ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದ ಸೌದಿ ಅರೇಬಿಯಾ

Update: 2020-12-21 06:10 GMT

ರಿಯಾದ್: ಬ್ರಿಟನ್ ದೇಶದಲ್ಲಿ ಕೊರೋನವೈರಸ್‍ನ ಹೊಸ ಪ್ರಭೇದ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ರವಿವಾರ ಎಲ್ಲಾ  ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆಯಲ್ಲಿದೆ ಕನಿಷ್ಠ ಒಂದು ವಾರದ ತನಕ ರಸ್ತೆ ಹಾಗೂ ಸಮುದ್ರ ಮೂಲಕ ದೇಶಕ್ಕೆ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

ಕೆಲವೊಂದು ತುರ್ತು ಪ್ರಕರಣಗಳನ್ನು ಹೊರತು ಪಡಿಸಿ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಒಂದು ವಾರ ಕಾಲ ತಾತ್ಕಾಲಿಕ ರದ್ದುಪಡಿಸಲಾಗಿದ್ದು, ಈ ನಿಷೇಧ ಇನ್ನೊಂದು ವಾರಕ್ಕೆ ವಿಸ್ತರಣೆಗೊಳ್ಳಬಹುದು ಎಂದು ಅಧಿಕೃತ ಸೌದಿ ಪ್ರೆಸ್ ಏಜನ್ಸಿ ಹೇಳಿದೆ. ಆದರೆ ಸದ್ಯ ಸೌದಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನಗಳಿಗೆ ಈ  ಆದೇಶ ಅನ್ವಯಿಸುವುದಿಲ್ಲ, ಅವುಗಳಿಗೆ ದೇಶ ಬಿಟ್ಟು ತೆರಳಲು ಅನುಮತಿಸಲಾಗುವುದು ಎಂದು  ಏಜನ್ಸಿ ಹೇಳಿದೆ.

ಕೊರೋನವೈರಸ್‍ನ ಹೊಸ ಪ್ರಭೇದ ತೀವ್ರವಾಗಿ ಹರಡುತ್ತಿದೆ ಎಂದು ಇಂಗ್ಲೆಂಡ್ ಸರಕಾರ ರವಿವಾರ ಎಚ್ಚರಿಕೆ ನೀಡಿದ ನಂತರ ಹಲವು ಯುರೋಪಿಯನ್ ದೇಶಗಳು ಬ್ರಿಟನ್‍ಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ.

ಯುರೋಪ್‍ನಿಂದ ಅಥವಾ ಬೇರೆ ಯಾವುದೇ ದೇಶದಿಂದ ಸೌದಿ ಅರೇಬಿಯಾಗೆ ಡಿಸೆಂಬರ್ 8 ಹಾಗೂ ನಂತರದ ದಿನಗಳಲ್ಲಿ ಆಗಮಿಸಿದವರು ಎರಡು ವಾರಗಳ ಕಾಲ ಸ್ವಯಂ ಐಸೊಲೇಶನ್‍ನಲ್ಲಿರಬೇಕಿದೆ ಹಾಗೂ ಕೋವಿಡ್ ಪರೀಕ್ಷೆಗೊಳಗಾಗಬೇಕಿದೆ ಎಂದು ಏಜನ್ಸಿ ಹೇಳಿದೆ.

ಕುವೈತ್ ಕೂಡ ಬ್ರಿಟನ್‍ನಿಂದ ವಿಮಾನಗಳಿಗೆ ರವಿವಾರ ನಿರ್ಬಂಧ ಹೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News