ಬ್ರಿಟನ್‌ನಿಂದ ಕೇರಳಕ್ಕೆ ಹಿಂದಿರುಗಿದ 8 ಮಂದಿಗೆ ಕೊರೋನ ಪಾಸಿಟಿವ್

Update: 2020-12-26 14:07 GMT

ತಿರುವನಂತಪುರ, ಡಿ. 26: ಬ್ರಿಟನ್‌ನಿಂದ ಇತ್ತೀಚೆಗೆ ಕೇರಳಕ್ಕೆ ಹಿಂದಿರುಗಿದ 8 ಮಂದಿಯ ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ.

ಕೊರೋನ ವೈರಸ್‌ನ ವಂಶವಾಹಿ ರೂಪಾಂತರದ ಬಗ್ಗೆ ಪರೀಕ್ಷೆ ನಡೆಸಲು ಈ 8 ಮಂದಿಯ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಿ ಕೊಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ. ಬ್ರಿಟನ್‌ನಿಂದ ಆಗಮಿಸಿದ ಈ 8 ಮಂದಿಯ ಕೊರೋನ ಪರೀಕ್ಷೆ ಪಾಸಿಟಿವ್ ಬಂದಿದೆ. ಅವರ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಿ ಕೊಡಲಾಗಿದೆ. ಅಲ್ಲಿನ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಒಂದು ವೇಳೆ ವೈರಸ್‌ನ ವಂಶವಾಹಿನಿಯಲ್ಲಿ ರೂಪಾಂತರ ಕಂಡು ಬಂದರೆ, ಅದು ತುಂಬಾ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬ್ರಿಟನ್‌ನಿಂದ ಹಿಂದಿರುಗಿದವರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ ಎಂದು ಶೈಲಜಾ ಹೇಳಿದ್ದಾರೆ.

ಕಳೆದೆರಡು ದಿನಗಳಿಂದ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ತುಸು ಏರಿಕೆಯಾಗಿದೆ. ಇತ್ತೀಚೆಗೆ ಸ್ಥಳೀಯಾಡಳಿತದ ಚುನಾವಣೆ ನಡೆದ ಬಳಿಕ, ಕೊರೋನ ಪ್ರಕರಣದಲ್ಲಿ ತೀವ್ರ ಏರಿಕೆಯಾಗಬಹುದು ಎಂದು ಆರೋಗ್ಯ ಇಲಾಖೆಗೆ ಆತಂಕಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News