ರಕ್ತದ ಕಲೆಗಳಿರುವ ಮೊಟ್ಟೆಯನ್ನು ತಿನ್ನುವುದು ಸುರಕ್ಷಿತವೇ?

Update: 2020-12-24 18:45 GMT

ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ,ಆರೋಗ್ಯಕ್ಕೆ ಲಾಭದಾಯಕವಾದ ಮೊಟ್ಟೆಯನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ವ್ಯಾಯಾಮವನ್ನು ಮಾಡುವವರಿಗೆ ಮೊಟ್ಟೆಯು ಆಹಾರದ ಅಗತ್ಯ ಭಾಗವಾಗಿದೆ. ಸಮೃದ್ಧ ಪ್ರೋಟಿನ್ ಅನ್ನು ಹೊಂದಿರುವ ಮೊಟ್ಟೆಯನ್ನು ಹಲವಾರು ಖಾದ್ಯಗಳ ರೂಪದಲ್ಲಿ ತಿನ್ನಬಹುದು.ಆಮ್ಲೆಟ್ ಅಥವಾ ಬೇಯಿಸಿದ ಮೊಟ್ಟೆ ರುಚಿಕರವೂ ಹೌದು,ಆರೋಗ್ಯಕರವೂ ಹೌದು. ಆದರೆ ಹೆಚ್ಚುತ್ತಿರುವ ವಾಯುಮಾಲಿನ್ಯ ನಮ್ಮ ಸುತ್ತಲಿನ ಪ್ರತಿಯೊಂದರ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತಿದೆ. ಇದರಿಂದಾಗಿ ಮೊಟ್ಟೆಗಳ ಗುಣಮಟ್ಟವೂ ಕಡಿಮೆಯಾಗುತ್ತಿದೆ. ನೀವು ಕೆಲವೊಮ್ಮೆ ಮೊಟ್ಟೆಯ ಹಳದಿ ಭಾಗದಲ್ಲಿ ಕೆಲವು ಕೆಂಪು ಅಥವಾ ಕಪ್ಪು ಚುಕ್ಕೆಗಳನ್ನು ಗಮನಿಸಿರಬಹುದು. ಇವುಗಳನ್ನು ಕಂಡ ಜನರು ಹೆಚ್ಚಾಗಿ ಮೊಟ್ಟೆಯು ಕೊಳೆತಿದೆ ಎಂದು ಭಾವಿಸಿ ಅದನ್ನು ಎಸೆಯುತ್ತಾರೆ. ನಿಜಕ್ಕೂ ಮೊಟ್ಟೆಯಲ್ಲಿನ ಈ ಚುಕ್ಕೆ ರಕ್ತವಲ್ಲದೆ ಬೇರೇನೂ ಅಲ್ಲ. ಆದರೆ ಹೀಗೆ ರಕ್ತದ ಕಲೆಗಳುಳ್ಳ ಮೊಟ್ಟೆ ಸೇವಿಸಲು ಸುರಕ್ಷಿತವೇ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ.

 ನಿಮಗೆ ಮೊಟ್ಟೆ ತಿನ್ನುವುದು ಇಷ್ಟವಿರಬಹುದು. ಆದರೆ ಮೊಟ್ಟೆಯಲ್ಲಿ ರಕ್ತದ ಕಲೆಗಳು ಕಂಡು ಬಂದ ಮಾತ್ರಕ್ಕೆ ಆತಂಕ ಪಟ್ಟುಕೊಳ್ಳಬೇಕಿಲ್ಲ. ಈ ಕಲೆಗಳು ರಕ್ತದ ಪ್ಲಾಸ್ಮಾದ ಹನಿಗಳಾಗಿದ್ದು, ಇವು ಕೆಲವೊಮ್ಮೆ ಹಳದಿ ಭಾಗದ ಹೊದಿಕೆಯ ಮೇಲೆ ಕಂಡು ಬರುತ್ತವೆ. ಕೋಳಿಯು ಮೊಟ್ಟೆಯಿಡುವ ಪ್ರಕ್ರಿಯೆಯಲ್ಲಿ ಕೆಲವು ಮೊಟ್ಟೆಗಳಲ್ಲಿ ರಕ್ತದ ಕಲೆಗಳು ನೈಸರ್ಗಿಕವಾಗಿಯೇ ಉಂಟಾಗುತ್ತವೆ. ಹೀಗಾಗಿ ಇಂತಹ ಮೊಟ್ಟೆಗಳು ಯಾವುದೇ ರೀತಿಯಲ್ಲಿಯೂ ಆರೋಗ್ಯಕ್ಕೆ ಹಾನಿಕರವಲ್ಲ.

ಮೊಟ್ಟೆಯ ಹಳದಿ ಭಾಗ ಮತ್ತು ಕೆಲವೊಮ್ಮೆ ಬಿಳಿಯ ಭಾಗದಲ್ಲಿಯೂ ರಕ್ತದ ಕಲೆಗಳಿರುತ್ತವೆ. ಇದಕ್ಕೆ ಮೊಟ್ಟೆಯು ರೂಪುಗೊಳ್ಳುವಾಗ ಉಂಟಾಗುವ ಕೆಲವು ವ್ಯತ್ಯಯಗಳು ಕಾರಣವಾಗಿರುತ್ತವೆ.

ಹೆಚ್ಚಿನ ಜನರು ಮೊಟ್ಟೆಯಲ್ಲಿ ರಕ್ತದ ಕಲೆಗಳು ಕಂಡು ಬಂದಾಗ ಅದು ಕೊಳೆತಿದೆ ಮತ್ತು ತಿನ್ನಲು ಯೋಗ್ಯವಲ್ಲ ಎಂದು ಭಾವಿಸಿ ಎಸೆದುಬಿಡುತ್ತಾರೆ. ರಕ್ತದ ಕಲೆಗಳುಳ್ಳ ಮೊಟ್ಟೆಗಳನ್ನು ಸೂಕ್ತವಾಗಿ ಬೇಯಿಸಿದರೆ ಅವು ಸೇವಿಸಲು ಸುರಕ್ಷಿತ ಎನ್ನುವುದನ್ನು ಸಂಶೋಧನೆಗಳು ಸಾಬೀತುಗೊಳಿಸಿವೆ. ಹಾಫ್ ಬಾಯಿಲ್ಡ್ ಎಗ್ ಅಥವಾ ಅರ್ಧ ಬೇಯಿಸಿದ ಮೊಟ್ಟೆಯನ್ನು ಸೂಕ್ತ ರೀತಿಯಲ್ಲಿ ತಯಾರಿಸದಿದ್ದರೆ ಅದು ಸಾಲ್ಮೊನೆಲೊಸಿಸ್‌ಗೆ ಗುರಿಯಾಗುವ ಅಪಾಯವನ್ನುಂಟು ಮಾಡಬಹುದು. ಇದು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕು ಆಗಿದ್ದು,ಹೊಟ್ಟೆನೋವು,ಅತಿಸಾರ ಮತ್ತು ಜ್ವರ,ಜೀರ್ಣ ಸಮಸ್ಯೆಗಳನ್ನುಂಟು ಮಾಡುತ್ತದೆ.

ಮೊಟ್ಟೆಯು ಕೊಳೆತಿದೆಯೇ ಎನ್ನುವುದನ್ನು ಗುರುತಿಸಲು ಹೆಚ್ಚು ಪ್ರಯತ್ನವೇನೂ ಬೇಕಿಲ್ಲ. ನೀವು ಮೊಟ್ಟೆಯನ್ನು ಒಡೆದಾಗ ಬಿಳಿಯ ಭಾಗವು ಹಸಿರು ಅಥವಾ ಗುಲಾಬಿ ಛಾಯೆಯನ್ನು ಹೊಂದಿದ್ದರೆ ಅದು ಕೊಳೆತಿದೆ ಎಂದು ಅರ್ಥ. ಅಲ್ಲದೆ ನೀರು ತುಂಬಿದ ಪಾತ್ರೆಯಲ್ಲಿ ಮೊಟ್ಟೆಯನ್ನು ಹಾಕಿದಾಗ ಅದು ತಳವನ್ನು ಸೇರಿದರೆ ಅದು ತಿನ್ನಲು ಸುರಕ್ಷಿತವಾಗಿರುತ್ತದೆ. ಆದರೆ ಮೊಟ್ಟೆಯು ನೀರಿನ ಮೇಲೆ ತೇಲಿದರೆ ಅದು ಕೊಳೆತಿದೆ ಮತ್ತು ತಿನ್ನಲು ಅಸುರಕ್ಷಿತ ಎಂದು ಅರ್ಥ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News