ಪ್ರಮುಖ ವಿಷಯಗಳ ಚರ್ಚೆಯಿಂದ ನುಣುಚಿಕೊಳ್ಳಲು ಕೇಂದ್ರದಿಂದ ಸಂಸತ್‌ ಅಧಿವೇಶನ ರದ್ದು: ಶಿವಸೇನೆ

Update: 2020-12-17 16:17 GMT

ಮುಂಬೈ, ಡಿ. 17: ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಪಡಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಗುರುವಾರ ಟೀಕಿಸಿರುವ ಶಿವಸೇನೆ, ರೈತರ ಪ್ರತಿಭಟನೆ, ದೇಶದ ಆರ್ಥಿಕ ಸ್ಥಿತಿ ಹಾಗೂ ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನಂತಹ ವಿಷಯಗಳ ಕುರಿತ ಚರ್ಚೆಯಿಂದ ನುಣುಚಿಕೊಳ್ಳಲು ಕೇಂದ್ರ ಸರಕಾರ ಬಯಸಿದೆ ಎಂದಿದೆ. ಈ ವಿಷಯಗಳ ಬಗ್ಗೆ ಪ್ರತಿಪಕ್ಷಗಳಿಗೆ ಪ್ರಶ್ನೆ ಕೇಳಲು ಅವಕಾಶ ಸಿಗಬಾರದು ಎಂಬ ಕಾರಣಕ್ಕೆ ಅಧಿವೇಶನ ರದ್ದುಗೊಳಿಸಲಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿಯಾದ ‘ಸಾಮ್ನಾ’ದಲ್ಲಿ ಹೇಳಿದೆ.

‘‘ಇದು ಯಾವ ರೀತಿಯ ಪ್ರಜಾಪ್ರಭುತ್ವದ ಅನುಸರಣೆ ? ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದ ಧ್ವನಿ ಪ್ರಬಲವಾಗಿದ್ದರೆ ಮಾತ್ರ ದೇಶ ಜೀವಂತವಾಗಿರುತ್ತದೆ. ಸಂಸತ್ತಿನ ಪ್ರಜಾಪ್ರಭುತ್ವದ ಸಂಪ್ರದಾಯ ದೇಶವನ್ನು ಪ್ರೇರೇಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಪ್ರದಾಯವನ್ನು ಮುಂದುವರಿಸಬೇಕು’’ ಎಂದು ಶಿವಸೇನೆ ಹೇಳಿದೆ.

ಕೊರೋನ ಸಾಂಕ್ರಾಮಿಕ ರೋಗದ ಕಾರಣಕ್ಕೆ ಈ ವರ್ಷ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸುವುದಿಲ್ಲ ಹಾಗೂ ಬಜೆಟ್ ಅಧಿವೇಶನವನ್ನು 2021 ಜನವರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಸರಕಾರ ಇತ್ತೀಚೆಗೆ ಪ್ರತಿಪಕ್ಷಕ್ಕೆ ತಿಳಿಸಿತ್ತು.

‘‘ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಕೊರೋನ ಸಾಂಕ್ರಾಮಿಕ ರೋಗದ ಕಾರಣಕ್ಕೆ ಚುನಾವಣೆಯನ್ನು ನಿಲ್ಲಿಸಿಲ್ಲ. ಆದರೆ, ಸಂಸತ್ತಿನಲ್ಲಿ ನಾಲ್ಕು ದಿನಗಳ ಚಳಿಗಾಲದ ಅಧಿವೇಶನಕ್ಕೆ ಮಾತ್ರ ಅವಕಾಶ ನೀಡುತ್ತಿಲ್ಲ’’ ಎಂದು ಶಿವಸೇನೆ ಹೇಳಿದೆ.

‘‘ಅಮೆರಿಕದಲ್ಲಿ ಚುನಾವಣೆ ನಡೆಸಲಾಯಿತು ಹಾಗೂ ಪ್ರಜಾಪ್ರಭುತ್ವ ರೀತಿಯಲ್ಲಿ ಅಧ್ಯಕ್ಷರನ್ನು ಬದಲಾಯಿಸಲಾಯಿತು. ಇದು ಅಮೆರಿಕದ ಪ್ರಜಾಪ್ರಭುತ್ವ. ಆದರೆ, ನಾವು ಇಲ್ಲಿ ಪ್ರಜಾಪ್ರಭುತ್ವವನ್ನು ಬಂಧನದಲ್ಲಿ ಇರಿಸಿದ್ದೇವೆ’’ ಎಂದು ಶಿವಸೇನೆ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News