ಕೋವಿಡ್ ಚಿಕಿತ್ಸೆಗೆ ಡೆಂಗ್ ಔಷಧಿಯ ತುರ್ತು ಬಳಕೆಗೆ ಅನುಮತಿ ಕೋರಿದ್ದ ಸನ್ ಫಾರ್ಮಾ ಅರ್ಜಿ ತಿರಸ್ಕೃತ
ಹೊಸದಿಲ್ಲಿ,ಡಿ.23: ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ತನ್ನ ಸಸ್ಯಜನ್ಯ ಔಷಧಿ ‘ಎಕ್ಯೂಸಿಎಚ್ ’ನ ತುರ್ತು ಬಳಕೆಗೆ ಅನುಮತಿ ಕೋರಿ ಔಷಧಿ ತಯಾರಿಕೆ ಸಂಸ್ಥೆ ಸನ್ ಫಾರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರಕಾರದ ವಿಷಯ ತಜ್ಞ ಸಮಿತಿ (ಎಸ್‌ಇಸಿ)ಯು ತಿರಸ್ಕರಿಸಿದೆ.
ಎಕ್ಯೂಸಿಎಚ್ ಅನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಬಹುದೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಅದರ ಕ್ಲಿನಿಕಲ್ ಟ್ರಯಲ್ ಆರಂಭಿಸಲು ಭಾರತೀಯ ಔಷಧಿಗಳ ಮಹಾ ನಿಯಂತ್ರಣಾಧಿಕಾರಿ (ಡಿಸಿಜಿಐ)ಗಳ ಕಚೇರಿಯು ಕಳೆದ ಜೂನ್‌ನಲ್ಲಿ ಸನ್ ಫಾರ್ಮಾಕ್ಕೆ ಅನುಮತಿಯನ್ನು ನೀಡಿತ್ತು.
ಡೆಂಗ್ ಕಾಯಿಲೆಗೆ ಚಿಕಿತ್ಸೆಗಾಗಿ ಅಭಿವೃದ್ಧಿಗೊಳಿಸಲಾಗಿರುವ ಎಕ್ಯೂಸಿಎಚ್ ಇನ್ನೂ ಟ್ರಯಲ್ ಹಂತದಲ್ಲಿದೆ. ಏಷ್ಯಾದ್ಯಂತ ತನ್ನ ಔಷಧೀಯ ಗುಣಗಳಿಗಾಗಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕಾಕ್ಯುಲಸ್ ಹಿರ್ಸುಟಸ್ ಅಥವಾ ದಾಗಡಿ ಬಳ್ಳಿಯಿಂದ ಎಕ್ಯೂಸಿಎಚ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಅದು ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆಯಾಗಿ ಡಿಸಿಜಿಐನಿಂದ ಕ್ಲಿನಿಕಲ್ ಟ್ರಯಲ್‌ಗೆ ಅನುಮತಿ ಪಡೆದುಕೊಂಡ ಮೊದಲ ಸಸ್ಯಜನ್ಯ ಔಷಧಿಯಾಗಿದೆ.
ಈ ತಿಂಗಳು ತನ್ನ ಕ್ಲಿನಿಕಲ್ ಟ್ರಯಲ್‌ನ ವರದಿಯನ್ನು ಎಸ್‌ಇಸಿಗೆ ಸಲ್ಲಿಸಿದ್ದ ಸನ್ ಫಾರ್ಮಾ,ಔಷಧಿಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಿತ್ತು.
ಕ್ಲಿನಿಕಲ್ ಟ್ರಯಲ್‌ನ ಫಲಿತಾಂಶವು ಪರಿಣಾಮಕಾರಿತ್ವ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಡಿಸಿಜಿಐ ತನ್ನ ಆದೇಶದಲ್ಲಿ ತಿಳಿಸಿದೆ.