ನೀವು ಸೇವಿಸುವ ಆಹಾರದಲ್ಲಿ ಕಲಬೆರಕೆ ಇದೆಯೇ?:ಈ ಸುಲಭ ವಿಧಾನದ ಮೂಲಕ ಪತ್ತೆ ಹಚ್ಚಿ

Update: 2020-12-25 11:29 GMT

ತಾಜಾ ಮತ್ತು ಆರೋಗ್ಯಕರ ಆಹಾರ ಸೇವನೆಯ ಬಗ್ಗೆ ನಾವು ಆಗಾಗ್ಗೆ ವೈದ್ಯರಂತೆ ಮಾತನಾಡುತ್ತಿರುತ್ತೇವೆ. ಅರಿಷಿಣ,ತುಪ್ಪ, ಜೇನು,ಹಾಲು ಮತ್ತು ಹಾಲು ಉತ್ಪನ್ನಗಳು, ಬೇಸನ್, ಕಾಳುಮೆಣಸು ಇತ್ಯಾದಿಗಳ ಬಳಕೆಯ ಮಹತ್ವಕ್ಕೆ ನಾವು ಒತ್ತು ನೀಡುತ್ತೇವೆ. ಈ ಆಹಾರಗಳು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರಿಂದ ಹಿಡಿದು ಶಕ್ತಿಯನ್ನು ಹೆಚ್ಚಿಸುವವರೆಗೆ ನೀಡುವ ಹಲವಾರು ಲಾಭಗಳ ಬಗ್ಗೆ ನಾವು ಕೇಳಿರುತ್ತೇವೆ. ಆದರೆ ಗ್ರಾಹಕರಾಗಿ ನಾವು ಬಳಸುವ ಆಹಾರ ಉತ್ಪನ್ನಗಳು ಯಾವುದೇ ಕಲಬೆರಕೆಯಿಲ್ಲದೆ ಪರಿಶುದ್ಧವಾಗಿದೆಯೇ ಎನ್ನುವುದನ್ನು ನಾವು ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ಇಂತಹ ಕಲಬೆರಕೆಗಳನ್ನು ಪತ್ತೆ ಹಚ್ಚಲು ಮನೆಯಲ್ಲಿಯೇ ಅನುಸರಿಸಬಹುದಾದ ಕೆಲವು ಸರಳ ಉಪಾಯಗಳು ಇಲ್ಲಿವೆ...

* ತುಪ್ಪ

ವನಸ್ಪತಿ,ಸಸ್ಯಜನ್ಯ ತೈಲ ಅಥವಾ ಪಿಷ್ಟ ಇವು ತುಪ್ಪದಲ್ಲಿ ಕಲಬೆರಕೆಗೆ ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುತ್ತವೆ. ತುಪ್ಪದ ಶುದ್ಧತೆಯನ್ನು ತಿಳಿದುಕೊಳ್ಳಲು ಎರಡು ರೀತಿಗಳಲ್ಲಿ ಅದನ್ನು ಪರೀಕ್ಷಿಸಬಹುದು.

1: ಒಂದು ಟೀ ಚಮಚ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಳ್ಳಿ. ಅದು ತಾನಾಗಿಯೇ ಕರಗಿದರೆ ಶುದ್ಧವಾಗಿದೆ ಎಂದು ಅರ್ಥ.

2: ಒಂದು ಟೀ ಚಮಚ ತುಪ್ಪವನ್ನು ಸಣ್ಣ ಪಾತ್ರೆಯೊಂದರಲ್ಲಿ ಕಾಯಿಸಿ. ಅದು ತಕ್ಷಣವೇ ಕರಗಿ ಗಾಢ ಕಂದು ಬಣ್ಣಕ್ಕೆ ತಿರುಗಿದರೆ ಅದು ಶುದ್ಧ ತುಪ್ಪವಾಗಿದೆ. ಅದು ಕರಗಲು ಸಮಯ ತೆಗೆದುಕೊಂಡರೆ ಮತ್ತು ಲಘು ಹಳದಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ.

* ಜೇನು

ಗ್ಲುಕೋಸ್/ಸಕ್ಕರೆಯ ಸಿರಪ್,ಹೈ ಫ್ರುಕ್ಟೋಸ್ ಕಾರ್ನ್ ಸಿರಪ್‌ಗಳನ್ನು ಕಲಬೆರಕೆ ಜೇನನ್ನು ಸಿದ್ಧಗೊಳಿಸಲು ಬಳಸಲಾಗುತ್ತದೆ.

ಶುದ್ಧತೆಯನ್ನು ಪರೀಕ್ಷಿಸಲು ಒಂದು ಚಮಚ ಜೇನನ್ನು ಒಂದು ಗ್ಲಾಸ್ ನೀರಿಗೆ ಸೇರಿಸಿ. ಜೇನು ತಕ್ಷಣವೇ ಚದುರಿದರೆ ಅದು ಗ್ಲುಕೋಸ್/ಸಕ್ಕರೆ ಸಿರಪ್ ಕಲಬೆರಕೆಯಾಗಿರುವುದನ್ನು ಸೂಚಿಸುತ್ತದೆ. ಶುದ್ಧ ಜೇನು ಹೆಚ್ಚು ಸಾಂದ್ರತೆಯನ್ನು ಹೊಂದಿರುತ್ತದೆ ಮತ್ತು ನೀರಿನಲ್ಲಿ ತಕ್ಷಣ ಕರಗುವ ಬದಲು ಗ್ಲಾಸ್‌ನ ತಳದಲ್ಲಿ ಕುಳಿತುಕೊಳ್ಳುತ್ತದೆ.

* ಅರಿಷಿಣ

 ಔಷಧೀಯ ಗುಣಗಳನ್ನು ಹೊಂದಿರುವ ಅದ್ಭುತ ಸಂಬಾರ ಪದಾರ್ಥವಾಗಿರುವ ಅರಿಷಿಣವನ್ನೂ ಕಲಬೆರಕೆಯು ಬಿಟ್ಟಿಲ್ಲ. ಮೆಟಾನಿಲ್ ಯೆಲ್ಲೋ,ಲೆಡ್ ಕ್ರೋಮೇಟ್,ಚಾಕ್ ಪೌಡರ್ ಇತ್ಯಾದಿಗಳು ಇಲ್ಲಿ ಕಲಬೆರಕೆಗೆ ಬಳಕೆಯಾಗುತ್ತವೆ.

ಅರಿಷಿಣದ ಶುದ್ಧತೆಯನ್ನು ಪರೀಕ್ಷಿಸಲು ಅತ್ಯಂತ ಸುಲಭದ ವಿಧಾನವೆಂದರೆ ಒಂದು ಟೀ ಚಮಚದಷ್ಟು ಅರಿಷಿಣವನ್ನು ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಸೇರಿಸುವುದು. ಅದನ್ನು ಕದಡಬೇಡಿ ಮತ್ತು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಹುಡಿಯು ತಳದಲ್ಲಿ ಕುಳಿತು ಮೇಲೆ ಶುಭ್ರ ನೀರಿದ್ದರೆ ಅರಿಷಿಣವು ಶುದ್ಧ ಎಂದು ತಿಳಿಯಬಹುದು. ಮೋಡದಂತಹ ನೀರು ಅರಿಷಿಣದಲ್ಲಿ ಸಂಭಾವ್ಯ ಕಲಬೆರಕೆಯನ್ನು ಸೂಚಿಸುತ್ತದೆ.

 ಇನ್ನೊಂದು ವಿಧಾನ: ಸ್ವಲ್ಪ ಅರಿಷಿಣ ಹುಡಿಯನ್ನು ಪಾರದರ್ಶಕ ಗ್ಲಾಸ್‌ನಲ್ಲಿ ತೆಗೆದುಕೊಂಡು ಅದಕ್ಕೆ ಕೆಲವು ಹನಿಗಳಷ್ಟು ನೀರು ಮತ್ತು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ. ಬಳಿಕ ಗ್ಲಾಸ್‌ನ್ನು ಬಲವಾಗಿ ಅಲುಗಾಡಿಸಿ. ಮಿಶ್ರಣವು ಗುಲಾಬಿ ಬಣ್ಣಕ್ಕೆ ತಿರುಗಿದರೆ ಅದು ಮೆಟಾನಿಲ್ ಯೆಲ್ಲೊ ಕಲಬೆರಕೆಯನ್ನು ತೋರಿಸುತ್ತದೆ. ಮಿಶ್ರಣವು ಸಣ್ಣ ಗುಳ್ಳೆಗಳನ್ನು ಬಿಡುಗಡೆಗೊಳಿಸಿದರೆ ಅರಿಷಿಣ ಹುಡಿಯಲ್ಲಿ ಚಾಕ್ ಪೌಡರ್ ಸೇರಿಸಲಾಗಿದೆ ಎಂದು ಅರ್ಥ.

* ಹಸಿರು ಬಟಾಣಿ

ಹಸಿರು ಬಟಾಣಿ ಸಾಮಾನ್ಯವಾಗಿ ಎಲ್ಲರ ಅಡಿಗೆ ಮನೆಗಳಲ್ಲಿ ಬಳಕೆಯಾಗುತ್ತದೆ. ಸಾಮಾನ್ಯವಾಗಿ ಮಾಲಚೈಟ್ ಗ್ರೀನ್ ಅನ್ನು ಬಟಾಣಿಗೆ ಕಲಬೆರಕೆ ಮಾಡಲಾಗುತ್ತದೆ.

ಕೆಲವು ಬಟಾಣಿ ಕಾಳುಗಳನ್ನು ಸುಮಾರು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಟ್ಟು,ಬಳಿಕ ಅವುಗಳನ್ನು ಕೈಯಿಂದ ಮೃದುವಾಗಿ ಉಜ್ಜಿ. ಹಸಿರು ಬಣ್ಣ ನೀರಿನಲ್ಲಿ ಸೇರಿದರೆ ಅದು ಬಟಾಣಿಯಲ್ಲಿ ಮಾಲಚೈಟ್ ಗ್ರೀನ್ ಸೇರಿಕೊಂಡಿದೆ ಎನ್ನುವುದನ್ನು ತೋರಿಸುತ್ತದೆ.

ನೆನೆಸಿದ ಕೆಲವು ಬಟಾಣಿ ಕಾಳುಗಳನ್ನು ಬಿಳಿಯ ಬ್ಲಾಟಿಂಗ್ ಪೇಪರ್ ಮೇಲೆ ಇಟ್ಟು ನೋಡಿ, ಪೇಪರ್ ಮೇಲೆ ಹಸಿರು ಬಣ್ಣ ಮೂಡಿದರೆ ಮಾಲ್‌ಚೈಟ್ ಗ್ರೀನ್ ಕಲಬೆರಕೆಯಾಗಿದೆ ಎಂದು ಅರ್ಥ.

ಪ್ಯಾರಾಫಿನ್ ದ್ರಾವಣದಲ್ಲಿ ನೆನೆಸಿದ ಹತ್ತಿಯ ತುಂಡಿನಿಂದ ಬಟಾಣಿ ಕಾಳುಗಳ ಹೊರಮೈಯನ್ನು ಉಜ್ಜಿ. ಹತ್ತಿಯು ಹಸಿರು ಬಣ್ಣಕ್ಕೆ ತಿರುಗಿದರೆ ರಾಸಾಯನಿಕ ಬಣ್ಣ ಸೇರಿಕೊಂಡಿರುವುದನ್ನು ಬೆಟ್ಟು ಮಾಡುತ್ತದೆ.

* ಕೆಂಪು ಮೆಣಸಿನ ಹುಡಿ

ಭಾರತೀಯ ಅಡಿಗೆ ಮನೆಗಳಲ್ಲಿ ಕೆಂಪುಮೆಣಸಿನ ಹುಡಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಕೃತಕ ಬಣ್ಣಗಳು ಮತ್ತು ಇಟ್ಟಿಗೆ ಹುಡಿ ಇದಕ್ಕೆ ಕಲಬೆರಕೆಯಾಗುವ ಸಾಮಾನ್ಯ ವಸ್ತುಗಳಾಗಿವೆ.

 ಒಂದು ಟೀ ಚಮಚ ಮೆಣಸಿನ ಹುಡಿಯನ್ನು ಒಂದು ಗ್ಲಾಸ್ ನೀರಿಗೆ ಸೇರಿಸಿ ಅದನ್ನು ಕದಡಿರಿ. ಪ್ರಖರ ಕೆಂಪು ಬಣ್ಣವು ಕಂಡುಬಂದರೆ ಕೃತಕ ಬಣ್ಣಗಳನ್ನು ಸೇರಿಸಲಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಗ್ಲಾಸ್‌ನ ತಳದಲ್ಲಿ ಮಡ್ಡಿಯು ಶೇಖರಗೊಂಡರೆ ಮರದ ಹುಡಿ ಅಥವಾ ಇಟ್ಟಿಗೆ ಹುಡಿಯನ್ನು ಕಲಬೆರಕೆ ಮಾಡಲಾಗಿದೆ ಎನ್ನುವುದನ್ನು ಸೂಚಿಸುತ್ತದೆ.

* ಹಾಲು ಮತ್ತು ಹಾಲಿನ ಉತ್ಪನ್ನಗಳು

 ಆರೊಗ್ಯಕರವೆಂದು ನಾವು ಮಕ್ಕಳಿಗೆ ನೀಡುವ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನೂ ಕಲಬೆರಕೆ ಖದೀಮರು ಬಿಟ್ಟಿಲ್ಲ. ಅದಕ್ಕೂ ಪಿಷ್ಟ ಮತ್ತು ಮಾರ್ಜಕಗಳಂತಹ ಕಲಬೆರಕೆಗಳನ್ನು ಸೇರಿಸಲಾಗುತ್ತದೆ.

ಸ್ವಲ್ಪ ಉತ್ಪನ್ನಕ್ಕೆ 20 ಎಂಎಲ್ ನೀರನ್ನು ಸೇರಿಸಿ ಕುದಿಸಿ. ಬಳಿಕ ಅದನ್ನು ಪಾರದರ್ಶಕ ಗ್ಲಾಸ್‌ನಲ್ಲಿ ಹಾಕಿ ಕೋಣೆಯ ಉಷ್ಣತೆಗೆ ತಗ್ಗಿದ ಬಳಿಕ ಇಂದೆರಡು ಹನಿ ಅಯೊಡಿನ್ ದ್ರಾವಣವನ್ನು ಸೇರಿಸಿ. ನೀಲಿ ಬಣ್ಣ ಕಂಡು ಬಂದರೆ ಪಿಷ್ಟವು ಕಲಬೆರಕೆಯಾಗಿದೆ ಎಂದು ಅರ್ಥ.

10 ಎಂಎಲ್‌ನಷ್ಟು ಹಾಲಿಗೆ ಅಷ್ಟೇ ನೀರನ್ನು ಸೇರಿಸಿ ಬಲವಾಗಿ ಅಲುಗಾಡಿಸಿ. ಹಾಲಿನಲ್ಲಿ ಮಾರ್ಜಕ ಕಲಬೆರಕೆಯಾಗಿದ್ದರೆ ದಪ್ಪನೆಯ ನೊರೆಯೇಳುತ್ತದೆ.

* ಸಕ್ಕರೆ

 ಚಾಕ್ ಪೌಡರ್ ಸಕ್ಕರೆಯಲ್ಲಿ ಅತ್ಯಂತ ಹೆಚ್ಚಾಗಿ ಕಲಬೆರಕೆಯಾಗುತ್ತದೆ. 10 ಗ್ರಾಮ್‌ನಷ್ಟು ಸಕ್ಕರೆಯನ್ನು ಒಂದು ಗ್ಲಾಸ್ ನೀರಿನಲ್ಲಿ ಕರಗಿಸಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಚಾಕ್ ಪೌಡರ್ ಕಲಬೆರಕೆಯಾಗಿದ್ದರೆ ಅದು ಗ್ಲಾಸಿನ ತಳದಲ್ಲಿ ಸಂಗ್ರಹಗೊಳ್ಳುತ್ತದೆ.

* ಕೇಸರಿ

ಕೇಸರಿಯು ವಿಶ್ವದಲ್ಲಿ ಅತ್ಯಂತ ದುಬಾರಿ ಸಂಬಾರ ಪದಾರ್ಥವಾಗಿದ್ದು,ಇದಕ್ಕೆ ಗೋವಿನಜೋಳದ ನಾರಿನಂತಹ ಎಳೆಗಳಿಗೆ ಬಣ್ಣ ನೀಡಿ ಕಲಬೆರಕೆ ಮಾಡಲಾಗುತ್ತದೆ. ಅಸಲಿ ಕೇಸರಿಯು ಕೃತಕ ಕೇಸರಿಯಂತೆ ಸುಲಭದಲ್ಲಿ ತುಂಡಾಗುವುದಿಲ್ಲ. ಗೋವಿನಜೋಳದ ನಾರಿನ ಎಳೆಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಕೋಲ್ ಟಾರ್ ಬಣ್ಣವನ್ನು ನೀಡಿ ಕೃತಕ ಕೇಸರಿಯನ್ನು ತಯಾರಿಸಲಾಗುತ್ತದೆ. ಕೃತಕವಾಗಿ ಬಣ್ಣ ಹಚ್ಚಿದ್ದರೆ ಕೇಸರಿಯನ್ನು ನೀರಿಗೆ ಹಾಕಿದಾಗ ಬಣ್ಣ ಬಿಡುತ್ತದೆ. ಅಸಲಿ ಕೇಸರಿಯು ನೀರಿನಲ್ಲಿ ತನ್ನ ನೈಸರ್ಗಿಕ ಕೇಸರಿ ಬಣ್ಣವನ್ನು ಬಿಡುಗಡೆಗೊಳಿಸುತ್ತದೆ.

 ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಕೇಸರಿ ಎಳೆಗಳನ್ನು ಸೇರಿಸಿ. 20 ನಿಮಿಷಗಳ ಬಳಿಕ ನೀರು ಹಳದಿ ಅಥವಾ ಗಾಢ ಕಂದು ಹಳದಿ ಬಣ್ಣಕ್ಕೆ ತಿರುಗುತ್ತದೆ. ನೀರಿನ ಬಣ್ಣದಲ್ಲಿ ತಕ್ಷಣವೇ ಬದಲಾವಣೆಯಾದರೆ ಅಥವಾ ಬಣ್ಣವನ್ನು ಬದಲಿಸದಿದ್ದರೆ ಅದಕ್ಕೆ ಕೃತಕ ಬಣ್ಣವನ್ನು ಸೇರಿಸಲಾಗಿದೆ ಮತ್ತು ಶುದ್ಧವಲ್ಲ ಎನ್ನುವುದನ್ನು ಸೂಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News