×
Ad

ರೈತರ ಪ್ರತಿಭಟನೆಯನ್ನು ಇನ್ನೊಂದು ‘ಜಾಫರಾಬಾದ್’ನ್ನಾಗಿ ಮಾಡುವ ಬೆದರಿಕೆ: ಹಿಂದುತ್ವ ನಾಯಕಿಯ ವಿರುದ್ಧ ಪ್ರಕರಣ

Update: 2020-12-23 20:47 IST
ರಾಗಿಣಿ ತಿವಾರಿ

ಹೊಸದಿಲ್ಲಿ,ಡಿ.23: ದಂಗೆಗೆ ಪ್ರಚೋದಿಸಿದ್ದ ಆರೋಪದಲ್ಲಿ ಸ್ವಯಂಘೋಷಿತ ಹಿಂದುತ್ವ ನಾಯಕಿ ರಾಗಿಣಿ ತಿವಾರಿ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಇನ್ನೊಂದು ‘ಜಾಫರಾಬಾದ್ ’ಆಗಿ ಪರಿವರ್ತಿಸುವ ತಿವಾರಿ ಬೆದರಿಕೆಯ ವೀಡಿಯೊ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು.

ತಿವಾರಿ ತನ್ನ ವೀಡಿಯೊದ ಮೂಲಕ ಬೆದರಿಕೆ ಒಡ್ಡಿದ್ದಷ್ಟೇ ಅಲ್ಲ,ಹಿಂಸಾಚಾರಕ್ಕಿಳಿಯುವಂತೆ ಜನರನ್ನೂ ಪ್ರಚೋದಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಸಿಬ್ಬಂದಿಯೋರ್ವರು ಸಲ್ಲಿಸಿದ್ದ ದೂರಿನ ಮೇರೆಗೆ ಡಿ.16ರಂದು ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ತಿವಾರಿ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ ಎಂದರು.

ಎಫ್‌ಐಆರ್ ಬಗ್ಗೆ ತನಗೆ ಗೊತ್ತಿಲ್ಲ, ವೀಡಿಯೊಕ್ಕೆ ಸಂಬಂಧಿಸಿದಂತೆ ಪೊಲೀಸರು ವಾರದ ಹಿಂದೆ ತನ್ನನ್ನು ಕರೆದಿದ್ದರು ಎಂದು ತಿವಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಡಿ.12ರಿಂದ ವೈರಲ್ ಆಗಿದ್ದ ವೀಡಿಯೊದಲ್ಲಿ,‘ಸರಕಾರವು ಡಿ.16ರೊಳಗೆ ರೈತರ ಪ್ರತಿಭಟನೆಯನ್ನು ನಿಲ್ಲಿಸದಿದ್ದರೆ ನಾನು ಇನ್ನೊಂದು ‘ಜಾಫರಾಬಾದ್’ ಸೃಷ್ಟಿಸುತ್ತೇನೆ ಮತ್ತು ರಸ್ತೆಗಳನ್ನು ತೆರವುಗೊಳಿಸುತ್ತೇನೆ. ಏನೇ ಸಂಭವಿಸಿದರೂ ಅದಕ್ಕೆ ಕೇಂದ್ರ,ರಾಜ್ಯ ಸರಕಾರ ಮತ್ತು ದಿಲ್ಲಿ ಪೊಲೀಸರು ಹೊಣೆಯಾಗಿರುತ್ತಾರೆ. ಸೋದರಿಯರೇ ಸಿದ್ಧರಾಗಿ. ರಾಷ್ಟ್ರವಾದಿಗಳೇ,ಹೊರಗೆ ಬನ್ನಿ ಮತ್ತು ನನ್ನನ್ನು ಬೆಂಬಲಿಸಿ ’ಎಂದು ತಿವಾರಿ ಹೇಳಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮು ದಂಗೆಯಲ್ಲಿ ಜಾಫರಾಬಾದ್ ಕೇಂದ್ರಬಿಂದುವಾಗಿತ್ತು. ಹಿಂಸಾಚಾರದಲ್ಲಿ 53 ಜನರು ಬಲಿಯಾಗಿದ್ದರು. ವೀಡಿಯೊದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು,ತಿವಾರಿ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆಗ್ರಹಗಳ ಮಹಾಪೂರವೇ ಉಂಟಾಗಿತ್ತು.

ತಿವಾರಿ ಹಿಂಸಾಚಾರದ ಬೆದರಿಕೆಯೊಡ್ಡಿದ್ದು ಇದೇ ಮೊದಲಲ್ಲ. ಈಶಾನ್ಯ ದಿಲ್ಲಿಯಲ್ಲಿ ಕೋಮು ಗಲಭೆ ಭುಗಿಲೇಳುವುದಕ್ಕೆ ಮುನ್ನಾ ದಿನವೂ ತಿವಾರಿ ಇಂತಹುದೇ ಹಿಂಸಾಚಾರದ ಬೆದರಿಕೆಯ ಲೈವ್ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News