'ರೈತರು, ಚರ್ಮ ಹದ ಮಾಡುವವರು ಮತ್ತಿತರರನ್ನೂ ಸಂಕಷ್ಟಕ್ಕೆ ತಳ್ಳಲಿರುವ ರಾಜ್ಯದ ಗೋಹತ್ಯೆ ನಿಷೇಧ ಕಾನೂನು'

Update: 2020-12-20 13:13 GMT

ಕರ್ನಾಟಕದ ಬಿಜೆಪಿ ಸರಕಾರವು ಇತ್ತೀಚಿಗಷ್ಟೇ ವಿವಾದಾತ್ಮಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣೆ ಮಸೂದೆ,2020ನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಈ ಮಸೂದೆಯನ್ನು ಹೆಚ್ಚು ಕಠಿಣವಲ್ಲದಿದ್ದ, ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಿದ್ದ 1964ರ ಗೋರಕ್ಷಣೆ ಕಾನೂನಿನ ಬದಲಿಗೆ ತರಲಾಗಿದೆ. ನೂತನ ಮಸೂದೆಯಲ್ಲಿ ಆಕಳಿನ ವ್ಯಾಖ್ಯೆಯನ್ನು ವಿಸ್ತರಿಸಲಾಗಿದ್ದು, ಆಕಳು ಮತ್ತು ಆಕಳ ಕರುವಿನ ಜೊತೆಗೆ ಗೂಳಿ, ಎತ್ತು ಮತ್ತು ಎಮ್ಮೆಗಳನ್ನೂ ಅದರ ವ್ಯಾಪ್ತಿಗೆ ತರಲಾಗಿದೆ. ಈ ಮಸೂದೆಯು ಶಾಸನವಾಗಿ ಜಾರಿಗೊಂಡಾಗ ರಾಜ್ಯದಲ್ಲಿ ಬೀಫ್ ಮೇಲೆ ಸಂಪೂರ್ಣ ನಿಷೇಧವನ್ನು ಹೇರಲಿದೆ.

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ವಿಧಾನಸಭೆಯು ಅಂಗೀಕರಿಸಿರುವ ಗೋಹತ್ಯೆ ನಿಷೇಧ ಮಸೂದೆಯು ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆ ಅಥವಾ ಐದು ಲ.ರೂ.ವರೆಗೆ ದಂಡ ಅಥವಾ ಎರಡನ್ನೂ ಒಳಗೊಂಡಿದೆ. ಇಷ್ಟೇ ಅಲ್ಲ,ಕಾಯ್ದೆಯು ಈಗಾಗಲೇ ಕೃಷಿ ಸಂಕಷ್ಟವನ್ನು ಎದುರಿಸುತ್ತಿರುವ ರೈತರ ಮತ್ತು ಹೈನುಗಾರರ ಮೇಲೂ ದೂರಗಾಮಿ ಆರ್ಥಿಕ ದುಷ್ಪರಿಣಾಮಗಳನ್ನುಂಟು ಮಾಡಲಿದೆ. ಚರ್ಮೋದ್ಯೋಗ ಮತ್ತು ಹೋಟೆಲ್‌ನಂತಹ ಉದ್ಯಮಗಳಿಗೂ ಭಾರೀ ಹೊಡೆತ ಬೀಳಲಿದೆ ಎಂದು indianexpress.com ವರದಿ ಮಾಡಿದೆ.

ಬೆಂಗಳೂರಿನ ಅತ್ಯಂತ ದೊಡ್ಡ ಬೀಫ್ ಮಾರುಕಟ್ಟೆಗಳಲ್ಲಿ ಒಂದಾಗಿರುವ ಶಿವಾಜಿನಗರ ಬೀಫ್ ಮಾರ್ಕೆಟ್‌ನಲ್ಲಿಯ ಬೀಫ್ ವ್ಯಾಪಾರಿಗಳು ಸರಕಾರದ ಈ ಕ್ರಮದಿಂದ ಕಂಗಾಲಾಗಿದ್ದಾರೆ. ಈ ಮಾರ್ಕೆಟ್ ನಗರದಲ್ಲಿಯ ಸಣ್ಣ ಹೋಟೆಲ್‌ಗಳಿಂದ ಹಿಡಿದು ಸ್ಟಾರ್ ಹೋಟೆಲ್‌ಗಳವರೆಗೆ ಮಾಂಸವನ್ನು ಪೂರೈಸುತ್ತದೆ,ಅಲ್ಲದೆ ಸಾವಿರಾರು ಗ್ರಾಹಕರು ಪ್ರತಿ ದಿನ ಇಲ್ಲಿಯ ಅಂಗಡಿಗಳಿಂದ ಬೀಫ್ ಖರೀದಿಸುತ್ತಾರೆ.

ನೂತನ ಮಸೂದೆಯು ಜಾರಿಗೊಂಡರೆ ರಾಜ್ಯದಲ್ಲಿ ಬೀಫ್ ಮತ್ತು ಸಂಬಂಧಿತ ವ್ಯಾಪಾರವನ್ನೇ ಅವಲಂಬಿಸಿರುವ 40 ಲಕ್ಷಕ್ಕೂ ಅಧಿಕ ಜನರು ಜೀವನೋಪಾಯವನ್ನು ಕಳೆದುಕೊಳ್ಳುತ್ತಾರೆ ಎಂದು ಕರ್ನಾಟಕ ಬೀಫ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಖಾಸಿಂ ಐಜಾಝ್ ಕುರೇಶಿ ಅವರು ಆತಂಕವನ್ನು ವ್ಯಕ್ತಪಡಿಸಿದರು.

ಇದೊಂದು ರಾಜಕೀಯ ಪ್ರೇರಿತ ಮಸೂದೆ ಎಂದು ಬಣ್ಣಿಸಿದ ಅವರು, ತಾನು ಗೋವುಗಳನ್ನು ರಕ್ಷಿಸುವುದಾಗಿ ಸರಕಾರವು ಹೇಳಿಕೊಳ್ಳುತ್ತಿದೆ. ಆದರೆ ಗೋಶಾಲೆಗಳ ಸ್ಥಿತಿಯನ್ನೊಮ್ಮೆ ನೋಡಿ.ಅಲ್ಲಿ ಗೋವುಗಳು ಸೂಕ್ತ ಆಹಾರ,ನಿಗಾ ಇಲ್ಲದೆ ನರಳಿ ನರಳಿ ಸಾಯುತ್ತಿವೆ ಎಂದರು.

ನೂತನ ಮಸೂದೆಯು 2010ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಂಗೀಕರಿಸಲಾಗಿದ್ದ ಕಾನೂನಿನ ಹೆಚ್ಚು ಕಠಿಣ ಆವೃತ್ತಿಯಾಗಿದೆ. ಎಲ್ಲ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಲು ಉದ್ದೇಶಿಸಿದ್ದ ಅದು, ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಅತ್ಯಂತ ಕಠಿಣ ದಂಡನೆಗಳನ್ನು ಶಿಫಾರಸು ಮಾಡಿತ್ತು. 2013ರಲ್ಲಿ ಈ ಮಸೂದೆಗೆ ರಾಜ್ಯಪಾಲರ ಅಂಕಿತವನ್ನು ಪಡೆಯಲು ವಿಫಲಗೊಂಡಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಬಳಿಕ ಅದನ್ನು ಮೂಲೆಗುಂಪು ಮಾಡಿತ್ತು. ನಂತರ 1964ರ ಗೋರಕ್ಷಣೆ ಕಾಯ್ದೆಯೇ ಮುಂದುವರಿದುಕೊಂಡು ಬಂದಿತ್ತು. ಅದು ಆಕಳು ಅಥವಾ ಎವ್ಮೆುಕರುವಿನ ಹತ್ಯೆಯನ್ನು ನಿಷೇಧಿಸಿತ್ತಾದರೂ,12 ವರ್ಷಕ್ಕಿಂತ ಹೆಚ್ಚು ಪ್ರಾಯವಾಗಿದೆ, ಸಂತಾನೋತ್ಪತ್ತಿಗೆ ಅಸಮರ್ಥವಾಗಿದೆ ಅಥವಾ ಅನಾರೋಗ್ಯಪೀಡಿತವಾಗಿದೆ ಎಂದು ಪಶುವೈದ್ಯರು ಪ್ರಮಾಣೀಕರಿಸಿದರೆ ಎತ್ತು, ಎಮ್ಮೆ ಅಥವಾ ಕೋಣವನ್ನು ವಧಿಸಲು ಅವಕಾಶ ನೀಡಿತ್ತು.

‘ನಾವು 1964ರ ಕಾಯ್ದೆಯನ್ನು ಪಾಲಿಸಿಕೊಂಡು ಬಂದಿದ್ದೇವೆ ಮತ್ತು ಎಂದೂ ಆಕಳುಗಳ ವಧೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. 12 ವರ್ಷಕ್ಕೂ ಹೆಚ್ಚು ಪ್ರಾಯದ ಎತ್ತುಗಳು,ಕೋಣಗಳು ಮತ್ತು ಎಮ್ಮೆಗಳನ್ನು ಪಶು ಸಂಗೋಪನಾ ಇಲಾಖೆ ಅಥವಾ ಬಿಬಿಎಂಪಿ ನಿಯೋಜಿತ ಪಶುವೈದ್ಯರ ಉಪಸ್ಥಿತಿಯಲ್ಲಿ ವಧಿಸುತ್ತಿದ್ದೇವೆ ’ಎಂದು ಕರ್ನಾಟಕ ಬೀಫ್ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ರುಸ್ತುಂ ಶಫೀಯುಲ್ಲಾ ಹೇಳಿದರು.

ಬೀಫ್ ಅನ್ನು ಅದರ ಪೋಷಕಾಂಶಗಳಿಗಾಗಿ, ವಿಶೇಷವಾಗಿ ಪ್ರೋಟಿನ್‌ಗಾಗಿ ಕಡಿಮೆ ಆದಾಯ ಗುಂಪುಗಳಿಗೆ ಸೇರಿದ ಹೆಚ್ಚಿನ ಜನರು ಸೇವಿಸುತ್ತಾರೆ ಎಂದು ಬೆಟ್ಟು ಮಾಡಿದ ಕುರೇಷಿ, ಬೀಫ್, ಮಟನ್ ಅಥವಾ ಚಿಕನ್‌ಗೆ ಹೆಚ್ಚಿನ ಹಣ ನೀಡಲು ಸಾಧ್ಯವಿರದ ಬಡವರ ಮಾಂಸವಾಗಿದೆ. ಮುಸ್ಲಿಮರು ಮಾತ್ರವಲ್ಲ, ಭಾರೀ ಸಂಖ್ಯೆಯ ದಲಿತರು ಮತ್ತು ಕ್ರೈಸ್ತರೂ ಅದನ್ನು ತಿನ್ನುತ್ತಾರೆ ಎಂದರು. ಜಾನುವಾರುಗಳ ಚರ್ಮ ಮತ್ತು ಮೂಳೆಗಳ ವ್ಯಾಪಾರಕ್ಕಾಗಿ ಮೇಲ್ಜಾತಿಗಳ ಸಮುದಾಯಗಳ ಜನರೂ ಶಿವಾಜಿ ನಗರ ಮಾರ್ಕೆಟ್‌ಗೆ ಬರುತ್ತಾರೆ ಎಂದರು.

ತನ್ನಿಂದ ಬೀಫ್ ಖರೀದಿಸುವವರಲ್ಲಿ ಶೇ.30ರಷ್ಟು ಜನರು ಮಾತ್ರ ಮುಸ್ಲಿಮರಾಗಿದ್ದು,ಇತರರು ಉಳಿದ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ಇನ್ನೋರ್ವ ವ್ಯಾಪಾರಿ ಮುಹಮ್ಮದ್ ರಿಯಾಝ್ ಅಹ್ಮದ್ ಹೇಳಿದರು. ಮಸೂದೆಯು ರಾಜಕೀಯ ಉದ್ದೇಶಗಳನ್ನು ಮಾತ್ರಹೊಂದಿದೆ ಮತ್ತು ಧ್ರುವೀಕರಣಕ್ಕೆ ಕಾರಣವಾಗಲಿದೆ ಎಂದು ಹಲವರು ಭಾವಿಸಿದ್ದಾರೆ.

ಬೀಫ್ ನಿಷೇಧಿಸುವ ಸರಕಾರದ ಉದ್ದೇಶದ ಹಿಂದೆ ರಾಜಕೀಯವಿದೆ. ಅದು ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಲಿದೆ. ನಮ್ಮಂತಹ ಬಡಜನರಿಗೆ ಈ ಕೆಲಸ ಮಾತ್ರ ಗೊತ್ತು. ಈ ಕಾಯ್ದೆ ಜಾರಿಗೆ ಬಂದರೆ ನಾವು ಜೀವನೋಪಾಯ ಕಳೆದುಕೊಳ್ಳುತ್ತೇವೆ ’ಎಂದು ಶಿವಾಜಿ ಮಾರ್ಕೆಟ್‌ನ ಬೀಫ್ ವ್ಯಾಪಾರಿ ಮಸೂದ್ ಅಹ್ಮದ್ ಆತಂಕ ವ್ಯಕ್ತಪಡಿಸಿದರು.

ಬೀಫ್ ವ್ಯಾಪಾರಿಗಳ ಜೊತೆಗೆ ಸಣ್ಣ ಹೋಟೆಲ್‌ಗಳ ಉದ್ಯಮ, ವಿಶೇಷವಾಗಿ ಶಿವಾಜಿ ನಗರದಲ್ಲಿಯ ಮತ್ತು ಆಸುಪಾಸಿನ ಹೋಟೆಲ್‌ಗಳು ನಿಷೇಧವನ್ನು ಎದುರಿಸಿ ಬದುಕುಳಿಯುವ ಸಾಧ್ಯತೆಗಳು ಕಡಿಮೆ.

‘ನಮ್ಮ ಮೆನುವಿನಲ್ಲಿ ಬೀಫ್‌ಖಾದ್ಯಗಳೇ ಹೆಚ್ಚಾಗಿವೆ. ಬೀಫ್ ಖಾದ್ಯಗಳಿಗಾಗಿ ಹೆಸರಾಗಿರುವ ಸುಮಾರು 30ಕ್ಕೂ ಅಧಿಕ ರೆಸ್ಟೋರಂಟ್‌ಗಳು ಇಲ್ಲಿವೆ. ಬೀಫ್ ನಿಷೇಧವಾದರೆ ಅವರು ಗ್ರಾಹಕರಿಗೆ ಏನನ್ನು ನೀಡುತ್ತಾರೆ? ಈ ಪ್ರದೇಶದಲ್ಲಿ ಹೋಟೆಲ್‌ಗಳನ್ನು ನಡೆಸುವವರು ಮತ್ತು ಕೆಲಸಗಾರರು ಸೇರಿದಂತೆ 100ಕ್ಕೂ ಅಧಿಕ ಜನರು ಬೀದಿಗೆ ಬೀಳುತ್ತಾರೆ ’ಎಂದು ಶಿವಾಜಿ ನಗರದ ನ್ಯೂ ಹಿಲಾಲ್ ರೆಸ್ಟೋರಂಟ್‌ನ ಮಾಲಿಕರು ಹೇಳಿದರು.

ಗೋಹತ್ಯೆ ನಿಷೇಧ ಮಸೂದೆಯನ್ನು ‘ರೈತ ವಿರೋಧಿ ’ಎಂದು ಬಣ್ಣಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ಆಕಳು ಅಥವಾ ಎಮ್ಮೆ ಹಾಲು ಕೊಡುವುದನ್ನು ನಿಲ್ಲಿಸಿದಾಗ ಅವುಗಳನ್ನು ಸಾಕುವುದು ಹೊರೆಯಾಗುವುದರಿಂದ ಸಾಮಾನ್ಯವಾಗಿ ರೈತರು ಅವುಗಳನ್ನು ಮಾರಾಟ ಮಾಡುತ್ತಾರೆ. ನಾವು ನಮ್ಮ ಅನುತ್ಪಾದಕ ಜಾನುವಾರುಗಳನ್ನು ನೋಡಿಕೊಳ್ಳಲು ಸಿದ್ಧರಿದ್ದೇವೆ,ಆದರೆ ನಮ್ಮ ಜಾನುವಾರು ಸತ್ತಾಗ ನಮಗೆ ಪರಿಹಾರ ದೊರೆಯುವಂತೆ ವಿಮಾ ಯೋಜನೆಯೊಂದನ್ನು ಸರಕಾರವು ಜಾರಿಗೊಳಿಸಬೇಕು ಎಂದರು.

ಮಸೂದೆಯು ಕಾನೂನಾದ ಬಳಿಕ ವಯಸ್ಸಾದ ಗೋವುಗಳಿಗಾಗಿ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಮಸೂದೆಯನ್ನು ವಿರೋಧಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಅದು ರೈತರು ಜಾನುವಾರುಗಳನ್ನು ಪೋಷಿಸುವುದನ್ನು ಅನಿವಾರ್ಯವಾಗಿಸುತ್ತದೆ. ಹೈಬ್ರಿಡ್ ತಳಿಗಳ ಜಾನುವಾರನ್ನು ಪೋಷಿಸಲು ದಿನಕ್ಕೆ ಕನಿಷ್ಠ 200 ರೂ.ಬೇಕು. ಇದು ಅತ್ಯಂತ ಅವ್ಯಾವಹಾರಿಕವಾಗಿದೆ ಎಂದಿದ್ದಾರೆ.

ಮಸೂದೆಯು ಚರ್ಮ ಹದ ಮಾಡುವ ಕೈಗಾರಿಕೆಗಳ ಮೇಲೂ ದುಷ್ಪರಿಣಾಮ ಬೀರಲಿದೆ. 1964ರ ಕಾಯ್ದೆಯ ಅನುಷ್ಠಾನದ ಬಳಿಕ ಈ ಪ್ರದೇಶದಲ್ಲಿ ಸುಮಾರು 10 ಟ್ಯಾನರಿಗಳು ಉಳಿದುಕೊಂಡಿವೆ. ಸರಕಾರವು ನೂತನ ಕಾಯ್ದೆಯನ್ನು ತಂದರೆ ಅವೂ ಮುಚ್ಚಲಿವೆ. ಸುಮಾರು 50 ಕುಟುಂಬಗಳು ತಮ್ಮ ದಿನದ ಕೂಳು ಕಳೆದುಕೊಳ್ಳುತ್ತವೆ ಎಂದು ಫ್ರೇಝರ್ ಟೌನ್‌ನ ಟ್ಯಾನರಿ ರಸ್ತೆಯಲ್ಲಿಯ ಟ್ಯಾನರಿಯೊಂದರ ಮಾಲಿಕ ಶೇಖ್ ಝಾಕೀರ್ ಹೇಳಿದರು.

ಹೆಚ್ಚಿನ ಟ್ಯಾನರಿಗಳ ಮಾಲಿಕರು ಮುಸ್ಲಿಮರಾಗಿದ್ದು, ಕಾರ್ಮಿಕರಲ್ಲಿ ಹೆಚ್ಚಿನವರು ತಮಿಳು ದಲಿತರಾಗಿದ್ದಾರೆ. ಇಲ್ಲಿಂದ ಚರ್ಮ ತಮಿಳುನಾಡು ಮತ್ತು ದೇಶದ ಇತರ ಭಾಗಗಳಿಗೆ ರವಾನೆಯಾಗುತ್ತದೆ ಎಂದರು.

ನೂತನ ಮಸೂದೆ ಡಿ.9ರಂದು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು, ಮರುದಿನ ವಿಧಾನ ಪರಿಷತ್‌ನಲ್ಲಿ ತಡೆಯನ್ನು ಎದುರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅಧ್ಯಾದೇಶವನ್ನು ತರಬಹುದು. ಮಸೂದೆಗೆ ಸೋಲಾಗಬಹುದು ಅಥವಾ ಪ್ರತಿಪಕ್ಷಗಳ ಬೇಡಿಕೆಯಂತೆ ಅದನ್ನು ಆಯ್ಕೆ ಸಮಿತಿಗೆ ಒಪ್ಪಿಸಬಹುದು ಎಂದು ಆತಂಕಗೊಂಡಿದ್ದ ಸರಕಾರವು ವಿಧಾನಪರಿಷತ್‌ನಲ್ಲಿ ಅದರ ಮಂಡನೆಯನ್ನು ಮುಂದೂಡಿತ್ತು. ಮೇಲ್ಮನೆಯಲ್ಲಿ ಬಿಜೆಪಿ ಬಹುಮತವನ್ನು ಹೊಂದಿಲ್ಲ.

ಡಿ.15ರಂದು ವಿಧಾನ ಪರಿಷತ್‌ನಲ್ಲಿ ಮಸೂದೆಯನ್ನು ಮಂಡಿಸಲು ಸರಕಾರವು ಮುಂದಾಗಿತ್ತು. ಅವಿಶ್ವಾಸ ಸೂಚನೆಗೆ ಸಂಬಂಧಿಸಿದಂತೆ ಪೀಠದಲ್ಲಿದ್ದ ಉಪ ಸಭಾಪತಿಗಳನ್ನು ಕೆಳಗೆಳೆದು ದೊಡ್ಡ ರಾದ್ಧಾಂತವೇ ಸೃಷ್ಟಿಯಾಗಿತ್ತು. ಆ ಬಳಿಕ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಇಲ್ಲಿ ಆಹಾರ ಕ್ರಮದ ಪ್ರಶ್ನೆಯಿಲ್ಲ. ಆದರೆ ಮಸೂದೆಯು ಉಂಟು ಮಾಡುವ ಆರ್ಥಿಕ ದುಷ್ಪರಿಣಾಮಗಳು ಹೆಚ್ಚು ಕಳವಳಕಾರಿಯಾಗಿವೆ. ಸರಕಾರವು ಜನರ ಜೀವನೋಪಾಯಗಳನ್ನು ಕಿತ್ತುಕೊಳ್ಳುವಂತಿಲ್ಲ. ಇಂತಹ ಮಸೂದೆಗಳನ್ನು ತರುವ ಮುನ್ನ ಸರಕಾರವು ಸೂಕ್ತ ಚರ್ಚೆಯನ್ನು ನಡೆಸಬೇಕು ಮತ್ತು ಯೋಜನೆಯನ್ನು ಹೊಂದಿರಬೇಕು ಎಂದು ರಾಜ್ಯ ವಿಧಾನಸಭೆಯಲ್ಲಿ ನಾಮಕರಣಗೊಂಡಿರುವ ಆಂಗ್ಲೋ ಇಂಡಿಯನ್ ಶಾಸಕಿ ವಿನಿಷಾ ನೀರೊ ಹೇಳಿದರು.

ಬೀಫ್ ನಿಷೇಧವು ಕಾಳಸಂತೆಗೆ ಕಾರಣವಾಗಲಿದೆ ಎಂದು ಬೆಂಗಳೂರಿನ ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ.ವರ್ಗೀಸ್ ಹೇಳಿದರೆ,ನೂತನ ಮಸೂದೆ ರೈತರ ಪಾಲಿಗೆ ಸಂಕಷ್ಟವನ್ನುಂಟು ಮಾಡಲಿದೆ. ಅನುತ್ಪಾದಕ ಜಾನುವಾರುಗಳನ್ನು ಇಟ್ಟುಕೊಂಡರೆ ಹೈನುಗಾರಿಕೆ ಅಥವಾ ಕೃಷಿಗಾಗಿ ಹೊಸದನ್ನು ಖರೀದಿಸಲು ಅವರಿಗೆ ಆರ್ಥಿಕವಾಗಿ ಸಾಧ್ಯವಾಗುವುದಿಲ್ಲ. ಜಾನುವಾರುಗಳ ಉತ್ಪನ್ನಗಳನ್ನು ಅವಲಂಬಿಸಿರುವ ಕಸಾಯಿಗಳು ಮತ್ತು ಟ್ಯಾನರಿಗಳಿಗೂ ತೊಂದರೆಯಾಗುತ್ತದೆ ಎಂದು ಕರ್ನಾಟಕ ಕೃಷಿ ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ ಕಮ್ಮರಡಿ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News