ಉಯಿಘರ್ ಮುಸ್ಲಿಮರನ್ನು ಗುರುತಿಸುವ ಸಾಫ್ಟ್‌ವೇರ್ ಜೊತೆ ಸಂಬಂಧವಿಲ್ಲ
ಶಾಂಘೈ (ಚೀನಾ), ಡಿ. 18: ತನ್ನ ಕ್ಲೌಡ್-ಕಂಪ್ಯೂಟಿಂಗ್ ಘಟಕ ಅಭಿವೃದ್ಧಿಪಡಿಸಿರುವ ಮುಖ ಪತ್ತೆಹಚ್ಚುವ ಸಾಫ್ಟ್‌ವೇರ್‌ಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಚೀನಾದ ಬೃಹತ್ ಇ-ಕಾಮರ್ಸ್ (ಆನ್‌ಲೈನ್ ಮಾರಾಟ) ಕಂಪೆನಿ ಅಲಿಬಾಬಾ ಹೇಳಿದೆ.
ಈ ಸಾಫ್ಟ್‌ವೇರನ್ನು ಬಳಸಿ ದೇಶದ ಮುಸ್ಲಿಮ್ ಉಯಿಘರ್ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರುತಿಸಬಹುದಾಗಿದೆ.
ಇಂಥ ಸಾಫ್ಟ್‌ವೇರೊಂದನ್ನು ಅಲಿಬಾಬಾ ಅಭಿವೃದ್ಧಿಪಡಿಸಿದೆ ಎನ್ನುವ ವರದಿಯೊಂದು ಈ ವಾರ ಪ್ರಕಟಗೊಂಡ ಬಳಿಕ, ಅಲಿಬಾಬಾ ಕಂಪೆನಿ ವಿವಾದಕ್ಕೆ ಸಿಲುಕಿಕೊಂಡಿದೆ.
ಇಂಥ ಸಾಫ್ಟ್‌ವೇರನ್ನು ಅಲಿಬಾಬಾ ಕ್ಲೌಡ್ ಅಭಿವೃದ್ಧಿಪಡಿಸಿರುವುದು ತಿಳಿದು ತುಂಬಾ ಬೇಸರವಾಗಿದೆ ಎಂದು ಗುರುವಾರ ರಾತ್ರಿ ಆನ್‌ಲೈನ್‌ನಲ್ಲಿ ನೀಡಲಾದ ಹೇಳಿಕೆಯೊಂದರಲ್ಲಿ ಅಲಿಬಾಬಾ ಕಂಪೆನಿ ಹೇಳಿಕೊಂಡಿದೆ.
ಈ ತಂತ್ರಜ್ಞಾನವನ್ನು ಸಾಮರ್ಥ್ಯ ಪರೀಕ್ಷೆಗಾಗಿ ಮಾತ್ರ ಬಳಸಲಾಗಿದೆ ಹಾಗೂ ಅದನ್ನು ಯಾವುದೇ ಗ್ರಾಹಕರಿಗೆ ನೀಡಲಾಗಿಲ್ಲ ಎಂದು ಹೇಳಿರುವ ಕಂಪೆನಿ, ತನ್ನ ಉತ್ಪನ್ನಗಳಲ್ಲಿ ಇರುವ ಯಾವುದೇ ಜನಾಂಗೀಯ ಗುರುತನ್ನು ತೆಗೆದುಹಾಕಿರುವುದಾಗಿ ತಿಳಿಸಿದೆ.
‘‘ನಿರ್ದಿಷ್ಟ ಜನಾಂಗೀಯ ಗುಂಪುಗಳನ್ನು ಗುರುತಿಸುವುದಕ್ಕೆ ಅಥವಾ ಗುರಿಯಾಗಿಸುವುದಕ್ಕೆ ನಮ್ಮ ಸಾಫ್ಟ್‌ವೇರನ್ನು ಬಳಸಲು ನಾವು ಅವಕಾಶ ನೀಡುವುದಿಲ್ಲ’’ ಎಂದು ಹೇಳಿಕೆ ತಿಳಿಸಿದೆ.
ಚೀನಾದ ಮರುಶಿಕ್ಷಣ ಶಿಬಿರಗಳಲ್ಲಿ 10 ಲಕ್ಷಕ್ಕೂ ಅಧಿಕ ಉಯಿಘರ್ ಮುಸ್ಲಿಮರು ಮತ್ತು ಇತರ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಕೂಡಿ ಹಾಕಲಾಗಿದೆ ಎಂದು ಅಂತರ್‌ರಾಷ್ಟ್ರೀಯ ಮಾನವಹಕ್ಕು ಗುಂಪುಗಳು ಹೇಳಿವೆ. ಆರಂಭದಲ್ಲಿ, ಇಂಥ ಶಿಬಿರಗಳು ಇರುವುದನ್ನು ಚೀನಾ ನಿರಾಕರಿಸಿತಾದರೂ, ಈಗ ಅವುಗಳನ್ನು ವೃತ್ತಿ ತರಬೇತಿ ಕೇಂದ್ರಗಳೆಂದು ಕರೆಯುತ್ತಿದೆ. ಧಾರ್ಮಿಕ ತೀವ್ರವಾದಕ್ಕೆ ಪರ್ಯಾಯವೊಂದನ್ನು ನೀಡಲು ಇಂಥ ವೃತ್ತಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಅದು ಹೇಳುತ್ತಿದೆ.