×
Ad

ಲಾಕ್‌ಡೌನ್ ಭೀತಿ: ಸಾವಿರಾರು ಲಂಡನ್ ನಾಗರಿಕರ ವಲಸೆ

Update: 2020-12-20 23:11 IST

ಲಂಡನ್,ಡಿ.20: ಕೊರೋನದ ಹೊಸ ಪ್ರಭೇದದ ವೈರಸ್ ಹಾವಳಿ ತಡೆಯಲು ರಾಜಧಾನಿ ಲಂಡನ್‌ನಲ್ಲಿ ಲಾಕ್‌ಡೌನ್ ಹೇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾವಿರಾರು ಲಂಡನ್ ನಾಗರಿಕರು, ಬೇರೆ ಊರುಗಳಿಗೆ ವಲಸೆ ಹೋಗುತ್ತಿರುವುದು ರವಿವಾರ ಕಂಡುಬಂದಿದೆ.

ಕೊರೋನ ವೈರಸ್‌ನ ನೂತನ ಪ್ರಭೇದವು ಬ್ರಿಟನ್‌ನಲ್ಲಿ ವೇಗವಾಗಿ ಹರಡದಂತೆ ನೋಡಿಕೊಳ್ಳಲು ಬ್ರಿಟನ್ ಹರಸಾಹಸ ನಡೆಸುತ್ತಿರುವಂತೆಯೇ, ರಾಜಧಾನಿಯಿಂದ ಗುಳೇ ಹೋಗುತ್ತಿರುವವರ ವಿರುದ್ಧ ಆರೋಗ್ಯ ಕಾರ್ಯದರ್ಶಿ ಮ್ಯಾಟ್ಟ್ ಹಾನ್‌ಕಾಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್-19 ದೇಶಾದ್ಯಂತ ಹರಡುವುದನ್ನು ತಪ್ಪಿಸುವುದಕ್ಕಾಗಿ ಲಂಡನ್‌ನಿಂದ ವಲಸೆ ಹೋಗುತ್ತಿರುವ ಪ್ರವಾಸಿಗರನ್ನು ತಡೆಯಲು ಪೊಲೀಸರು ರಸ್ತೆ ತಡೆಗಳನ್ನು ನಿರ್ಮಿಸಲಿದ್ದಾರೆ ಹಾಗೂ ಪ್ರವಾಸಿ ಕುಟುಂಬಗಳನ್ನು ರೈಲುಗಳು ಹತ್ತುವುದನ್ನು ತಡೆಯಲಿದ್ದಾರೆಂದು ಅವರು ಹೇಳಿದ್ದಾರೆ.

 ರಾಜಧಾನಿಯಿಂದ ಪರಾರಿಯಾಗುತ್ತಿರುವ ಲಂಡನ್ನಿಗರು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಂಡನ್ ಹಾಗೂ ಈಶಾನ್ಯ ಇಂಗ್ಲೆಂಡ್‌ನ ನಾಗರಿಕರು ಹೊರಗೆ ಪ್ರಯಾಣಿಸಿದಲ್ಲಿ ಅವರು ಅತ್ಯಂತ ಅಪಾಯಕಾರಿಯಾದ ನೂತನ ಕೊರೋನ ವೈರಸ್ ಸೋಂಕನ್ನು ಇತರೆಡೆಗೂ ಹರಡಲಿದ್ದಾರೆಂದು ಅವರು ಎಚ್ಚರಿಕೆ ನೀಡಿದ್ದಾರೆ.

  ನೂತನ ಕೊರೋನ ವೈರಸ್ ಸೋಂಕಿನ ಹಾವಳಿ ತೀವ್ರವಾಗಿರುವ ಪ್ರದೇಶಗಳನ್ನು 4ನೇ ಸ್ತರದ ಪ್ರಾಂತಗಳೆಂದು ಗುರುತಿಸಲಾಗಿದೆ. ರಾಜಧಾನಿ ಲಂಡನ್ ಹಾಗೂ ದಕ್ಷಿಣ ಮತ್ತು ಪೂರ್ವ ಇಂಗ್ಲೆಂಡ್‌ನಲ್ಲಿರುವ 4ನೇ ಸ್ತರದ ಪ್ರಾಂತಗಳ ಜನತೆ ಎಲ್ಲಿಯೂ ತೆರಳಕೂಡದು ಹಾಗೂ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಮ್ಯಾಟ್ಟ್ ಹಾನ್‌ಕಾಕ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News