ಒಂದೇ ವ್ಯಕ್ತಿಗೆ ಕಡಿಮೆ ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡ ಎರಡೂ ಇರಲು ಸಾಧ್ಯವೇ?

Update: 2020-12-16 13:10 GMT

ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಸಮಸ್ಯೆಗಳ ಬಗ್ಗೆ ನಾವು ಪ್ರತ್ಯೇಕವಾಗಿ ಕೇಳಿದ್ದೇವೆ. ಆದರೆ ಯಾರಾದರೂ ತನಗೆ ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಇವೆರಡೂ ಇವೆ ಎಂದು ದೂರುವುದನ್ನು ಕೇಳಿದ್ದೀರಾ? ಹೌದು,ಇಂತಹ ಸಮಸ್ಯೆ ಇರುವುದು ನಿಜ,ಆದರೆ ಇದು ಅಪರೂಪವಾಗಿದೆ. ರಕ್ತದೊತ್ತಡದ ಇಂತಹ ಏರಿಳಿತಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ,ಆದರೆ ಒತ್ತಡ,ಮದ್ಯಪಾನ,ಔಷಧಿ ಇತ್ಯಾದಿಗಳು ಇಂತಹ ಸಮಸ್ಯೆಗೆ ಸಾಮಾನ್ಯ ಕಾರಣಗಳಾಗಿವೆ. ನಿಮ್ಮ ರಕ್ತದೊತ್ತಡದ ಅಂಕಿಗಳು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟನ್ನು ಹೇಳಬಲ್ಲವು. ರಕ್ತದೊತ್ತಡದಲ್ಲಿ ದಿಢೀರ್ ಏರಿಕೆ ಅಥವಾ ಕುಸಿತ ಉಂಟಾದರೆ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಬೇಕು.

 ರಕ್ತಸಂಚಾರದ ಗತಿಯ ಮೂಲಕ ರಕ್ತದೊತ್ತಡವನ್ನು ಅಳೆಯಲಾಗುತ್ತದೆ. ರಕ್ತದೊತ್ತಡವು ದಿನವಿಡೀ ಬದಲಾಗುತ್ತಲೇ ಇರುತ್ತದೆ ಮತ್ತು ಹೆಚ್ಚಿನ ಸಮಯದಲ್ಲಿ ಅದು ಗೊತ್ತಾಗುತ್ತದೆ. ಉದಾಹರಣೆಗೆ ನೀವು ವ್ಯಾಯಾಮ ಮಾಡುವಾಗ ರಕ್ತದೊತ್ತಡವು ಅಧಿಕವಾಗಿರುತ್ತದೆ,ಆದರೆ ವಿಶ್ರಾಂತಿಯ ಸಮಯದಲ್ಲಿ ಅದು ಕಡಿಮೆಯಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ರಕ್ತದೊತ್ತಡದ ಏರಿಳಿತಗಳ ಯಾವುದೇ ಪ್ರಮುಖ ಲಕ್ಷಣಗಳು ಅನುಭವವಾಗುವುದಿಲ್ಲ.

ನೀವು ರಕ್ತದೊತ್ತಡದಲ್ಲಿ ಏರಿಳಿತಗಳ ಲಕ್ಷಣಗಳನ್ನು ಗಮನಿಸಿದರೆ ಮತ್ತು ತಪಾಸಣೆಯ ಬಳಿಕ ರಕ್ತದೊತ್ತಡ ಅಸಾಮಾನ್ಯವಾಗಿ ಹೆಚ್ಚಾಗಿದ್ದರೆ ಅಥವಾ ಕಡಿಮೆಯಾಗಿದ್ದರೆ ಅದು ಕಳವಳದ ವಿಷಯವಾಗಬಹುದು. ಕೆಲವರು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಎರಡನ್ನೂ ಅನುಭವಿಸುತ್ತಾರೆ,ಆದರೆ ಅವರಿಗೆ ವೈದ್ಯರ ಸಲಹೆಯ ಅಗತ್ಯವಿದೆಯೇ ಎನ್ನುವುದು ರಕ್ತದೊತ್ತಡದ ಅಂಕಿಗಳನ್ನು ಅವಲಂಬಿಸಿರುತ್ತದೆ.

ರಕ್ತದೊತ್ತಡದಲ್ಲಿ ಏರಿಳಿತಗಳಿಗೆ ಹಲವಾರು ಕಾರಣಗಳಿವೆ

* ಒತ್ತಡ: ಒತ್ತಡವು ನಿಮ್ಮ ರಕ್ತದೊತ್ತಡದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಬಲ್ಲದು. ಅದು ಭಾವನಾತ್ಮಕ ಒತ್ತಡವಾಗಿರಲಿ ಅಥವಾ ಆತಂಕವಾಗಿರಲಿ,ರಕ್ತದೊತ್ತಡದಲ್ಲಿ ಏರಿಕೆ ಅಥವಾ ಕುಸಿತವನ್ನುಂಟು ಮಾಡುತ್ತದೆ. ಒತ್ತಡಪೂರ್ಣ ಉದ್ಯೋಗಗಳನ್ನು ಮಾಡುವವರು ರಕ್ತದೊತ್ತಡ ಸೇರಿದಂತೆ ಹೃದಯನಾಳೀಯ ಸಮಸ್ಯೆಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಕ್ರಮೇಣ ಅದು ತೀವ್ರ ರಕ್ತದೊತ್ತಡ ಏರಿಳಿತಗಳಿಗೆ ಕಾರಣವಾಗಬಹುದು.

* ಔಷಧಿಗಳು: ಹಾಲಿ ಇರುವ ಅನಾರೋಗ್ಯಕ್ಕಾಗಿ ನೀವು ಔಷಧಿಗಳನ್ನು ಸೇವಿಸುತ್ತಿದ್ದರೆ ನಿಮ್ಮ ರಕ್ತದೊತ್ತಡದಲ್ಲಿ ಏರಿಳಿತಗಳಾಗಬಹುದು. ವೈದ್ಯರು ಸೂಚಿಸುವ ಅಥವಾ ನೀವೇ ಸ್ವಯಂ ವೈದ್ಯರಾಗಿ ಔಷಧಿ ಅಂಗಡಿಗಳಲ್ಲಿ ಖರೀದಿಸುವ ಔಷಧಿಗಳು ರಕ್ತದೊತ್ತಡದ ಮೇಲೆ ಪರಿಣಾಮವನ್ನು ಬೀರಬಲ್ಲವು. ರಕ್ತದೊತ್ತಡದ ಮಾತ್ರೆಗಳು ಮತ್ತು ಮೂತ್ರವರ್ಧಕಗಳು ರಕ್ತದೊತ್ತಡವನ್ನು ಕಡಿಮೆ ಮಾಡಿದರೆ ಅಲರ್ಜಿ ಮತ್ತು ಶೀತದ ಔಷಧಿಗಳನ್ನು ಅದನ್ನು ಹೆಚ್ಚಿಸಬಹುದು.

* ದೈಹಿಕ ಚಟುವಟಿಕೆಗಳು: ನಿಮ್ಮ ರಕ್ತದೊತ್ತಡವು ನಿಮ್ಮ ದೈಹಿಕ ಕ್ರಿಯಾಶೀಲತೆಯನ್ನೂ ಅವಲಂಬಿಸಿರುತ್ತದೆ. ಮಾತನಾಡುವಾಗ, ನಗುವಾಗ,ವ್ಯಾಯಾಮ ಮಾಡುವಾಗ, ಓಡುವಾಗ ಇತ್ಯಾದಿ ಸಂದರ್ಭಗಳಲ್ಲಿ ರಕ್ತದೊತ್ತಡದಲ್ಲಿ ಏರಿಳಿತಗಳು ಆಗುತ್ತಿರುತ್ತವೆ.

* ಆಹಾರ ಮತ್ತು ಪಾನೀಯಗಳು

ದೈಹಿಕ ಚಟುವಟಿಕೆಗಳಂತೆ ಅನಾರೋಗ್ಯಕರ ಅಥವಾ ಹೆಚ್ಚಿನ ಟೈರಾಮಿನ್ ಅನ್ನು ಒಳಗೊಂಡಿರುವ ಸಂಸ್ಕರಿತ ಆಹಾರಗಳು ರಕ್ತದೊತ್ತಡದ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ. ಟೈರಾಮಿನ್ ಒಂದು ಅಮಿನೋ ಆಮ್ಲವಾಗಿದ್ದು ರಕ್ತದೊತ್ತಡ ನಿಯಂತ್ರಣದೊಂದಿಗೆ ಗುರುತಿಸಿಕೊಂಡಿದೆ. ಅತಿಯಾದ ಟೈರಾಮಿನ್ ಇರುವ ಆಹಾರವನ್ನು ಸೇವಿಸಿದಾಗ ರಕ್ತದೊತ್ತಡದಲ್ಲಿ ಏರಿಕೆಯಾಗುತ್ತದೆ. ಇದೇ ರೀತಿ ಶರೀರದಲ್ಲಿ ಕಡಿಮೆ ಟೈರಾಮಿನ್ ಮಟ್ಟ ರಕ್ತದೊತ್ತಡ ಕುಸಿಯುವಂತೆ ಮಾಡುತ್ತದೆ. ಟೈರಾಮಿನ್ ನಮ್ಮ ಶರೀರದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ,ಹೀಗಾಗಿ ನಾವು ಅದನ್ನು ಆಹಾರದ ಮೂಲಕ ತೆಗೆದುಕೊಳ್ಳಬೇಕಿಲ್ಲ.

  * ವೈಟ್ ಕೋಟ್ ಸಿಂಡ್ರೋಮ್: ವೈದ್ಯರನ್ನು ಭೇಟಿಯಾಗುವ ಬಗ್ಗೆ ಯೋಚಿಸಿದರೆ ನಿಮಗೆ ಅಳುಕು ಉಂಟಾಗುತ್ತದೆಯೇ? ಈ ಸ್ಥಿತಿಯನ್ನು ವೈಟ್ ಕೋಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿದೆ. ಬಹಳಷ್ಟು ಜನರು ವೈದ್ಯರನ್ನು ಭೇಟಿಯಾಗುವ ಮುನ್ನ ಒತ್ತಡ ಮತ್ತು ಚಿಂತೆಗೊಳಗಾಗುತ್ತಾರೆ. ಇದು ಅವರ ರಕ್ತದೊತ್ತಡ ಏರುವಂತೆ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಅವರ ರಕ್ತದೊತ್ತಡವು ಹೆಚ್ಚಿನ ಅಂಕಿಗಳನ್ನು ತೋರಿಸಬಹುದು,ಆದರೆ ಅವರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ ಎನ್ನುವುದು ಇದರ ಅರ್ಥವಲ್ಲ. ಆದರೆ ಪದೇ ಪದೇ ವೈದ್ಯರನ್ನು ಭೇಟಿಯಾಗುವವರು ಕಾಲಕ್ರಮೇಣ ಅಧಿಕ ರಕ್ತದೊತ್ತಡ ಸಮಸ್ಯೆಗೆ ಗುರಿಯಾಗಬಹುದು.

 * ಅಡ್ರಿನಾಲ್ ಸಮಸ್ಯೆಗಳು: ಹಾರ್ಮೋನ್ ಏರಿಳಿತಗಳೂ ರಕ್ತದೊತ್ತಡ ಏರಿಳಿತಗಳಿಗೆ ಕಾರಣವಾಗುತ್ತವೆ. ನಿಮ್ಮ ಶರೀರವು ಅಗತ್ಯ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತಿಲ್ಲವಾದರೆ ಅಡ್ರಿನಲ್ ನಿಷ್ಕ್ರಿಯತೆಯು ನಿಮ್ಮ ರಕ್ತದೊತ್ತಡ ಕುಸಿಯಲು ಕಾರಣವಾಗಬಹುದು. ಇದೇ ರೀತಿ ಅಡ್ರಿನಲ್ ವ್ಯವಸ್ಥೆಯು ಅತಿ ಕ್ರಿಯಾಶೀಲವಾಗಿದ್ದರೆ ಅದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News