ರಾತ್ರಿ ಕರ್ಫ್ಯೂ ಹೇರಿಕೆ ಎಂಬ ಪ್ರಹಸನ

Update: 2020-12-26 06:18 GMT

ಇತ್ತೀಚಿನ ದಿನಗಳಲ್ಲಿ ಕರ್ಫ್ಯೂ ಎನ್ನುವ ಪದವನ್ನು ಎರ್ರಾಬಿರ್ರಿಯಾಗಿ ಬಳಸಲಾಗುತ್ತಿದೆ. ದಂಗೆ, ಕೋಮುಗಲಭೆಗಳು ಸಂಭವಿಸಿದಾಗ ಜನರನ್ನು ಹತೋಟಿಯಲ್ಲಿಡುವುದಕ್ಕಾಗಿ ಈ ಕರ್ಫ್ಯೂವನ್ನು ಬಳಸಲಾಗುತ್ತಿತ್ತು. ಸಮಾಜದಲ್ಲಿ ಕದಡಿರುವ ಶಾಂತಿ ಸುವ್ಯವಸ್ಥೆಯನ್ನು ಮರುಸ್ಥಾಪಿಸುವುದಕ್ಕಾಗಿ ತೀರಾ ಅನಿವಾರ್ಯ ಸಂದರ್ಭದಲ್ಲಿ ಕರ್ಫ್ಯೂ ಹೇರಲಾಗುತ್ತಿತ್ತು. ಆದರೆ ಕೊರೋನ ಕಾಲದ ಈ ದಿನಗಳಲ್ಲಿ ಜನರಲ್ಲಿ ಆತಂಕವನ್ನು ಬಿತ್ತುವುದಕ್ಕಾಗಿ ಕರ್ಫ್ಯೂವನ್ನು ಬಳಸಲಾಗುತ್ತಿದೆ. ಕೊರೋನವನ್ನು ತಡೆಯುವುದಕ್ಕಾಗಿ ದೇಶಾದ್ಯಂತ ಜಾರಿಗೊಳಿಸಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಕರ್ಫ್ಯೂವನ್ನು ಪೊಲೀಸರು ಹೇಗೆ ದುರುಪಯೋಗಪಡಿಸಿಕೊಂಡರು, ಜನಸಾಮಾನ್ಯರ ಮೇಲೆ ಯಾವ ರೀತಿಯ ದೌರ್ಜನ್ಯಗಳನ್ನು ಎಸಗಿದ್ದರು ಎನ್ನುವುದನ್ನು ನಾವು ಕಂಡಿದ್ದೇವೆ. ಈ ಲಾಕ್‌ಡೌನ್ ಮತ್ತು ಕರ್ಫ್ಯೂನಿಂದಾಗಿ ನಿಜಕ್ಕೂ ಏನಾದರೂ ಲಾಭವಾಗಿದೆಯೇ ಎಂಬ ಪ್ರಶ್ನೆಗೆ ಯಾರೂ ಸ್ಪಷ್ಟವಾದ ಉತ್ತರಗಳನ್ನು ನೀಡುತ್ತಿಲ್ಲ. ಜರ್ಝರಿತವಾಗಿದ್ದ ಈ ದೇಶದ ಆರ್ಥಿಕತೆ ಸರ್ವನಾಶ ಮಾಡುವುದನ್ನು ಹೊರತು ಪಡಿಸಿ, ಕೊರೋನವನ್ನು ನಾಶ ಪಡಿಸುವುದಕ್ಕೆ ಲಾಕ್‌ಡೌನ್‌ಗಾಗಲಿ, ಕರ್ಫ್ಯೂಗಾಗಲಿ ಸಾಧ್ಯವಾಗಿಲ್ಲ. ಇದೀಗ ಕೊರೋನ ಹರಡುವ ಪ್ರಮಾಣ ನಿಧಾನಕ್ಕೆ ಇಳಿಕೆಯಾಗುತ್ತಾ ಬರುತ್ತಿದೆ. ಲಾಕ್‌ಡೌನ್‌ನಿಂದ ಕುಸಿದು ಬಿದ್ದ ಬದುಕನ್ನು ಮತ್ತೆ ಸರಿಪಡಿಸುವ ಕಡೆಗೆ ಜನರು ಮನ ಮಾಡುತ್ತಿದ್ದಾರೆ. ಇಂತಹ ಹೊತ್ತಿನಲ್ಲೇ, ಮತ್ತೆ ಕೊರೋನವನ್ನು ಮುಂದಿಟ್ಟು ಜನರನ್ನು ಭಯ ಬೀಳಿಸುವ ಕೃತ್ಯಗಳನ್ನು ಕೆಲವು ನಿರ್ದಿಷ್ಟ ಮಾಧ್ಯಮಗಳು ಎಸಗುತ್ತಿವೆ. ಈ ಮಾಧ್ಯಮಗಳ ಅಬ್ಬರಕ್ಕೆ ಹೆದರಿ ಸರಕಾರ ದಿನಕ್ಕೊಂದು ಗೊಂದಲಕಾರಿ ಆದೇಶಗಳನ್ನು ನೀಡುತ್ತಾ ನಗೆಪಾಟಲಿಗೀಡಾಗುತ್ತಿದೆ.

ಜನಸಾಮಾನ್ಯರು ಕೊರೋನ ಆತಂಕದಿಂದ ಚೇತರಿಸಿ ಸಹಜ ಬದುಕಿಗೆ ವಾಪಸಾಗುತ್ತಿರುವ ಸಂದರ್ಭದಲ್ಲೇ ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ರೂಪಾಂತರ ಹೊಂದಿದ ಕೋವಿಡ್ ವೈರಾಣು ಪತ್ತೆಯಾಯಿತು. ಇಂತಹ ರೂಪಾಂತರಗಳು ಸಹಜ ಪ್ರಕ್ರಿಯೆ. ಭಾರತದ ಮಾಧ್ಯಮಗಳಿಗೆ ಅಷ್ಟೇ ಸಾಕಾಯಿತು. ಕೆಲವು ಟಿವಿಗಳಲ್ಲಿ ಹಗಲೂ ರಾತ್ರಿ ಭಯಾನಕವಾಗಿ ಈ ಸುದ್ದಿಯನ್ನು ಬಿತ್ತರಿಸತೊಡಗಿದವು. ಬ್ರಿಟನ್‌ನಿಂದ ಬಂದ ಯಾತ್ರಿಕರ ಬಗ್ಗೆಯೂ ಭೀತಿಗಳನ್ನು ಹರಡತೊಡಗಿದವು. ಬರೇ ಟಿಆರ್‌ಪಿಗಾಗಿ ನಿರ್ದಿಷ್ಟ ಟಿವಿ ಚಾನೆಲ್‌ಗಳು ಇಂತಹ ಹೀನ ಕೃತ್ಯಕ್ಕೆ ಇಳಿದವು. ಸರಕಾರ ಇಂತಹ ಸಂದರ್ಭದಲ್ಲಿ ವದಂತಿ ಹರಡದಂತೆ ಮಾಧ್ಯಮಗಳಿಗೆ ಎಚ್ಚರ ನೀಡಬೇಕಾಗಿತ್ತು. ಬದಲಿಗೆ ಆ ವದಂತಿಯನ್ನೇ ನಂಬಿ ರಾತ್ರಿ ಕರ್ಫ್ಯೂವನ್ನು ವಿಧಿಸಲು ಮುಂದಾಯಿತು. ಆರಂಭದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರಿಗೆ ಕರ್ಫ್ಯೂ ಎಂದು ಆದೇಶವನ್ನು ಹೊರಡಿಸಿತು. ಆ ಬಳಿಕ ತನ್ನದೇ ಆದೇಶವನ್ನು ಬದಲಿಸಿ ರಾತ್ರಿ 10ರ ಬದಲಿಗೆ 11ರಿಂದ ಎಂದು ತಿದ್ದಿ ಮರು ಆದೇಶ ನೀಡಿತು. ಆದರೆ ಇದರ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಟೀಕೆ ಬರುತ್ತಿದ್ದಂತೆಯೇ ತನ್ನ ಕರ್ಫ್ಯೂ ಆದೇಶವನ್ನು ಹಿಂದೆಗೆದುಕೊಂಡಿತು.

ಕೊರೋನದ ಕುರಿತಂತೆ ಸರಕಾರವೇ ಅಜ್ಞಾನದಲ್ಲಿದೆ ಎನ್ನುವುದನ್ನು ಗೊಂದಲದ ಆದೇಶಗಳು ಬಹಿರಂಗ ಪಡಿಸಿವೆ. ಸರಿ, ಮಾರಕ ಕೊರೋನ ಮತ್ತೆ ಹರಡುವ ಭಯ ಇದೆ ಎಂದೇ ಇಟ್ಟುಕೊಳ್ಳೋಣ. ಆದರೆ ರಾತ್ರಿ 11 ಗಂಟೆಯಿಂದ ಕರ್ಫ್ಯೂ ಜಾರಿಗೊಳಿಸುವುದರಿಂದ ಕೊರೋನವನ್ನು ತಡೆಯುವುದು ಹೇಗೆ? ಜನಸಾಮಾನ್ಯರು ದೈನಂದಿನ ವ್ಯವಹಾರಗಳಿಗಾಗಿ ಹಗಲು ಹೊತ್ತು ಓಡಾಡುತ್ತಿದ್ದಾರೆ. ರಾಜಕಾರಣಿಗಳು ಯಾವುದೇ ಅಂಜಿಕೆಯಿಲ್ಲದೆ ಚುನಾವಣಾ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಜಾತ್ರೆಗಳು, ಹಬ್ಬ ಹರಿದಿನಗಳು ಯಾವ ದಿಗ್ಬಂಧನಗಳಿಲ್ಲದೆ ನಡೆಯುತ್ತಿವೆ. ಮದುವೆ ಹಾಲ್‌ಗಳು ತುಂಬಿ ತುಳುಕುತ್ತಿವೆ. ಕೊರೋನ ಹಬ್ಬುವುದಾದರೆ ಈ ಸಂದರ್ಭದಲ್ಲಿ ಮಾತ್ರ. ಇವುಗಳಿಗೆಲ್ಲ ಅನುಮತಿ ನೀಡಿ, ರಾತ್ರಿ 11ರಿಂದ ಕರ್ಫ್ಯೂ ಹೇರುವುದರಿಂದ ಕೊರೋನವನ್ನು ತಡೆಯುವುದಕ್ಕೆ ಹೇಗೆ ಸಾಧ್ಯ? ಕರ್ಫ್ಯೂ ಹೇರದಿದ್ದರೂ ಸಾಧಾರಣವಾಗಿ 11 ಗಂಟೆಯ ಬಳಿಕ ಜನರ ಓಡಾಟ ಅಷ್ಟಕ್ಕಷ್ಟೇ. ಈ ಪ್ರಾಥಮಿಕ ತಿಳುವಳಿಕೆಯೂ ಇಲ್ಲದ ಸರಕಾರ ಕೊರೋನವನ್ನು ಎದುರಿಸುವುದರಲ್ಲಿ ಸಂಪೂರ್ಣ ವಿಫಲವಾದುದರಲ್ಲಿ ಅಚ್ಚರಿಯೇನೂ ಇಲ್ಲ. ಮೊತ್ತ ಮೊದಲು ಸರಕಾರ, ಕೊರೋನ ರೂಪಾಂತರದ ಸತ್ಯಾಸತ್ಯತೆ ಏನು, ಅದು ಭಾರತಕ್ಕೆ ಕಾಲಿಟ್ಟಿದೆಯೇ? ಮುಖ್ಯವಾಗಿ ಕರ್ನಾಟಕಕ್ಕೆ ಕಾಲಿಟ್ಟಿದೆಯೇ? ಅದರಿಂದ ನಿಜಕ್ಕೂ ಅಪಾಯವಿದೆಯೆ? ಇತ್ಯಾದಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಬೇಕು. ಬ್ರಿಟನ್‌ನಿಂದ ಒಟ್ಟು ಎಷ್ಟು ಪ್ರವಾಸಿಗರು ಕರ್ನಾಟಕಕ್ಕೆ ಆಗಮಿಸಿದ್ದಾರೆ, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆಯೆ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಬದಲು, ರಾತ್ರಿ 11 ಗಂಟೆಯನಂತರ ಕರ್ಫ್ಯೂ ಹೇರಿ ಕೊರೋನ ತಡೆಯಲು ಹೊರಟಿದ್ದು ಹಾಸ್ಯಾಸ್ಪದವೇ ಸರಿ.

ಸಂಘಪರಿವಾರದ ಹಿಡಿತದಲ್ಲಿರುವ ಮಾಧ್ಯಮಗಳು ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆ ನಡೆಯದಂತೆ ತಡೆಯುವುದಕ್ಕಾಗಿಯೇ ಈ ವದಂತಿಗಳನ್ನು ಹರಡುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. 11 ಗಂಟೆಯ ಬಳಿಕ ಕರ್ಫ್ಯೂ ವಿಧಿಸುವುದರ ಹಿಂದೆ ಇರುವ ಉದ್ದೇಶ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗೆ ಅಡ್ಡಿ ಪಡಿಸುವುದೇ ಆಗಿದೆ. ಕರ್ಫ್ಯೂವನ್ನು ಬಳಸಿಕೊಂಡು, ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸುವ ಸಂಚು ಕೂಡ ಇದರ ಹಿಂದಿತ್ತು. ಆದರೆ ರಾತ್ರಿ ಕರ್ಫ್ಯೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವ್ಯಂಗ್ಯಕ್ಕೀಡಾದುದರಿಂದ, ತನ್ನ ಮಾನ ಉಳಿಸಿಕೊಳ್ಳಲು ಕರ್ಫ್ಯೂವನ್ನು ಹಿಂದೆಗೆದುಕೊಂಡಿತು. ಇಲ್ಲಿರುವ ಆತಂಕವೆಂದರೆ, ಕೊರೋನ ಮತ್ತು ಕರ್ಫ್ಯೂ ಎರಡರ ಕುರಿತಂತೆಯೂ ಸರಕಾರ ಹಗುರವಾಗಿ ವರ್ತಿಸಿರುವುದು. ಹಗಲಲ್ಲಿ ಜನರಿಂದ ಜನರಿಗೆ ಹರಡುವ ಕೊರೋನವನ್ನು ರಾತ್ರಿ 11 ಗಂಟೆಯ ಬಳಿಕ ಕರ್ಫ್ಯೂ ವಿಧಿಸಿ ತಡೆಯಬಹುದು ಎಂಬ ಸರಕಾರಕ್ಕೆ ಮಾಹಿತಿ ನೀಡಿದವರು ಯಾರು? ದೇಶದಲ್ಲಿ ಸುಮಾರು ಎರಡು ತಿಂಗಳ ಕಾಲ ಹೇರಲಾಗಿದ್ದ ಲಾಕ್‌ಡೌನ್‌ನಿಂದ ಕೊರೋನವನ್ನು ಇಲ್ಲವಾಗಿಸಲು ಸಾಧ್ಯವಾಗಿಲ್ಲ ಎಂಬ ಸತ್ಯ ನಮಗೆಲ್ಲರಿಗೂ ಗೊತ್ತಿದೆ. ಇಂದು ಜನರು ಕೊರೋನಕ್ಕೆ ಹೆದರುತ್ತ್ಞಿಲ್ಲ. ಬದಲಿಗೆ ಲಾಕ್‌ಡೌನ್‌ಗಳಿಗೆ ಹೆದರುತ್ತಿದ್ದಾರೆ. ಈ ದೇಶದಲ್ಲಿ ನೇರವಾಗಿ ಕೊರೋನದಿಂದ ಸತ್ತವರ ಸಂಖ್ಯೆ ತೀರಾ ಕಡಿಮೆ. ಕೊರೋನವನ್ನು ಮುಂದಿಟ್ಟು, ಇತರ ರೋಗಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಇರುವುದೇ ಹೆಚ್ಚಿನ ಸಾವುಗಳಿಗೆ ಕಾರಣ. ಹಾಗೆಯೇ ಲಾಕ್‌ಡೌನ್ ಕಾರಣದಿಂದಾಗಿ ಹಸಿವೆಯಿಂದ ಸತ್ತವರಿದ್ದಾರೆ. ಉದ್ಯಮಗಳಲ್ಲಿ ನಷ್ಟವಾಗಿ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ.

ಲಾಕ್‌ಡೌನ್ ಹೇರುವ ಮೊದಲು ಇದೇ ಟಿವಿ ಚಾನೆಲ್‌ಗಳು, ಮುಂದಿನ ದಿನಗಳಲ್ಲಿ ಕೊರೋನ ಸೋಂಕಿನಿಂದ ರಸ್ತೆಯಲ್ಲಿ ಸಾಲು ಸಾಲು ಹೆಣಗಳು ಬೀಳಲಿವೆ ಎಂದು ಜನರನ್ನು ಭೀತಿಗೀಡು ಮಾಡಿದ್ದವು. ವಿಪರ್ಯಾಸವೆಂದರೆ, ಬೀದಿಯಲ್ಲಿ ವಾಸಿಸುವ ನಿರ್ವಸಿತರು, ಭಿಕ್ಷುಕರು, ಬೀದಿ ಗುಡಿಸುತ್ತಾ ಬದುಕು ಕಟ್ಟಿಕೊಳ್ಳುವವರನ್ನು ಈ ಕೊರೋನ ಏನೂ ಮಾಡಿಲ್ಲ. ಒಂದು ವೇಳೆ ಕೊರೋನ ಮಾರಣಾಂತಿಕ ರೋಗವೇ ಆಗಿದ್ದರೆ ಬೀದಿಯಲ್ಲಿ ಹೆಣಗಳ ಸಾಲೇ ಇರಬೇಕಾಗಿತ್ತು. ಕೊರೋನಕ್ಕೆ ಲಸಿಕೆ ಕಂಡು ಹಿಡಿಯದೇ ಇದ್ದರೂ, ಕೋಟ್ಯಂತರ ಕೊರೋನ ಸೋಂಕಿತರು ಗುಣವಾಗಿದ್ದಾರೆ. ಪ್ಲೇಗ್, ಮಂಗನ ಕಾಯಿಲೆಯಂತಹ ರೋಗಗಳಿಗೆ ಹೋಲಿಸಿದರೆ ಇದೊಂದು ರೋಗವೇ ಇಲ್ಲ. ಇಂತಹ ಒಂದು ಸೋಂಕನ್ನು ಮುಂದಿಟ್ಟು ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಕೆಲವು ಟಿವಿ ಚಾನೆಲ್‌ಗಳ ಬಾಯಿಗೆ ಮೊದಲು ಕರ್ಫ್ಯೂ ವಿಧಿಸಬೇಕಾಗಿದೆ. ಕೊರೋನ ಲಸಿಕೆಗಾಗಿ ಈಗಾಗಲೇ ಬೃಹತ್ ಉದ್ಯಮಿಗಳು ಕೋಟ್ಯಂತರ ರೂಪಾಯಿ ಚೆಲ್ಲುತ್ತಿದ್ದಾರೆ. ಇವರು ಹೂಡಿದ ಹಣ ವಾಪಸ್ ಬರಬೇಕಾದರೆ ಕೊರೋನ ಕುರಿತ ಆತಂಕ ಮುಂದುವರಿಯಲೇ ಬೇಕಾಗಿದೆ.ಆದುದರಿಂದಲೇ, ಔಷಧಿ ಕಂಡುಹುಡುಕಿ ಮುಗಿಯುವವರೆಗೆ ಈ ಕೊರೋನ ವದಂತಿಗಳು ನಿಲ್ಲುವುದಿಲ್ಲ ಎನ್ನುವುದನ್ನು ಅರಿತು, ಜನಸಾಮಾನ್ಯರು ನಿರಾಳವಾಗಬೇಕಾಗಿದೆ. ಅನಗತ್ಯ ಲಾಕ್‌ಡೌನ್, ಕರ್ಫ್ಯೂಗಳನ್ನು ಹೇರಿ ಸರಕಾರ ಮತ್ತೊಮ್ಮೆ ಜನರ ಬದುಕನ್ನು ನರಕ ಮಾಡಬಾರದು. ಈ ಹಿಂದಿನಂತೆ ಅದನ್ನು ತಡೆಯುವ ಶಕ್ತಿಯೂ ಜನಸಾಮಾನ್ಯರಿಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News