ರೂಪಾಂತರಿತ ಕೋವಿಡ್-19 ಭೀತಿಗೆ ತತ್ತರಿಸಿದ ಶೇರು ಮಾರುಕಟ್ಟೆ: 1,407 ಅಂಶ ಕುಸಿದ ಸೆನ್ಸೆಕ್ಸ್
ಹೊಸದಿಲ್ಲಿ,ಡಿ.21: ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಕೋವಿಡ್-19 ವೈರಾಣು ಸೋಮವಾರ ಭಾರತೀಯ ಶೇರು ಮಾರುಕಟ್ಟೆಗಳು ತತ್ತರಿಸುವಂತೆ ಮಾಡಿತ್ತು. ಬಿಎಸ್‌ಇ ಸೂಚ್ಯಂಕ 1406.73(ಶೇ.3) ಅಂಶಗಳಷ್ಟು ಮಹಾಪತನವನ್ನು ಕಂಡು 45553.96ರಲ್ಲಿ ಮುಕ್ತಾಯಗೊಂಡಿದ್ದರೆ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 432.10 (ಶೇ.3.14) ಅಂಶಗಳಷ್ಟು ಕುಸಿದು 13,328.40ಕ್ಕೆ ದಿನದಾಟ ಮುಗಿಸಿತು.
ಒಎನ್‌ಜಿಸಿ,ಇಂಡಸ್‌ಇಂಡ್ ಬ್ಯಾಂಕ್,ಮಹೀಂದ್ರ ಆ್ಯಂಡ್ ಮಹೀಂದ್ರ,ಎಸ್‌ಬಿಐ,ಎನ್‌ಟಿಪಿಸಿ,ಐಟಿಸಿ,ಎಕ್ಸಿಸ್ ಬ್ಯಾಂಕ್ ಮತ್ತು ಪವರ್‌ಗ್ರಿಡ್‌ನಂತಹ ಶೇರುಗಳು ಶೇ.9.15ರಷ್ಟು ಕುಸಿತವನ್ನು ದಾಖಲಿಸಿವೆ. ನಿಫ್ಟಿಯ ಎಲ್ಲ ಉಪ ಸೂಚ್ಯಂಕಗಳು ನಷ್ಟವನ್ನು ಅನುಭವಿಸಿದ್ದು,ನಿಫ್ಟಿ ಪಿಎಸ್‌ಯು,ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಮೀಡಿಯಾ ಶೇ.6.90ರಷ್ಟು ಕುಸಿತವನ್ನು ಕಂಡಿವೆ.
ಬ್ರಿಟನ್‌ನಲ್ಲಿ ಪತ್ತೆಯಾಗಿರುವ ನೂತನ ಮತ್ತು ಹೆಚ್ಚು ವೇಗವಾಗಿ ಹರಡುವ ಕೋರೋನ ವೈರಸ್ ಎಲ್ಲೆಡೆ ತಳಮಳವನ್ನು ಸೃಷ್ಟಿಸಿದೆ. ಅಮೆರಿಕದಲ್ಲಿ ಹೊಸ ಸೋಂಕು ಪ್ರಕರಣಗಳಲ್ಲಿ ಹೆಚ್ಚಳ ಮತ್ತು ಕಳಪೆ ಆರ್ಥಿಕ ದತ್ತಾಂಶಗಳೂ ಶೇರು ಮಾರುಕಟ್ಟೆ ಕುಸಿತದಲ್ಲಿ ತಮ್ಮ ಪಾಲು ಸಲ್ಲಿಸಿವೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ವಿ.ಕೆ.ವಿಜಯಕುಮಾರ್ ತಿಳಿಸಿದರು.