ಮೋದಿ ಸರಕಾರದಡಿ ಭಾರತವು ಮುಸ್ಲಿಮರಿಗೆ ಅಪಾಯಕಾರಿ, ಹಿಂಸಾತ್ಮಕ ಸ್ಥಳವಾಗಿದೆ
ಹೊಸದಿಲ್ಲಿ, ಡಿ.15: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕಳೆದ ವರ್ಷ ಪೌರತ್ವ ಕಾಯ್ದೆಗೆ ತಿದ್ದುಪಡಿಗಳನ್ನು ತಂದಾಗಿನಿಂದ ಭಾರತವು ಮುಸ್ಲಿಂ ಅಲ್ಪಸಂಖ್ಯಾತರ ಪಾಲಿಗೆ ಅಪಾಯಕಾರಿ ಮತ್ತು ಹಿಂಸಾತ್ಮಕ ದೇಶವಾಗಿ ಪರಿಣಮಿಸಿದೆ ಎಂದು ಸೌತ್ ಏಷ್ಯಾ ಸ್ಟೇಟ್ ಮೈನಾರಿಟಿಸ್ ತನ್ನ 2020ರ ವರದಿಯಲ್ಲಿ ಹೇಳಿದೆ. ಈ ಕುರಿತು scroll.in ವರದಿ ಪ್ರಕಟಿಸಿದೆ.
ವಾರ್ಷಿಕ ವರದಿಯು ಭಾರತ, ಅಫಘಾನಿಸ್ತಾನ, ಬಾಂಗ್ಲಾದೇಶ, ಭೂತಾನ, ನೇಪಾಳ,ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಜೆಗಳ, ವಿಶೇಷವಾಗಿ ಅಲ್ಪಸಂಖ್ಯಾತರ ಸಾಮಾಜಿಕ ಸ್ಥಿತಿಗತಿ ಮತ್ತು ಅವರಿಗಿರುವ ವೈಯಕ್ತಿಕ ಸ್ವಾತಂತ್ರ್ಯಗಳ ಬಗ್ಗೆ ಗಮನ ಹರಿಸಿದೆ.
ವಿಶ್ವಾದ್ಯಂತ ಸಾಮಾಜಿಕ ಸ್ಥಿತಿಗತಿಯು ಬೆದರಿಕೆಯನ್ನು ಎದುರಿಸುತ್ತಿದ್ದರೆ ಕಳೆದ ಕೆಲವು ವರ್ಷಗಳಲ್ಲಿ ಅಸಾಧಾರಣ ವೇಗದಲ್ಲಿ ಉಂಟಾಗಿರುವ ಆತಂಕಕಾರಿ ಹಿನ್ನಡೆಗಳನ್ನು ಪರಿಗಣಿಸಿದರೆ ಭಾರತದ ಪ್ರಕರಣವು ವಿಶಿಷ್ಟವಾಗಿದೆ ಎಂದು ವರದಿಯು ಬೆಟ್ಟು ಮಾಡಿದೆ.
2019 ಡಿಸೆಂಬರ್‌ನಲ್ಲಿ ಪೌರತ್ವ ಕಾಯ್ದೆಗೆ ತರಲಾದ ತಿದ್ದುಪಡಿಯು ನಿರ್ದಿಷ್ಟವಾಗಿ ಮುಸ್ಲಿಮರನ್ನು ಹೊರತುಪಡಿಸಿ ಅಕ್ರಮ ವಲಸಿಗರಿಗೆ ಪೌರತ್ವ ಮಾರ್ಗವನ್ನು ಸುಗಮಗೊಳಿಸಿದೆ. ಕಾಯ್ದೆಯನ್ನು ತರುವಾಗ ಸರಕಾರವು ಭಾರತೀಯ ಪೌರರ ರಾಷ್ಟ್ರೀಯ ರಿಜಿಸ್ಟರ್‌ವೊಂದನ್ನು ಸೃಷ್ಟಿಸುವ ತನ್ನ ಉದ್ದೇಶಗಳನ್ನೂ ಘೋಷಿಸಿತ್ತು ಮತ್ತು ಇದು ಹಲವಾರು ಮುಸ್ಲಿಮರನ್ನು ನಿರಾಶ್ರಿತರನ್ನಾಗಿಸಲಿದೆ ಎಂದು ಹೇಳಿರುವ ವರದಿಯಲ್ಲಿ ಉಲ್ಲೇಖಿಸಿದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ಬಿಜೆಪಿಯು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಇತರ ದುರ್ಬಲ ಗುಂಪುಗಳ ವಿರುದ್ಧ ಹೊಸ ನೇರ ದಾಳಿಯನ್ನು ಅನಾವರಣಗೊಳಿಸಿತ್ತು. ಇದು ಮುಸ್ಲಿಮರ ಸಾಮಾಜಿಕ ಸ್ಥಿತಿಗತಿ ಮತ್ತು ವಿಶೇಷವಾಗಿ ಮುಸ್ಲಿಂ ಸಮುದಾಯ ಆಧಾರಿತ ಸಂಘಟನೆಗಳು ಮತ್ತು ಕಾರ್ಯಕರ್ತರ ಪಾಲಿಗೆ ಆತಂಕಕಾರಿಯಾಗಿತ್ತು ಎಂದಿದೆ.
ಮೇ 2019ರಲ್ಲಿ ಬಿಜೆಪಿಯು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವುದರೊಂದಿಗೆ ಪರಿಸ್ಥಿತಿಯು ಗಣನೀಯವಾಗಿ ಉಲ್ಬಣಗೊಂಡಿತ್ತು. ಅದು ಒಂದರ ಹಿಂದೊಂದರಂತೆ ಹಲವಾರು ಕ್ರಮಗಳನ್ನು ಜಾರಿಗೆ ತರುವ ಮೂಲಕ ಮುಸ್ಲಿಮರನ್ನು ಮಟ್ಟ ಹಾಕುವ ತನ್ನ ಉದ್ದೇಶದ ಸುಳಿವು ನೀಡಿತ್ತು. ಇದರೊಂದಿಗೆ ಭಾರತದಲ್ಲಿಯ ಸಂಸ್ಥೆಗಳಿಗೆ ವಿದೇಶಿ ದೇಣಿಗೆಗಳನ್ನು ನಿಯಂತ್ರಿಸುವ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯನ್ನು ಪ್ರಗತಿಪರ ಮತ್ತು ಅಲ್ಪಸಂಖ್ಯಾತ ಎನ್‌ಜಿಒಗಳ ವಿರುದ್ಧ ಇನ್ನಷ್ಟು ಹರಿತಗೊಳಿಸಲಾಗಿದೆ ಎಂದು ವರದಿಯು ತಿಳಿಸಿದೆ.
ಸರಕಾರದ ದೌರ್ಜನ್ಯಗಳು ಮತ್ತು ಬಹುಸಂಖ್ಯಾತ ವಾದದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ಮಾನವ ಹಕ್ಕುಗಳ ವಕೀಲರು,ಸಾಮಾಜಿಕ ಕಾರ್ಯಕರ್ತರು,ಪ್ರತಿಭಟನಾಕಾರರು,ಶಿಕ್ಷಣ ತಜ್ಞರು,ಪತ್ರಕರ್ತರು,ಉದಾರವಾದಿಗಳನ್ನೊಳಗೊಂಡ ಭಾರತದ ಸಾಮಾಜಿಕ ಗುಂಪುಗಳ ವಿರುದ್ಧ ದಾಳಿಗಳು ಹೆಚ್ಚುತ್ತಿವೆ ಎಂದಿರುವ ವರದಿಯು, ತಾರತಮ್ಯಕಾರಿ ಕಾನೂನುಗಳು ಮತ್ತು ಪದ್ಧತಿಗಳ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಮಾನವ ಹಕ್ಕು ಸಮರ್ಥಕರು ಹೆಚ್ಚೆಚ್ಚು ನಿರ್ಬಂಧಗಳು,ಹಿಂಸಾಚಾರ,ಕ್ರಿಮಿನಲ್ ಮಾನಹಾನಿ,ಬಂಧನ ಮತ್ತು ಕಿರುಕುಳಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದೆ.
ಕಳೆದ ವರ್ಷ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗಿನಿಂದ ಅಲ್ಲಿ ಮಾನವ ಹಕ್ಕು ಉಲ್ಲಂಘನೆಗಳು ಹೆಚ್ಚಿರುವದನ್ನು ವರದಿಯು ಪ್ರಮುಖವಾಗಿ ಬಿಂಬಿಸಿದೆ.
ಮುಸ್ಲಿಮರು, ಕ್ರೈಸ್ತರು ಮತ್ತು ದಲಿತರ ವಿರುದ್ಧ ಗುಂಪು ಹತ್ಯೆ ಮತ್ತು ಗೋರಕ್ಷಕರ ಹಿಂಸಾಚಾರಗಳ ರೂಪದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷಾಪರಾಧಗಳು ಹೆಚ್ಚಾಗಿವೆ. ಬಿಜೆಪಿಯು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಸರಣಿ ತಾರತಮ್ಯಕಾರಿ ಕಾನೂನುಗಳನ್ನು ಮತ್ತು ಕ್ರಮಗಳನ್ನು ಇನ್ನಷ್ಟು ಬಲಗೊಳಿಸಿದೆ ಮತ್ತು ಅವುಗಳ ವ್ಯಾಪ್ತಿಯನ್ನು ಹಿಗ್ಗಿಸಿದೆ. ದೇಶಾದ್ಯಂತ ಕ್ರೈಸ್ತರು,ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಕಿರುಕುಳ,ಸಾಮಾಜಿಕ ಬಹಿಷ್ಕಾರ ಮತ್ತು ಹಿಂಸಾಚಾರಗಳನ್ನು ನಡೆಸಲು ಹಿಂದುತ್ವ ಗುಂಪುಗಳಿಗೆ ಅಧಿಕಾರ ನೀಡಿವೆ ಎಂದು ಮಾನವ ಹಕ್ಕು ಗುಂಪುಗಳು ಆರೋಪಿಸಿರುವ ಮತಾಂತರ ವಿರೋಧಿ ಕಾನೂನುಗಳು ಇವುಗಳಲ್ಲಿ ಸೇರಿವೆ. ಮೇಲ್ನೋಟಕ್ಕೆ ಗೋವುಗಳ ರಕ್ಷಣೆಗಾಗಿಯೇ ಮೀಸಲಾಗಿರುವ 60 ಕಾನೂನುಗಳು ಮುಸ್ಲಿಮರು ಮತ್ತು ದಲಿತರ ವಿರುದ್ಧ ಇಂತಹುದೇ ಅಭಿಯಾನಗಳಿಗೆ ಸಾಂಸ್ಥಿಕ ಬೆಂಬಲವನ್ನು ಒದಗಿಸುತ್ತಿವೆ.
ಸೌತ್ ಏಷ್ಯಾ ಸ್ಟೇಟ್ ಆಫ್ ಮೈನಾರಿಟಿಸ್ ರಿಪೋರ್ಟ್ 2020