×
Ad

ಕೊರೋನ ಸೋಂಕು: ಮಲಯಾಳಂ ಕವಯಿತ್ರಿ ಸುಗತ ಕುಮಾರಿ ನಿಧನ

Update: 2020-12-23 20:15 IST

ತಿರುವನಂತಪುರಂ, ಡಿ.23 : ಕೊರೋನ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಮಲಯಾಳಂ ಕವಯಿತ್ರಿ, ಪರಿಸರವಾದಿ ಹಾಗೂ ಮಹಿಳಾ ಕಾರ್ಯಕರ್ತೆ ಸುಗತ ಕುಮಾರಿ ಬುಧವಾರ ನಿಧನರಾಗಿದ್ದಾರೆ.

ಸುಗತ ಟೀಚರ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುತ್ತಿದ್ದ 86 ವರ್ಷದ ಸುಗತ ಕುಮಾರಿ ಇತ್ತೀಚಿನ ದಿನಗಳಲ್ಲಿ ವಯೋ ಸಹಜ ಅಸ್ವಸ್ಥತೆಯಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಡಿಸೆಂಬರ್ 21ರಂದು ಕೊರೋನ ಸೋಂಕು ದೃಢಪಟ್ಟ ಬಳಿಕ ಅವರನ್ನು ತಿರುವನಂತಪುರಂನ ಸರಕಾರಿ ಆಸ್ಪತ್ರೆಯ ತೀವ್ರನಿಗಾ ಘಟಕಕ್ಕೆ ದಾಖಲಿಸಲಾಗಿದ್ದು ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಸಹಾನುಭೂತಿ ಮತ್ತು ತಾತ್ವಿಕ ಅನ್ವೇಷಣೆಯಿಂದ ತುಂಬಿರುವ ವಿಶಿಷ್ಟ ಕವನಗಳಿಗಾಗಿ ಸುಗತ ಕುಮಾರಿ ಪ್ರಸಿದ್ಧಿ ಪಡೆದಿದ್ದು ಮಹಿಳೆಯರ ವಿರುದ್ಧ ನಡೆಯುವ ದಬ್ಬಾಳಿಕೆ ಮತ್ತು ಪ್ರಕೃತಿಯ ವಿರುದ್ಧ ನಡೆಯುವ ವಿವೇಚನಾರಹಿತ ಶೋಷಣೆಯ ವಿರುದ್ಧ ತಮ್ಮ ಕವನದ ಮೂಲಕ ಪ್ರತಿಭಟಿಸುತ್ತಾ ಬಂದಿದ್ದರು. ಪಶ್ಚಿಮ ಘಟ್ಟದ ಕಣಿವೆಯಲ್ಲಿ ಜಲವಿದ್ಯುತ್ ಯೋಜನೆ ಆರಂಭಿಸುವ ಯೋಜನೆಯನ್ನು ವಿರೋಧಿಸಿ ನಡೆದ ಅಭಿಯಾನ, ಅರಣ್‌ಮುಲದಲ್ಲಿ ವಿಮಾನನಿಲ್ದಾಣ ನಿರ್ಮಿಸುವ ಯೋಜನೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ಸಹಿತ ಪರಿಸರ ರಕ್ಷಣೆಯ ಉದ್ದೇಶದ ಹಲವು ಅಭಿಯಾನಗಳ ನೇತೃತ್ವ ವಹಿಸಿದ್ದರು. ಸುಗತ ಕುಮಾರಿ ನಿಧನಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News