ನಿಮಗೆ ಚರ್ಮದ ಅಲರ್ಜಿ ಇದೆಯೇ ? ಇಲ್ಲಿದೆ ಸುಲಭ ಪರಿಹಾರ

Update: 2020-12-23 13:47 GMT

ನೀವು ಯಾವುದೇ ಆಹಾರಕ್ಕೆ ಅಥವಾ ವಸ್ತುವಿಗೆ ಅಲರ್ಜಿಯನ್ನು ಹೊಂದಿದ್ದೀರಾ? ಅದರಿಂದ ನಿಮ್ಮ ಚರ್ಮದಲ್ಲಿ ದದ್ದುಗಳು ಅಥವಾ ಅಲರ್ಜಿ ಉಂಟಾಗುತ್ತಿದೆಯೇ? ಹಾಗಿದ್ದರೆ ನೀವು ಅವುಗಳಿಂದ ದೂರವಿರಬೇಕು ಮಾತ್ರವಲ್ಲ,ಅಲರ್ಜಿ ಪ್ರತಿವರ್ತನೆ ಯನ್ನು ತಡೆಯಲು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಅಲರ್ಜಿಕಾರಕ ನಿಮ್ಮ ಚರ್ಮದ ಸಂಪರ್ಕಕ್ಕೆ ಬಂದಾಗ ನಿಮ್ಮ ರೋಗ ನಿರೋಧಕ ವ್ಯವಸ್ಥೆಯು ಅದನ್ನು ಪ್ರತಿಬಂಧಿಸಲು ಆ್ಯಂಟಿಬಾಡಿಗಳನ್ನು ಬಿಡುಗಡೆಗೊಳಿಸುವುದು ಹೆಚ್ಚಾಗಿ ಇದಕ್ಕೆ ಕಾರಣವಾಗಿದೆ. ಇದು ಚರ್ಮದಲ್ಲಿ ದದ್ದುಗಳನ್ನುಂಟು ಮಾಡುತ್ತದೆ ಮತ್ತು ಇವು ಸೌಮ್ಯದಿಂದ ತೀವ್ರ ಸ್ವರೂಪದ್ದಾಗಿರುತ್ತವೆ. ದೀರ್ಘಕಾಲಿಕ ಅಲರ್ಜಿಗಳನ್ನು ಔಷಧಿಗಳಿಂದ ಮಾತ್ರ ಗುಣಪಡಿಸಬಹುದು,ಆದರೆ ಸೌಮ್ಯ ಸ್ವರೂಪದ ಅಲರ್ಜಿಗಳನ್ನು ಮನೆಮದ್ದುಗಳ ಮೂಲಕ ಶಮನಿಸಬಹುದು. ಇಂತಹ ಕೆಲವು ಮನೆಮದ್ದುಗಳ ಕುರಿತು ಮಾಹಿತಿಗಳಿಲ್ಲಿವೆ.....

* ಅಲೊವೆರಾ ಜೆಲ್

ಅಲೊವೆರಾದ ಶಮನಿಸುವ ಮತ್ತು ಚಿಕಿತ್ಸಾ ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಅಲರ್ಜಿಯಿಂದ ಚರ್ಮದಲ್ಲಿ ತೀವ್ರ ತುರಿಕೆಯಾಗುತ್ತಿದ್ದರೆ ಇದು ಅತ್ಯುತ್ತಮ ಪರಿಹಾರವಾಗಿದೆ. ತನ್ನ ಉರಿಯೂತ ನಿರೋಧಕ ಗುಣಗಳಿಂದ ಅದು ಕೆರಳುವಿಕೆ,ತುರಿಕೆ ಮತ್ತು ಉರಿಯೂತಗಳಿಂದ ನಿಮಿಷಗಳಲ್ಲಿ ಮುಕ್ತಿ ನೀಡುತ್ತದೆ. ಇದಕ್ಕಾಗಿ ಸ್ವಲ್ಪ ಅಲೊವೆರಾ ಜೆಲ್‌ನ್ನು ಪೀಡಿತ ಭಾಗಕ್ಕೆ ಲೇಪಿಸಿ 30-40 ನಿಮಿಷಗಳ ಕಾಲ ಅಥವಾ ನಿಮಗೆ ನಿರಾಳವೆನಿಸುವವರೆಗೆ ಹಾಗೆಯೇ ಬಿಡಿ.

* ಅಡಿಗೆ ಸೋಡಾ

ಚರ್ಮದ ಅಲರ್ಜಿಗಳಿಗಾಗಿ ನೀವು ಅಡಿಗೆ ಸೋಡಾವನ್ನು ಬಳಸಬಹುದು,ಆದರೆ ಅದರ ಅತಿಯಾದ ಬಳಕೆ ಸಮಸ್ಯೆಯನ್ನು ತೀವ್ರಗೊಳಿಸುವುದರಿಂದ ಜಾಗ್ರತೆ ವಹಿಸಬೇಕು. ಒಂದು ಟೀ ಚಮಚ ಅಡಿಗೆ ಸೋಡಾಕ್ಕೆ ಸ್ವಲ್ಪ ನೀರನ್ನು ಸೇರಿಸಿ,ಈ ಪೇಸ್ಟ್‌ನ್ನು ಪೀಡಿತ ಭಾಗಕ್ಕೆ ಲೇಪಿಸಿ. 10 ನಿಮಿಷಗಳ ಬಳಿಕ ಚೆನ್ನಾಗಿ ತೊಳೆಯಿರಿ. ದಿನಕ್ಕೆ 3-4 ಬಾರಿ ಇದನ್ನು ಪುನರಾವರ್ತಿಸಿ.

* ತೆಂಗಿನೆಣ್ಣೆ

ಚರ್ಮದ ಆರೋಗ್ಯಕ್ಕೆ ಬಹುಶಃ ತೆಂಗಿನೆಣ್ಣೆ ಅತ್ಯುತ್ತಮವಾಗಿದೆ. ನಿಮಗೆ ಅಲರ್ಜಿಯುಂಟಾದಾಗ ಅದರ ಶಮನಕಾರಿ ಮತ್ತು ಆರ್ದ್ರಗೊಳಿಸುವ ಗುಣಗಳೂ ನಿಮಗೆ ನೆರವಾಗುತ್ತವೆ. ಅದು ತುರಿಕೆ ಮತ್ತು ಚರ್ಮ ಕೆಂಪಗಾಗಿರುವುದನ್ನೂ ನಿವಾರಿಸುತ್ತದೆ. ಸ್ವಲ್ಪ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಪೀಡಿತ ಚರ್ಮಕ್ಕೆ ಸವರಿಕೊಂಡು ಒಂದು ಗಂಟೆ ಹಾಗೆಯೇ ಬಿಡಿ. ನಿಮ್ಮ ಚರ್ಮವು ಕೆಂಪಗಾಗಿ ತುರಿಕೆಯೊಂದಿಗೆ ಉರಿಯುತ್ತಿದ್ದರೆ ತಣ್ಣನೆಯ ತೆಂಗಿನೆಣ್ಣೆಯನ್ನು ಬಳಸಿ. 3-4 ಗಂಟೆಗಳ ಬಳಿಕ ಇದನ್ನು ಪುನರಾವರ್ತಿಸಿ.

* ಆ್ಯಪಲ್ ಸಿಡರ್ ವಿನೆಗರ್

ಇದರಲ್ಲಿರುವ ಆ್ಯಸಿಟಿಕ್ ಆಮ್ಲವು ಸೂಕ್ಷ್ಮಾಣುಜೀವಿ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು, ಅಲರ್ಜಿಯಿಂದ ಪೀಡಿತ ಚರ್ಮವನ್ನು ಶಮನಿಸುತ್ತದೆ. ಆದರೆ ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಇದರಿಂದ ದೂರವಿರಬೇಕು. ಒಂದು ಕಪ್ ಬಿಸಿನೀರಿಗೆ ಒಂದು ಟೀ ಚಮಚ ಆ್ಯಪಲ್ ಸಿಡರ್ ವಿನೆಗರ್ ಸೇರಿಸಿ ಹತ್ತಿಯಿಂದ ಚರ್ಮಕ್ಕೆ ಲೇಪಿಸಿ ಮತ್ತು ಒಣಗಿದ ಬಳಿಕ ತೊಳೆದುಕೊಳ್ಳಿ. ಇದನ್ನು ದಿನಕ್ಕೆರಡು ಬಾರಿ ಮಾಡಿ.

* ಸಾರಭೂತ ತೈಲಗಳು

ಪೆಪ್ಪರ್‌ಮಿಂಟ್ ಆಯಿಲ್,ಟೀ ಟ್ರೀ ಆಯಿಲ್‌ನಂತಹ ಎಸೆನ್ಶಿಯಲ್ ಆಯಿಲ್ ಅಥವಾ ಸಾರಭೂತ ತೈಲವನ್ನು ಚರ್ಮದ ಅಲರ್ಜಿ ನಿವಾರಣೆಗೆ ಬಳಸಬಹುದು. ಒಂದು ಟೀ ಚಮಚ ತೆಂಗಿನೆಣ್ಣೆಗೆ ಕೆಲವು ಹನಿಗಳಷ್ಟು ಸಾರಭೂತ ತೈಲವನ್ನು ಸೇರಿಸಿ ಪೀಡಿತ ಜಾಗಕ್ಕೆ ಹಚ್ಚಿಕೊಳ್ಳ್ಳಿ ಮತ್ತು ಒಂದು ಗಂಟೆಯ ಬಳಿಕ ತೊಳೆದುಕೊಳ್ಳಿ. ಇದನ್ನು ದಿನಕ್ಕೆ 2-3 ಬಾರಿ ಮಾಡಬಹುದು.

ಸಾರಭೂತ ತೈಲಗಳು ಪ್ರಬಲ ತೈಲಗಳಾಗಿರುವುದರಿಂದ ಬಳಸುವ ಮೊದಲು ಅದನ್ನು ಸೂಕ್ತವಾಗಿ ದುರ್ಬಲಗೊಳಿಸಿಕೊಳ್ಳಬೇಕು. ಈ ತೈಲವನ್ನು ಚರ್ಮಕ್ಕೆ ಹಚ್ಚಿಕೊಂಡಾಗ ಯಾವುದೇ ಪ್ರತಿಕೂಲ ಪರಿಣಾಮವುಂಟಾದರೆ ತಕ್ಷಣ ಅದನ್ನು ಒರೆಸಿ ತೆಗೆಯಬೇಕು.

* ತುಳಸಿ ಎಲೆಗಳು

ತುಳಸಿ ಎಲೆಗಳಲ್ಲಿರುವ ಉರಿಯೂತ ನಿರೋಧಕ, ಸೂಕ್ಷ್ಮಾಣುಜೀವಿ ನಿರೋಧಕ ಮತ್ತು ಅಲರ್ಜಿ ನಿರೋಧಕ ಗುಣಗಳು ಚರ್ಮದ ಅಲರ್ಜಿಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತವೆ. ಕೆಲವು ತಾಜಾ ತುಳಸಿ ಎಲೆಗಳನ್ನು ತೆಗೆದುಕೊಂಡು ತೊಳೆದು ಅರೆದುಕೊಳ್ಳಿ, ಈ ಪೇಸ್ಟ್‌ನ್ನು ಪೀಡಿತ ಚರ್ಮಕ್ಕೆ ಲೇಪಿಸಿ 30-40 ನಿಮಿಷಗಳ ಹಾಗೆಯೇ ಬಿಡಿ.

* ಪೆಟ್ರೋಲಿಯಂ ಜೆಲ್ಲಿ

ಪೆಟ್ರೋಲಿಯಂ ಜೆಲ್ಲಿಯನ್ನು ್ನಮುಖ್ಯವಾಗಿ ಚರ್ಮವನ್ನು ಆರ್ದ್ರಗೊಳಿಸಲು ಬಳಸಲಾಗುತ್ತದೆ, ಆದರೆ ಅದನ್ನು ಚರ್ಮದ ಅಲರ್ಜಿಗಳನ್ನು ನಿವಾರಿಸಲೂ ಬಳಸಬಹುದು. ಅದು ಸೋಂಕು ಹರಡುವುದನ್ನು ತಡೆಯುತ್ತದೆ. ಪೀಡಿತ ಚರ್ಮಕ್ಕೆ ಜೆಲ್ಲಿಯನ್ನು ಲೇಪಿಸಿಕೊಳ್ಳಿ. ಒಂದೆರಡು ಗಂಟೆಗಳ ಬಳಿಕ ಬೇಕೆನಿಸಿದರೆ ಮತ್ತೊಮ್ಮೆ ಲೇಪಿಸಿಕೊಳ್ಳಿ.

* ಬೇವು

ಬೇವು ಉರಿಯೂತ ನಿರೋಧಕ,ಸೂಕ್ಷ್ಮಾಣುಜೀವಿ ನಿರೋಧಕ ಮತ್ತು ಅಲರ್ಜಿ ನಿರೋಧಕ ಗುಣಗಳನ್ನು ಸಮೃದ್ಧವಾಗಿ ಹೊಂದಿದೆ. ಇದು ಅಲರ್ಜಿಕಾರಕಗಳಿಂದ ಚರ್ಮವು ಕೆಂಪಗಾಗಿರುವುದನ್ನು, ತುರಿಕೆ ಮತ್ತು ಉರಿಯೂತಗಳನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ. ಬೇವಿನಲ್ಲಿರುವ ಮುಖ್ಯವಾದ ಘಟಕ ನಿಂಬಿಡಿನ್ ನೈಸರ್ಗಿಕ ಅಲರ್ಜಿಯನ್ನು ಹೋಗಲಾಡಿಸುವ ಔಷಧಿಯಾಗಿದ್ದು, ಅಲರ್ಜಿಯ ಲಕ್ಷಣಗಳನ್ನು ಶೀಘ್ರ ಶಮನಿಸುತ್ತದೆ. ಕೆಲವು ತಾಜಾ ಬೇವಿನ ಎಲೆಗಳನ್ನು ಅರೆದು ಈ ಪೇಸ್ಟನ್ನು ಪೀಡಿತ ಚರ್ಮಕ್ಕೆ ಹಚ್ಚಿಕೊಳ್ಳಿ. ಬೇವಿನ ಹುಡಿಗೆ ಸ್ವಲ್ಪ ನೀರು ಬೆರೆಸಿಕೊಂಡು ಸಹ ಪೇಸ್ಟ್ ತಯಾರಿಸಬಹುದು. ಚರ್ಮಕ್ಕೆ ಲೇಪಿಸಿದ ಪೇಸ್ಟ್ ಒಣಗಿದ ಬಳಿಕ ತೊಳೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News