ಡೇನಿಯಲ್ ಪರ್ಲ್ ಹತ್ಯೆ ಪ್ರಕರಣ: ಅಮೆರಿಕ ಒತ್ತಡದಿಂದ ನನ್ನನ್ನು ಬಲಿಪಶು ಮಾಡಲಾಗಿದೆ
ಇಸ್ಲಾಮಾಬಾದ್, ಡಿ.20: ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯು ಅಮೆರಿಕದ ಒತ್ತಡಕ್ಕೊಳಗಾಗಿ ಬಂಧಿತನಾಗಿದ್ದು, ಆತನನ್ನು ‘ಬಲಿಪಶು’ವನ್ನಾಗಿ ಮಾಡಲಾಗಿದೆ. ಕರಾಚಿ ಮೂಲದ ಓರ್ವ ಭಯೋತ್ಪಾದಕ ಈ ಕೊಲೆ ಪ್ರಕರಣದ ನಿಜವಾದ ಸೂತ್ರಧಾರಿಯೆಂದು ಪಾಕಿಸ್ತಾನದ ನ್ಯಾಯವಾದಿಯೊಬ್ಬರು ಹೇಳಿದ್ದಾರೆ.
ಡೇನಿಯಲ್ ಪರ್ಲ್ ಅವರ ಹೆತ್ತವರ ಪರ ವಕೀಲರು ಪಾಕಿಸ್ತಾನದ ಸುಪ್ರೀಂಕೋರ್ಟ್ ಗೆ ಪ್ರಮುಖ ಆರೋಪಿ ಅಹ್ಮದ್ ಉಮರ್ ಸಯೀದ್ ಶೇಖ್ ಬರೆದಿದ್ದನೆಂದು ಹೇಳಲಾದ ಹಸ್ತ ಲಿಖಿತ ಪತ್ರವನ್ನು ಸಲ್ಲಿಸಿದ್ದಾರೆ.
ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯ ದಕ್ಷಿಣ ಏಶ್ಯಾ ಬ್ಯುರೋದ ವರಿಷ್ಠರಾಗಿದ್ದ 38 ವರ್ಷ ವಯಸ್ಸಿನ ಡೇನಿಯಲ್ ಪರ್ಲ್ ಅವರು 2002ರಲ್ಲಿ ಪಾಕ್‌ನಲ್ಲಿ ಹತ್ಯೆಗೀಡಾಗಿದ್ದರು. ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಹಾಗೂ ಅಲ್‌ಖಾಯಿದಾ ನಡುವೆ ನಂಟಿರುವ ಕುರಿತ ತನಿಖಾ ವರದಿಗಾಗಿ ಪಾಕಿಸ್ತಾನದಲ್ಲಿದ್ದ ಅವರನ್ನು ಅಪಹರಿಸಿ, ಆನಂತರ ತಲೆಕಡಿದು ಹತ್ಯೆ ಮಾಡಲಾಗಿತ್ತು.
ಡೇನಿಯಲ್ ಪರ್ಲ್ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬ್ರಿಟಿಶ್ ಸಂಜಾತ ಅಲ್‌ಖಾಯಿದಾ ನಾಯಕ ಅಹ್ಮದ್ ಉಮರ್ ಸಯೀದ್ ಶೇಖ್ ಹಾಗೂ ಅವರ ಮೂವರು ಸಹಚರರನ್ನು ದೋಷಿಗಳೆಂದು ಪರಿಗಣಿಸಿ, ಶಿಕ್ಷೆ ವಿಧಿಸಲಾಗಿತ್ತು.
ಆದರೆ ಈ ವರ್ಷದ ಎಪ್ರಿಲ್‌ನಲ್ಲಿ ಸಿಂಧ್ ಹೈಕೋರ್ಟ್ ಈ ಆರೋಪಿಗಳಿಗೆ ಕ್ಷಮಾದಾನ ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು ಅದರ ವಿಚಾರಣೆ ನಡೆಯುತ್ತಿದೆ.
ಪರ್ಲ್ ಹೆತ್ತವರ ಪರ ನ್ಯಾಯವಾದಿ, ಫೈಸಲ್ ಸಿದ್ದೀಕಿ ಇಂದು ಪಾಕ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಹಸ್ತಲಿಖಿತ ಪತ್ರದಲ್ಲಿ ಪ್ರಕರಣದ ನಿಜವಾದ ಅಪರಾಧಿ ಕರಾಚಿ ಮೂಲದ ಉಗ್ರಗಾಮಿ ಅತಾವುರ್ರಹ್ಮಾನ್ ಎಂದು ತಿಳಿಸಿದ್ದು, ನ್ಯಾಯಾಲಯವು ಇದನ್ನು ಪರಿಗಣಿಸಬೇಕೆಂದು ಕೋರಿದ್ದಾರೆ.
ನ್ಯಾಯಮೂರ್ತಿ ಅಲಂ ನೇತೃತ್ವದ ತ್ರಿಸದಸ್ಯ ವಿಶೇಷ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಮುಂದಿನ ಆಲಿಕೆಯನ್ನು ಜನವರಿ 4ರಂದು ನಡೆಸಲಿದೆ.
ಪ್ರಕರಣಕ್ಕೆ ಸಂಬಂಧಿಸಿ ಅತಾವುರ್ರಹ್ಮಾನ್ ತಲೆಗೆ 10 ಲಕ್ಷ ರೂ. ಘೋಷಿಸಲಾಗಿದ್ದರೂ, ಆತನನ್ನು ಈವರೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿಲ್ಲ ಮತ್ತು ಆತನನ್ನು ಪಾಕ್ ಗಡಿಭದ್ರತಾ ಪಡೆಗಳ ಬಳಿ 5 ವರ್ಷ ಕಾಲ ರಹಸ್ಯವಾಗಿ ಕಸ್ಟಡಿಯಲ್ಲಿರಿಸಲಾಗಿತ್ತು. ಹಾಗೂ ಆತನ ವಿರುದ್ಧ ಮಾದಕದ್ರವ್ಯ ಹೊಂದಿದ್ದನೆಂಬ ಸುಳ್ಳು ಆರೋಪವನ್ನು ಮಾತ್ರ ಹೊರಿಸಲಾಗಿತ್ತು. ಅತಾವುರ್ರಹ್ಮಾನ್ ಜೈಲಿನಲ್ಲಿ ಬಿಡುಗಡೆಗೊಂಡ ಬಳಿಕ ಆತ ಕರಾಚಿ ಸೇರಿದಂತೆ ಹಲವೆಡೆ ವಿಧ್ವಂಸಕ ಕೃತ್ಯಗಳ ನಡೆಸಿದ್ದನೆಂದು ಹೇಳಲಾಗುತ್ತಿದೆ.