ಅಫ್ಘಾನ್: ಅಮೆರಿಕದ ವಾಯುನೆಲೆಯ ಮೇಲೆ ರಾಕೆಟ್ ದಾಳಿ
Update: 2020-12-19 23:51 IST
ಕಾಬೂಲ್ (ಅಫ್ಘಾನಿಸ್ತಾನ), ಡಿ. 19: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಉತ್ತರ ಭಾಗದಲ್ಲಿರುವ ಅಮೆರಿಕದ ಪ್ರಮುಖ ವಾಯು ನೆಲೆಯೊಂದನ್ನು ಗುರಿಯಾಗಿಸಿ ಶನಿವಾರ ಮುಂಜಾನೆ ರಾಕೆಟ್ ದಾಳಿ ನಡೆಸಲಾಗಿದೆ. ಆದರೆ ಈ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಹಾಗೂ ವಾಯುನೆಲೆಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ಮುಂಜಾನೆ 6 ಗಂಟೆಯ ಸುಮಾರಿಗೆ ಬಗ್ರಾಮ್ ವಾಯುನೆಲೆಯತ್ತ ಐದು ರಾಕೆಟ್‌ಗಳನ್ನು ಉಡಾಯಿಸಲಾಗಿದೆ ಎಂದು ಪರ್ವನ್ ಪ್ರಾಂತದ ವಕ್ತಾರೆ ವಹೀದಾ ಶಾಹ್ಕರ್ ತಿಳಿಸಿದರು. ಅದೇ ವೇಳೆ, ದಾಳಿಯಲ್ಲಿ ಬಳಸಲಾದ ವಾಹನವೊಂದರಲ್ಲಿದ್ದ ಇತರ ಏಳು ರಾಕೆಟ್‌ಗಳನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಅವರು ಹೇಳಿದರು.
ರಾಕೆಟ್ ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ. ಆದರೆ, ತಾಲಿಬಾನ್ ಭಯೋತ್ಪಾದನಾ ಗುಂಪು, ಈ ದಾಳಿಯನ್ನು ತಾನು ಮಾಡಿಲ್ಲ ಎಂದು ಹೇಳಿದೆ.
ಇದೇ ವಾಯು ನೆಲೆಯ ಮೇಲೆ ಎಪ್ರಿಲ್‌ನಲ್ಲಿ ನಡೆದ ದಾಳಿಯ ಹೊಣೆಯನ್ನು ಐಸಿಸ್ ವಹಿಸಿಕೊಂಡಿತ್ತು.