ಶಾಲೆಯ ಬಾಗಿಲು ತೆರೆಯಲಿ

Update: 2020-12-17 05:17 GMT

ಕೊರೋನ ಕುರಿತಂತೆ ಸರಕಾರ ತಳೆದಿರುವ ದ್ವಂದ್ವ ನಿಲುವುಗಳು ಕೊರೋನ ಸೋಂಕನ್ನು ಜನರು ಗಂಭೀರವಾಗಿ ಸ್ವೀಕರಿಸದಂತೆ ಮಾಡಿದೆ. ಕೊರೋನ ಕುರಿತ ಜಾಗೃತಿಯನ್ನು ಸರಕಾರ ತನ್ನ ಮೂಗಿನ ನೇರಕ್ಕೆ ತಕ್ಕ ಹಾಗೆ ಬದಲಾಯಿಸುತ್ತಾ ಬಂದಿದೆ. ಸೆಪ್ಟಂಬರ್‌ನಲ್ಲಿ ಕೊರೋನ ಪಾಸಿಟಿವ್ ಉತ್ತುಂಗ ಸ್ಥಿತಿಯಲ್ಲಿದ್ದಾಗ ಕೇಂದ್ರದಲ್ಲಿ ಅಧಿವೇಶನ ನಡೆಯಿತು ಮತ್ತು ಆ ಅಧಿವೇಶನದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿತು. ಆದರೆ ಇದೀಗ ಕೊರೋನ ಪಾಸಿಟಿವ್ ಸಂಖ್ಯೆ ಇಳಿಕೆಯಾಗಿರುವ ಹೊತ್ತಿನಲ್ಲಿ ಕೊರೋನ ಭೀತಿಯ ನೆಪವೊಡ್ಡಿ ‘ ಸಂಸತ್ತಿನ ಚಳಿಗಾಲದ ಅಧಿವೇಶನ’ವನ್ನು ರದ್ದುಗೊಳಿಸಿದೆ. ಬಹುಶಃ ಕಾರಣ ಎಲ್ಲರಿಗೂ ಗೊತ್ತಿರುವಂತಹದೇ. ಸರಕಾರ ಹೆದರಿರುವುದು ಕೊರೋನ ಸೋಂಕಿಗಲ್ಲ, ಬದಲಿಗೆ ದಿಲ್ಲಿಯಲ್ಲಿ ಜಮಾಯಿಸಿರುವ ರೈತರ ಪ್ರಶ್ನೆಗಳಿಗೆ. ಹೈದರಾಬಾದ್‌ನಲ್ಲಿ ನಡೆದ ಸಾಲು ಸಾಲು ರಾಜಕೀಯ ಸಮಾವೇಶದ ಸಂದರ್ಭದಲ್ಲಿ ಇವರಿಗೆ ಕೊರೋನ ಭೀತಿ ಎದುರಾಗಲಿಲ್ಲ. ಎಲ್ಲ ಪೂರ್ವಸಿದ್ಧತೆಗಳೊಂದಿಗೆ ನಡೆಯುವ ಅಧಿವೇಶನದ ಸಂದರ್ಭದಲ್ಲಿ ಮಾತ್ರ ಯಾಕೆ ಕೊರೋನ ಭೀತಿ?. ರಾಜ್ಯದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ ಜಾತಿ ಸಮಾವೇಶ, ರಾಜಕೀಯ ಸಮಾವೇಶಗಳು ಎಗ್ಗಿಲ್ಲದೆ ನಡೆಯುತ್ತವೆ. ಕನ್ನಡ ಸಾಹಿತ್ಯ ಪರಿಷತ್ ಈ ಬಾರಿ ಸಾಹಿತ್ಯ ಸಮ್ಮೇಳನ ಆಚರಿಸುವ ಕುರಿತಂತೆಯೂ ಘೋಷಣೆ ಮಾಡಿತು. ಮಾರುಕಟ್ಟೆಗಳು ಮುಕ್ತವಾಗಿವೆ. ವಿಧಾನಸಭಾ ಅಧಿವೇಶನವೂ ನಡೆದಿದೆ. ಸಿನೆಮಾ ಮಂದಿರಗಳೂ ತೆರೆದಿವೆ. ಮದುವೆಗಳು ಅದ್ದೂರಿಯಾಗಿ ಸಾರ್ವಜನಿಕ ಸಭಾಂಗಣದಲ್ಲೇ ನಡೆಯುತ್ತಿವೆೆ. ಆದರೆ ಶಾಲೆಗಳನ್ನು ಮಾತ್ರ ತೆರೆಯುವುದಕ್ಕೆ ಸರಕಾರ ಹಿಂದೇಟು ಹಾಕುತ್ತಿದೆ.

‘ಶಾಲೆಗಳನ್ನು ತೆರೆಯಲು’ ರಾಜ್ಯಾದ್ಯಂತ ಪಾಲಕರು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರಕಾರ ಸ್ಪಂದಿಸುತ್ತಿಲ್ಲ. ಖಾಸಗಿ ಶಾಲೆಗಳು ಆನ್‌ಲೈನ್ ಶಿಕ್ಷಣವನ್ನು ನಡೆಸುತ್ತಿವೆೆಯಾದರೂ, ಇದು ಕಾಟಾಚಾರದ ಶಿಕ್ಷಣವಾಗಿದೆ. ಶಿಕ್ಷಕರ ವೇತನಗಳನ್ನು ಕೊಡುವುದಕ್ಕಾಗಿ ಪಾಲಕರಿಂದ ಶುಲ್ಕ ವಸೂಲಿಗಾಗಿ ಮಾಡಿದ ತಾತ್ಕಾಲಿಕ ವ್ಯವಸ್ಥೆಯೇ ಹೊರತು, ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣದಿಂದ ಪ್ರಯೋಜನವಾಗಿರುವುದು ಅಷ್ಟಕ್ಕಷ್ಟೇ. ಆನ್‌ಲೈನ್ ಶಿಕ್ಷಣ ಪಡೆಯುತ್ತಿರುವ ಬಹುತೇಕ ವಿದ್ಯಾರ್ಥಿಗಳ ಅನಿಸಿಕೆಯೆಂದರೆ, ‘ನಮಗೆ ಅರ್ಥವಾಗುತ್ತಿಲ್ಲ, ಸರಿಯಾಗಿ ಕೇಳಿಸುತ್ತಿಲ್ಲ, ಇಂಟರ್‌ನೆಟ್ ಆಗಾಗ ಕೈ ಕೊಡುತ್ತದೆ’. ವಿದ್ಯಾರ್ಥಿಗಳು ಶಿಕ್ಷಣದ ಹೆಸರಿನಲ್ಲಿ ಮೊಬೈಲ್‌ಗಳನ್ನು ದುರ್ಬಳಕೆ ಮಾಡುತ್ತಿರುವ ಭಾರೀ ಆರೋಪಗಳಿವೆ. ಮಾನಸಿಕವಾಗಿ ಈ ಮೊಬೈಲ್ ಶಿಕ್ಷಣ ವಿದ್ಯಾರ್ಥಿಗಳ ಮೇಲೆ ಬೀರಿರುವ ದುಷ್ಪರಿಣಾಮ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆೆ. ಮೊಬೈಲ್ ಶಿಕ್ಷಣದ ಕುರಿತಂತೆ ಪಾಲಕರ ಅಜ್ಞಾನವನ್ನು ವಿದ್ಯಾರ್ಥಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೆಲವು ಶಾಲೆಗಳು ಆನ್‌ಲೈನ್ ಮೂಲಕವೇ ಪರೀಕ್ಷೆಗಳನ್ನೂ ನಡೆಸುತ್ತಿವೆ. ಈ ಪರೀಕ್ಷೆಗಳೇ ಶಿಕ್ಷಣದ ಅಣಕವಾಗಿದೆ.

ಆನ್‌ಲೈನ್ ತರಗತಿಗಳು ಮೇಲ್ ಮಧ್ಯಮ ವರ್ಗಕ್ಕೆ ದೊಡ್ಡ ಸಮಸ್ಯೆಯಾಗದು. ಆದರೆ ಮಧ್ಯಮ ವರ್ಗ ಮತ್ತು ಬಡವರ್ಗ ಈಗಾಗಲೇ ಈ ಆನ್‌ಲೈನ್ ಶಿಕ್ಷಣದಿಂದ ಬೇರೆ ಬೇರೆ ರೀತಿಯಲ್ಲಿ ತೊಂದರೆ ಅನುಭವಿಸುತ್ತಿವೆ. ಒಂದೇ ಶಾಲೆಯಲ್ಲಿ ಕಲಿಯುತ್ತಿರುವ ಒಂದಿಷ್ಟು ಮಕ್ಕಳು ಮೊಬೈಲ್ ನೆಟ್‌ವರ್ಕ್, ಇಂಟರ್‌ನೆಟ್ ಸಮಸ್ಯೆ ಇತ್ಯಾದಿಗಳಿಂದ ಶಿಕ್ಷಣ ವಂಚಿತರಾಗಿದ್ದಾರೆ. ಸಾಲ ಸೋಲ ಮಾಡಿ ಮಕ್ಕಳಿಗೆ ಮೊಬೈಲ್ ಒದಗಿಸಿದರೂ, ಅದಕ್ಕೆ ಪ್ರತಿ ತಿಂಗಳು ರೀಚಾರ್ಜ್ ಮಾಡಲಾಗದೆ ಒದ್ದಾಡುತ್ತಿದ್ದಾರೆ. ಅತ್ಯುತ್ತಮ ಮೊಬೈಲ್ ಹೊಂದದೇ ಇರುವ ಮಕ್ಕಳು ಕೀಳರಿಮೆಯಿಂದ ನರಳುವಂತಾಗಿದೆ. ವಿದ್ಯಾರ್ಥಿಗಳಲ್ಲಿ ಆತಂಕ, ಖಿನ್ನತೆ ಮನೆ ಮಾಡಿದೆ. ಮನೆಯಲ್ಲೇ ಇರುವ ಕಾರಣದಿಂದ ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳಿಂದ ಅವರು ದೂರವಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಪಠ್ಯವನ್ನಷ್ಟೇ ಕಲಿಯುವುದಿಲ್ಲ. ಹಲವು ಪ್ರತಿಭೆಗಳನ್ನುಹೊಂದಿರುವ ವಿದ್ಯಾರ್ಥಿಗಳಿರುತ್ತಾರೆ. ಕ್ರೀಡೆ, ಕಲೆ, ಸಂಗೀತ ಮೊದಲಾದ ವಿಷಯಗಳೂ ಕಲಿಕೆಯ ಭಾಗವೇ ಆಗಿವೆ. ಆನ್‌ಲೈನ್‌ನಲ್ಲಿ ಪಠ್ಯಗಳನ್ನಷ್ಟೇ ಕಲಿಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಬೇರೆ ಬೇರೆ ಧರ್ಮ, ಜಾತಿ, ವರ್ಗಗಳಿಂದ ಬಂದ ವಿದ್ಯಾರ್ಥಿಗಳು ಶಾಲೆಗಳಲ್ಲಿ ಒಂದಾಗಿ ಬೆರೆಯುತ್ತಾರೆ. ಇಂದು ವಿದ್ಯಾರ್ಥಿಗಳೆಲ್ಲ ಗೃಹ ಬಂಧನಕ್ಕೊಳಗಾಗಿದ್ದಾರೆ. ಸ್ನೇಹ, ಗೆಳೆತನಗಳಿಲ್ಲದೆ ಅವರು ಒಂಟಿಯಾಗಿದ್ದಾರೆ. ಇದು ಅವರನ್ನು ಇನ್ನಷ್ಟು ಸಂಕುಚಿತಗೊಳಿಸಿದೆ.

ಶೇ. 81 ಗ್ರಾಮೀಣ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತವೆ. ಅಂದರೆ ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಶೇ. 19 ಮಾತ್ರ. ಇವರಲ್ಲಿ ಬಹುತೇಕ ನಗರ ಪ್ರದೇಶಕ್ಕೆ ಸೇರಿದವರು. ಈ ಶೈಕ್ಷಣಿಕ ಅಸಮಾನತೆ ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದ ಮೇಲೆ ಬೀರುವ ದುಷ್ಪರಿಣಾಮ ಬಹು ದೊಡ್ಡದು. ಆನ್‌ಲೈನ್ ಶಿಕ್ಷಣಕ್ಕೆ ಅನುಮತಿ ನೀಡುವ ಮೂಲಕ, ಉಳ್ಳವರಿಗಷ್ಟೇ ಶಿಕ್ಷಣ ಎನ್ನುವ ಹೊಸ ಎಂಬ ನಿಯಮ ಜಾರಿಯಾದಂತಾಗಿದೆ. ಸದ್ಯಕ್ಕೆ ಕೊರೋನ ಸೋಂಕು ಹರಡುವುದು ನಿಲ್ಲುವಂತೆ ಕಾಣುತ್ತಿಲ್ಲ. ಹಾಗಾದರೆ ಎಲ್ಲಿಯವರೆಗೆ ಸರಕಾರ ವಿದ್ಯಾರ್ಥಿಗಳನ್ನು ಶಾಲೆಗಳಿಂದ ದೂರವಿಡುತ್ತದೆ? ಅಥವಾ ಆನ್‌ಲೈನ್ ಶಿಕ್ಷಣವನ್ನೇ ಶಾಶ್ವತವಾಗಿಸಿ, ಎಲ್ಲ ಶಾಲೆಗಳನ್ನು ಮುಚ್ಚುವ ಸಂಚೊಂದನ್ನು ರೂಪಿಸುತ್ತಿದೆಯೇ? ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಈಗಾಗಲೇ ಖಾಸಗಿ ಸಂಸ್ಥೆಗಳಿಂದಾಗಿ ಶಿಕ್ಷಣವೆನ್ನುವುದು ಬೃಹತ್ ದಂಧೆಯಾಗಿ ಪರಿವರ್ತನೆಗೊಂಡಿದೆ. ಕಲಿಕೆ ಎನ್ನುವುದು ಬರೇ ಅಂಕಪಟ್ಟಿಗೆ ಸೀಮಿತಗೊಳ್ಳುತ್ತಿದೆ. ಕೊರೋನದ ಈ ದಿನಗಳಲ್ಲಿ ಶಿಕ್ಷಣವೆನ್ನುವುದು ಇನ್ನಷ್ಟು ಸಂಕುಚಿತಗೊಂಡಿದೆ. ಯಾರು ಅತ್ಯುತ್ತಮ ಮೊಬೈಲ್ ಹೊಂದಿರುತ್ತಾರೆಯೋ ಅವರಷ್ಟೇ ಶಿಕ್ಷಣಕ್ಕೆ ಅರ್ಹರಾಗುತ್ತಾರೆ ಮಾತ್ರವಲ್ಲ, ಆನ್‌ಲೈನ್ ಪರೀಕ್ಷೆಗಳು ವಿದ್ಯಾರ್ಥಿಯ ಪ್ರತಿಭೆಯನ್ನು ಒರೆಗೆ ಹಚ್ಚಲು ಸಂಪೂರ್ಣ ವಿಫಲವಾಗಿವೆ.

ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವ ಸಂದರ್ಭದಲ್ಲಿ, ಕೆಲವು ಖಾಸಗಿ ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಅರ್ಥಪೂರ್ಣ ಸೇವೆಗಳನ್ನು ಸಲ್ಲಿಸುತ್ತಿದ್ದವು. ಬಡವರಿಗೆ, ದುರ್ಬಲರಿಗೆ ಈ ಶಿಕ್ಷಣ ಸಂಸ್ಥೆಗಳು ನೆರವಾಗುತ್ತಿದ್ದವು. ಅಂತಹ ಶಾಲೆಗಳೆಲ್ಲ ಇದೀಗ ಶಿಕ್ಷಕರಿಗೆ ವೇತನ ನೀಡಲಾಗದೆ ಒದ್ದಾಡುತ್ತಿವೆ. ರಾಜ್ಯದ ಸಾವಿರಾರು ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ. ಸಾವಿರಾರು ಶಿಕ್ಷಕರು ವೇತನವಿಲ್ಲದೆಯೇ ಅನಿವಾರ್ಯವಾಗಿ ಆನ್‌ಲೈನ್ ಶಿಕ್ಷಣದಲ್ಲಿ ದುಡಿಯುತ್ತಿದ್ದಾರೆ. ಹಲವು ಶಿಕ್ಷಣ ಸಂಸ್ಥೆಗಳು ಮುಚ್ಚುವಂತಹ ಸ್ಥಿತಿಗೆ ಬಂದಿವೆ. ಶಾಲೆಗಳನ್ನು ತೆರೆಯದೇ ಇರುವ ಕಾರಣದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಸರಕಾರದ ಬಳಿ ಇಲ್ಲ. ಶಾಲೆ ತೆರೆಯುವ ಕುರಿತಂತೆ ಪೋಷಕರಿಂದ ವ್ಯಾಪಕ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ‘ವಿದ್ಯಾಗಮ ಯೋಜನೆ’ಯನ್ನು ಪುನಾರಂಭಿಸಲು ತರಲು ಸರಕಾರ ಯೋಚಿಸುತ್ತಿದೆ. ಆದರೆ ಈ ಯೋಜನೆಯೂ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವಲ್ಲಿ ಈಗಾಗಲೇ ವಿಫಲವಾಗಿದೆ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಈ ಯೋಜನೆ ಪರಿಹಾರ ನೀಡದು. ಆದುದರಿಂದ, ಸರಕಾರ ಪೋಷಕರು ಮತ್ತು ವಿದ್ಯಾರ್ಥಿಗಳ ಬೇಡಿಕೆಯಂತೆ ಶಾಲೆಗಳನ್ನು ತೆರೆಯಬೇಕಾಗಿದೆ. ಉಳಿದೆಲ್ಲ ಬಾಗಿಲನ್ನು ತೆರೆದಿಟ್ಟು ಜ್ಞಾನದ ಬಾಗಿಲನ್ನು ಮಾತ್ರ ಮುಚ್ಚಿಡುವುದು ಯಾವ ರೀತಿಯಲ್ಲೂ ಬುದ್ಧಿವಂತಿಕೆಯಲ್ಲ. ಇದು ನಾವಾಗಿಯೇ ಕತ್ತಲೆಯ ಭವಿಷ್ಯವೊಂದಕ್ಕೆ ಆಹ್ವಾನ ನೀಡಿದಂತಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News