×
Ad

ಸಂತರನ್ನು ‘ಅಣಕಿಸಿದ ’ವಿವಾದ: ಅನಿಮೇಶನ್ ಧಾರಾವಾಹಿ ಸ್ಥಗಿತಗೊಳಿಸಿದ ದೂರದರ್ಶನ

Update: 2020-12-19 21:56 IST

ಹೊಸದಿಲ್ಲಿ,ಡಿ.18: ಸರಕಾರಿ ಸ್ವಾಮ್ಯ ಟಿವಿ ವಾಹಿನಿ ದೂರದರ್ಶನವು ಖ್ಯಾತ ಅನಿಮೇಶನ್ ಸರಣಿ ಧಾರಾವಾಹಿ ‘ಶೇಖ್ ಚಿಲ್ಲಿ ಆ್ಯಂಡ್ ಫ್ರೆಂಡ್ಸ್’ನ ಪ್ರಸಾರವನ್ನು ಸ್ಥಗಿತಗೊಳಿಸಿದೆ. ಈ ಸರಣಿಯ ಒಂದು ಎಪಿಸೋಡ್‌ನಲ್ಲಿ ಸಂತರು ಹಾಗೂ ಯೋಗ ಗುರುಗಳನ್ನು ಅಣಕಿಸಲಾಗಿತ್ತೆಂದು ಹೇಳಲಾಗಿದ್ದು, ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಈ ಸರಣಿಯ ಒಂದು ಎಪಿಸೋಡ್‌ನಲ್ಲಿ ಕಥಾನಾಯಕನು, ಯೋಗ ಗುರುವಿಗೆ ಸವಾಲೆಸೆಯುತ್ತಾನೆ ಹಾಗೂ ಯಕ್ಷಿ (ಜೀನಿ)ಯೊಂದರ ಸಹಾಯದಿಂದ ಅದ್ಭುತವಾದ ಯೋಗಾಸನಗಳನ್ನು ಪ್ರದರ್ಶಿಸುತ್ತಾನೆ. ಇನ್ನೊಂದು ಎಪಿಸೋಡ್‌ನಲ್ಲಿ, ಕಥಾನಾಯಕನು ಇನ್ನೊಬ್ಬ ಯೋಗ ಗುರುವಿಗೆ ಸವಾಲೆಸೆದಾಗ ಆತ ಮಾಟಗಾರನಾಗಿ ಬದಲಾಗುವುದನ್ನು ತೋರಿಸಲಾಗಿದೆ.

ನಾಲ್ಕು ತಿಂಗಳ ಹಿಂದೆ ಡಿಡಿ ನ್ಯಾಶನಲ್‌ನಲ್ಲಿ ಈ ‘ಶೇಖ್ ಚಿಲ್ಲಿ ಆ್ಯಂಡ್ ಫ್ರೆಂಡ್ಸ್’ ಪ್ರತಿದಿನವೂ ಬೆಳಗ್ಗೆ 8:00 ಗಂಟೆಗೆ ಪ್ರಸಾರವಾಗುತ್ತಿತ್ತು. ದೂರದರ್ಶನ ಸಂಸ್ಥೆಯು ಡಿಸ್ಕವರಿ ಕಿಡ್ಸ್ ಚಾನೆಲ್ ಜೊತೆ ಪಾಲುದಾರಿಕೆ ಮಾಡಿಕೊಂಡು ವಿವಿಧ ಕಾರ್ಯಕ್ರಮಗಳ ಪ್ರಸಾರವನ್ನು ಆರಂಭಿಸಿದ ಬಳಿಕ ಈ ಸರಣಿಯನ್ನು ಪ್ರದರ್ಶಿಸಲಾಗುತ್ತಿತ್ತು. ಇದೇ ರೀತಿಯಾಗಿ ಲಿಟಲ್ ಸಿಂಗಂ ಹಾಗೂ ಕಿಸ್ನಾದಂತಹ ಟಿವಿ ಶೋಗಳನ್ನು ಕೂಡಾ ಪ್ರದರ್ಶಿಸಲಾಗುತ್ತಿದೆ. ಶೇಖ್ ಚಿಲ್ಲಿ ಆ್ಯಂಡ್ ಫ್ರೆಂಡ್ಸ್ ಡಿಸೆಂಬರ್ ತಿಂಗಳ ಮೂರನೆವಾರದಲ್ಲಿ ಮುಕ್ತಾಯಗೊಳ್ಳುವುದರಲ್ಲಿತ್ತು ಹಾಗೂ ಪ್ರಸಾರಕ್ಕೆ ಬಾಕಿ ಉಳಿದಿದ್ದ ಇತರ ಎಪಿಸೋಡ್‌ಗಳು ಕಳೆದ ಎಪಿಸೋಡ್‌ಗಳ ಪುನರಾವರ್ತನೆಯಷ್ಟೇ ಆಗಿದೆ ಎಂದು ಪ್ರಸಾರ ಭಾರತಿ ಸ್ಪಷ್ಟೀಕರಣ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News