ಕೇರಳ: ಶಿಗೆಲ್ಲಾ ಸೋಂಕಿಗೆ ಬಾಲಕ ಬಲಿ; ಹಲವರು ಆಸ್ಪತ್ರೆಗೆ ದಾಖಲು

Update: 2020-12-21 12:37 GMT
ಸಾಂದರ್ಭಿಕ ಚಿತ್ರ

ಕೊಝಿಕ್ಕೋಡ್: ಕೇರಳದ ಕೊಝಿಕ್ಕೋಡ್‍ನಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಸೋಂಕಿನಿಂದ 11 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು ಈ ಬ್ಯಾಕ್ಟೀರಿಯಾದಿಂದ ಕರುಳಿನ ಸೋಂಕಿಗೊಳಗಾಗಿರುವ ಹಲವಾರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸೋಂಕಿನಿಂದ ಬಳಲುವವರು ವಾಂತಿ ಬೇಧಿ, ಹೊಟ್ಟೆ ನೋವು, ಜ್ವರ ಮತ್ತು ಡೀಹೈಡ್ರೇಶನ್ ತೊಂದರೆಗೊಳಗಾಗುತ್ತಿದ್ದು, ಹತ್ತು ವರ್ಷದ ಕೆಳಗಿನ ವಯಸ್ಸಿನ ಮಕ್ಕಳು ಈ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ.

ಕೊಝಿಕ್ಕೋಡ್‍ನಲ್ಲಿ ಇಲ್ಲಿಯ ತನಕ ವಾಂತಿಬೇಧಿಯ 26 ಪ್ರಕರಣಗಳು ವರದಿಯಾಗಿದ್ದು ಇವುಗಳ ಪೈಕಿ ಆರು ಮಂದಿ ಶಿಂಗೆಲ್ಲಾ ಸೋಂಕಿಗೆ ಒಳಗಾಗಿದ್ದಾರೆ.

ಕಲುಷಿತ ನೀರು ಸೇವನೆಯಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ. ಈ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳು ಕುದಿಸಿದ ನೀರನ್ನೇ ಕುಡಿಯಬೇಕಿದ್ದು ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ ಎಂದು ರಾಜ್ಯದ ಶಿಕ್ಷಣ ಸಚಿವೆ ಕೆ. ಕೆ. ಶೈಲಜಾ ಹೇಳಿದ್ದಾರೆ.

ಸಮಸ್ಯೆ ಕಾಣಿಸಿಕೊಂಡಿರುವ ಸ್ಥಳದಲ್ಲಿನ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಆಹಾರ ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹೋಟೆಲುಗಳಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ ಹಾಗೂ ಬಾವಿ ನೀರುಗಳಿಗೆ ಕ್ಲೋರೀನ್ ಸಿಂಪಡಿಸುವ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಸಚಿವೆ ತಿಳಿಸಿದ್ದಾರೆ.

ಹಳಸಿದ ಆಹಾರ ಹಾಗೂ ಸೋಂಕಿತ ವ್ಯಕ್ತಿ ಬಳಸಿದ ಶೌಚಾಲಯ ಬಳಕೆಯಿಂದ ಕೂಡ ಈ ಸೋಂಕು ಹರಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News