ಬ್ರೆಕ್ಸಿಟ್ ವ್ಯಾಪಾರ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ, ಬ್ರಿಟನ್ ಅಸ್ತು
ಬ್ರಸೆಲ್ಸ್ (ಬೆಲ್ಜಿಯಮ್), ಡಿ. 25: ತಿಂಗಳುಗಳ ಅವಧಿಯ ತ್ರಾಸದಾಯಕ ಮಾತುಕತೆಗಳ ಬಳಿಕ, ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಟ್ಟ (ಬ್ರೆಕ್ಸಿಟ್) ನಂತರದ ವ್ಯಾಪಾರ ಒಪ್ಪಂದಕ್ಕೆ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ ಗುರುವಾರ ಬಂದಿವೆ.
ಬ್ರಿಟನ್‌ನಲ್ಲಿ 2016ರಲ್ಲಿ ನಡೆದ ಜನಮತಗಣನೆಯಲ್ಲಿ, ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅಂತಿಮವಾಗಿ ಈ ವರ್ಷದ ಜನವರಿಯಲ್ಲಿ ಬ್ರಿಟನ್ ಔಪಚಾರಿಕವಾಗಿ ಐರೋಪ್ಯ ಒಕ್ಕೂಟವನ್ನು ತೊರೆಯಿತು.
ಐರೋಪ್ಯ ಒಕ್ಕೂಟದಿಂದ ನಿರ್ಗಮನದ ಬಳಿಕ ಬ್ರಿಟನ್ ಎದುರಿಸಬಹುದಾದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಈ ವ್ಯಾಪಾರ ಒಪ್ಪಂದ ಸಹಾಯ ಮಾಡುತ್ತದೆ ಎನ್ನಲಾಗಿದೆ.
ಡಿಸೆಂಬರ್ 31ರಂದು ಬ್ರಿಟನ್ ಐರೋಪ್ಯ ಒಕ್ಕೂಟದ ಏಕ ಮಾರುಕಟ್ಟೆ ಮತ್ತು ಕಸ್ಟಮ್ಸ್ ಒಕ್ಕೂಟದಿಂದ ಹೊರಬರಲಿದೆ.
ಮೀನುಗಾರಿಕೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಕೊನೆಯ ಕ್ಷಣದಲ್ಲಿ 2,000 ಪುಟಗಳ ಒಪ್ಪಂದವನ್ನು ತಡೆಹಿಡಿಯಲಾಗಿತ್ತು. ಈ ವರ್ಷದ ಕೊನೆಯ ಬಳಿಕ, ಬ್ರಿಟನ್ ಜಲಪ್ರದೇಶಕ್ಕೆ ಐರೋಪ್ಯ ಒಕ್ಕೂಟದ ಮೀನುಗಾರರಿಗೆ ಸಿಗುವ ಪ್ರವೇಶದ ಬಗ್ಗೆ ತಕರಾರು ಉಂಟಾಗಿತ್ತು. ಅಂತಿಮವಾಗಿ ಬಿಕ್ಕಟ್ಟನ್ನು ಬಗೆಹರಿಸಲಾಗಿದೆ ಹಾಗೂ ಅಂತಿಮ ಒಪ್ಪಂದಕ್ಕೆ ಅಂಗೀಕಾರ ನೀಡಲಾಗಿದೆ.