟ್ ಆಫ್ ಸ್ಪೇಸ್,'' ಎಂದು ಅವರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.