ಪತ್ರಕರ್ತ ಡೇನಿಯಲ್ ಪರ್ಲ್ ಹತ್ಯೆ: ಭಯೋತ್ಪಾದಕನ ಬಿಡುಗಡೆಗೆ ಸಿಂಧ್ ಹೈಕೋರ್ಟ್ ಆದೇಶ
ಇಸ್ಲಾಮಾಬಾದ್ (ಪಾಕಿಸ್ತಾನ), ಡಿ. 24: ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಅಪಹರಣ ಮತ್ತು ಕೊಲೆಗೆ ಸಂಬಂಧಿಸಿ ಭಯೋತ್ಪಾದಕ ಅಹ್ಮದ್ ಉಮರ್ ಸಯೀದ್ ಶೇಖ್, ಫಾಹದ್ ನಸೀಮ್, ಶೇಖ್ ಅದಿಲ್ ಮತ್ತು ಸಲ್ಮಾನ್ ಸಾಕಿಬ್‌ರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಸಿಂಧ್ ಹೈಕೋರ್ಟ್ ಗುರುವಾರ ಸರಕಾರಕ್ಕೆ ಆದೇಶ ನೀಡಿದೆ.
ಅದೇ ವೇಳೆ, ಅಹ್ಮದ್ ಉಮರ್ ಸಯೀದ್ ಶೇಖ್ ಮತ್ತು ಇತರರ ಹೆಸರುಗಳನ್ನು ವಿದೇಶ ಪ್ರಯಾಣಿ ನಿಯಂತ್ರಣ ಪಟ್ಟಿಗೆ ಸೇರ್ಪಡೆಗೊಳಿಸುವಂತೆಯೂ ನ್ಯಾಯಾಲಯವು ಸೂಚಿಸಿದೆ ಎಂದು ‘ಡೇಲಿ ಪಾಕಿಸ್ತಾನ್’ ಪತ್ರಿಕೆ ವರದಿ ಮಾಡಿದೆ.
ಪ್ರಕರಣದ ಆರೋಪಿಗಳು 18 ವರ್ಷಗಳಿಂದ ಜೈಲಿನಲ್ಲಿದ್ದಾರೆ. ನ್ಯಾಯಾಲಯ ಕರೆ ಕಳುಹಿಸಿದಾಗಲೆಲ್ಲ ಹಾಜರಾಗಬೇಕು ಎಂಬುದಾಗಿಯೂ ನ್ಯಾಯಾಲಯ ಆರೋಪಿಗಳಿಗೆ ಆದೇಶಿಸಿದೆ.
ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯ ದಕ್ಷಿಣ ಏಶ್ಯ ಬ್ಯೂರೋದ ಪತ್ರಕರ್ತ 38 ವರ್ಷದ ಡೇನಿಯಲ್ ಪರ್ಲ್‌ರನ್ನು 2002ರಲ್ಲಿ ಅಪಹರಿಸಿ ತಲೆಕಡಿಯಲಾಗಿತ್ತು. ಅಲ್-ಖಾಯಿದ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿರುವ ಭಯೋತ್ಪಾದಕ ಗುಂಪುಗಳ ಕುರಿತ ತನಿಖಾ ವರದಿಗಾಗಿ ಅವರು ಪಾಕಿಸ್ತಾನದಲ್ಲಿದ್ದರು.