ನನಗೆ ವಿಷಪ್ರಾಶನ ಮಾಡಿರುವುದನ್ನು ಭದ್ರತಾ ಏಜೆಂಟ್ ಒಪ್ಪಿಕೊಂಡಿದ್ದಾನೆ: ರಶ್ಯ ಪ್ರತಿಪಕ್ಷ ನಾಯಕ

Update: 2020-12-22 18:00 GMT

ಮಾಸ್ಕೋ (ರಶ್ಯ), ಡಿ. 22: ನನ್ನನ್ನು ಕೊಲ್ಲುವುದಕ್ಕಾಗಿ ರಶ್ಯದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ನನ್ನ ಒಳ ಉಡುಪಿನಲ್ಲಿ ವಿಷವನ್ನು ಇಟ್ಟಿತ್ತು ಎನ್ನುವುದನ್ನು ದೇಶದ ಭದ್ರತಾ ಏಜೆಂಟ್ ಒಬ್ಬ ಒಪ್ಪಿಕೊಂಡಿದ್ದಾನೆ ಎಂದು ದೇಶದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ಸೋಮವಾರ ಹೇಳಿದ್ದಾರೆ.

ಆಂತರಿಕ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿಯಲ್ಲಿ ರಾಸಾಯನಿಕ ಪರಿಣತನಾಗಿರುವ ಕಾನ್‌ಸ್ಟಾಂಟಿನ್ ಕುದ್ರಿವತ್ಸೆವ್ ಎಂಬವರಿಗೆ ನಾನು ಫೋನ್ ಕರೆ ಮಾಡಿ ವಿಷಯ ತಿಳಿದುಕೊಂಡಿದ್ದೇನೆ ಎಂಬುದಾಗಿ ನವಾಲ್ನಿ ಬ್ಲಾಗ್ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.

‘‘ನಾನು ಫೋನ್ ಮಾಡಿ ನನ್ನನ್ನು ಭದ್ರತಾ ಕೌನ್ಸಿಲ್ ಮುಖ್ಯಸ್ಥ ನಿಕೊಲೈ ಪಟ್ರುಶೆವ್ ಎಂಬುದಾಗಿ ಪರಿಚಯಿಸಿಕೊಂಡೆ ಹಾಗೂ ವಿಷಪ್ರಾಶನಕ್ಕೆ ಸಂಬಂಧಿಸಿದ ಅಧಿಕೃತ ವರದಿಯೊಂದಕ್ಕೆ ನನಗೆ ಮಾಹಿತಿ ಬೇಕಾಗಿದೆ ಎಂದು ಹೇಳಿದೆ. ನನಗೆ ಮಾಹಿತಿ ಲಭಿಸಿದೆ’’ ಎಂದು ಅವರು ತಿಳಿಸಿದ್ದಾರೆ. ಈ ಆರೋಪವನ್ನು ಬಳಿಕ ಎಫ್‌ಎಸ್‌ಬಿ ನಿರಾಕರಿಸಿದೆ.

ಫೋನ್ ಕರೆಯ ಆಡಿಯೊ ರೆಕಾರ್ಡಿಂಗ್ ಮತ್ತು ಸಂಭಾಷಣೆಯ ಲಿಖಿತ ರೂಪದ ಪ್ರತಿಯನ್ನು ನವಾಲ್ನಿ ಬಿಡುಗಡೆ ಮಾಡಿದ್ದಾರೆ. ತಾನು ಫೋನ್‌ನಲ್ಲಿ ಮಾತನಾಡುತ್ತಿರುವ ವೀಡಿಯೊವೊಂದನ್ನೂ ಅವರು ಬಿಡುಗಡೆ ಮಾಡಿದ್ದಾರೆ.

ಐರೋಪ್ಯ ರಾಯಭಾರಿಗಳನ್ನು ಕರೆಸಿಕೊಂಡ ರಶ್ಯ

ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ವಿಷಪ್ರಾಶನವಾಗಿರುವುದಕ್ಕೆ ಸಂಬಂಧಿಸಿ ಐರೋಪ್ಯ ದೇಶಗಳು ನೀಡಿರುವ ಪ್ರತಿಕ್ರಿಯೆ ಬಗ್ಗೆ ಅತೃಪ್ತಿ ಸೂಚಿಸುವುದಕ್ಕಾಗಿ ಆ ದೇಶದ ರಾಯಭಾರಿಗಳನ್ನು ರಶ್ಯದ ವಿದೇಶ ಸಚಿವಾಲಯ ಮಂಗಳವಾರ ಕರೆಸಿಕೊಂಡಿದೆ.

ಜರ್ಮನಿ, ಫ್ರಾನ್ಸ್ ಮತ್ತು ಸ್ವೀಡನ್‌ಗಳ ಉನ್ನತ ರಾಜತಾಂತ್ರಿಕರು ಮಂಗಳವಾರ ಬೆಳಗ್ಗೆ ರಾಜಧಾನಿ ಮಾಸ್ಕೋದಲ್ಲಿರುವ ವಿದೇಶ ಸಚಿವಾಲಯಕ್ಕೆ ಆಗಮಿಸಿದರು ಎಂದು ರಶ್ಯದ ಸರಕಾರಿ ಸುದ್ದಿ ಸಂಸ್ಥೆ ಆರ್‌ಐಎ ವರದಿ ಮಾಡಿದೆ.

ಸೋವಿಯತ್ ಕಾಲದ ನರ್ವ್ ಏಜೆಂಟ್ ರಾಸಾಯನಿಕವನ್ನು ನವಾಲ್ನಿಗೆ ಉಣಿಸಲಾಗಿದೆ ಎಂಬ ವರದಿಯನ್ನು ಈ ಮೂರು ದೇಶಗಳ ಪ್ರಯೋಗಾಲಯಗಳು ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News