ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕೊರೋನ ವೈರಸ್ ಆರ್ಭಟ
ಲಂಡನ್ ,ಡಿ.20: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಪ್ರಭೇದದ ಕೊರೋನ ವೈರಸ್ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆಯೆಂದು ಅಮೆರಿಕದ ಮುಖ್ಯ ವೈದ್ಯಾಧಿಕಾರಿ ಕ್ರಿಸ್‌ವಿಟ್ಟಿ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಕೊರೋನ ವೈರಸ್ ಹೊಸ ಪ್ರಭೇದವು ನಿಯಂತ್ರಣ ಮೀರಿ ಹರಡುತ್ತಿದ್ದು, ಸಾರ್ವಜನಿಕರು ಅತ್ಯಂತ ಜಾಗರೂಕತೆಯಿಂದ ವರ್ತಿಸಬೇಕೆಂದು ಬ್ರಿಟಿಶ್ ಸರಕಾರ ಸೂಚನೆ ನೀಡಿದೆ.
ದಕ್ಷಿಣ ಇಂಗ್ಲೆಂಡ್‌ನಲ್ಲಿ ಕೊರೋನ ವೈರಸ್‌ನ ಹೊಸ ತಳಿಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆಂದು ಬ್ರಿಟನ್‌ನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನೊಕ್ ಕಳೆದ ಸೋಮವಾರ ತಿಳಿಸಿದ್ದರು.
ಹೊಸ ಪ್ರಭೇದದ ಕೊರೋನ ವೈರಸ್ ವೇಗವಾಗಿ ಹರಡುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯನ್ನು ಬ್ರಿಟನ್ ಎಚ್ಚರಿಸಿದೆಯೆಂದು ವಿಟ್ಟಿ ತಿಳಿಸಿದ್ದಾರೆ. ಆದಾಗ್ಯೂ ನೂತನ ತಳಿಯ ಕೊರೋನ ವೈರಸ್, ಸಾವಿನ ಪ್ರಮಾಣದಲ್ಲಿಯೂ ಭಾರೀ ಏರಿಕೆಯನ್ನುಂಟು ಮಾಡಲಿದೆಯೆಂಬುದಕ್ಕೆ ಈವರೆಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲವೆಂದು ಅವರು ತಿಳಿಸಿದ್ದಾರೆ.
ಕೊರೋನ ಸೋಂಕು ಹೊಸದಾಗಿ ಹರಡುವುದನ್ನು ತಡೆಯಲು ಪ್ರಧಾನಿ ಬೋರಿಸ್ ಜಾನ್ಸನ್ ಅವರು ವೇಲ್ಸ್, ಲಂಡನ್ ಹಾಗೂ ಪೂರ್ವ ಇಂಗ್ಲೆಂಡ್‌ನಲ್ಲಿ ಹೊಸ ಪ್ರಯಾಣ ನಿರ್ಬಂಧಗಳನ್ನು ಶೀಘ್ರದಲ್ಲೇ ಘೋಷಿಸಲಿದ್ದಾರೆಂದು ತಿಳಿದುಬಂದಿದೆ. ಡಿಸೆಂಬರ್ ತಿಂಗಳಿನಿಂದ ಬ್ರಿಟನ್‌ನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಏರಿಕೆ ಕಂಡುಬಂದಿದೆ. ಶುಕ್ರವಾರದಂದು ದೇಶಾದ್ಯಂತ 28,507 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕಳೆದವಾರ ಸೋಂಕಿನ ಪ್ರಕರಣಗಳಲ್ಲಿ ಹಿಂದಿನ ವಾರಕ್ಕಿಂತ ಶೇ.40.9ರಷ್ಟು ಹೆಚ್ಚಳ ಕಂಡುಬಂದಿದೆ.
ಹೊಸ ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ಹೊಸದಾಗಿ ಲಾಕ್‌ಡೌನ್ ಹೇರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲವೆಂದು ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.